AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿ: ಗಿರಿಜನ ಆಶ್ರಮ ಶಾಲೆಗೆ ಸರ್ಕಾರದಿಂದ ಪೂರೈಕೆಯಾದ ಆಹಾರ ಧಾನ್ಯಗಳಲ್ಲಿ ರಾಶಿ ರಾಶಿ ಹುಳು ಪತ್ತೆ

ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಜಿ.ಪಂ ವ್ಯಾಪ್ತಿಯ ದಿಡ್ಡಳ್ಳಿ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಆಹಾರದಲ್ಲಿ ಹುಳುಗಳ ರಾಶಿ ಪತ್ತೆಯಾಗಿದೆ. ಆಹಾರ ಇಲಾಖೆಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಅಕ್ಕಿ, ಗೋಧಿ ಮತ್ತಿತರ ಆಹಾರಧಾನ್ಯಗಳನ್ನು ಪೂರೈಸುವ ಗುತ್ತಿಗೆದಾರರು ಹುಳುಗಳಿರುವ ಕಳಪೆ ಗುಣಮಟ್ಟದ ಧಾನ್ಯಗಳನ್ನು ವಿತರಿಸುತ್ತಿದ್ದಾರೆ.

ಮಡಿಕೇರಿ: ಗಿರಿಜನ ಆಶ್ರಮ ಶಾಲೆಗೆ ಸರ್ಕಾರದಿಂದ ಪೂರೈಕೆಯಾದ ಆಹಾರ ಧಾನ್ಯಗಳಲ್ಲಿ ರಾಶಿ ರಾಶಿ ಹುಳು ಪತ್ತೆ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: Oct 09, 2023 | 12:19 PM

Share

ಮಡಿಕೇರಿ, ಅ.09: ಕೊಡಗಿನ ಗಿರಿಜನ ಆಶ್ರಮ ಶಾಲೆಗೆ ಸರಬರಾಜು ಮಾಡುವ ಆಹಾರಧಾನ್ಯಗಳಲ್ಲಿ ಹುಳುಗಳು (Weevils) ಪತ್ತೆಯಾಗಿವೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಜಿ.ಪಂ ವ್ಯಾಪ್ತಿಯ ದಿಡ್ಡಳ್ಳಿ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ (Diddalli Basavanahalli Ashram School) ಆಹಾರದಲ್ಲಿ ಹುಳುಗಳ ರಾಶಿ ಇರುವುದು ಪತ್ತೆಯಾಗಿದೆ. ಆಹಾರ ಇಲಾಖೆಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಅಕ್ಕಿ, ಗೋಧಿ ಮತ್ತಿತರ ಆಹಾರಧಾನ್ಯಗಳನ್ನು ಪೂರೈಸುವ ಗುತ್ತಿಗೆದಾರರು ಹುಳುಗಳಿರುವ ಕಳಪೆ ಗುಣಮಟ್ಟದ ಧಾನ್ಯಗಳನ್ನು ವಿತರಿಸುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ.

ಕೆಲ ದಿನಗಳಿಂದ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದ ವಿದ್ಯಾರ್ಥಿಗಳನ್ನು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗಿರಿಜನ ಮುಖಂಡ ಜೆ.ಕೆ.ಅಪ್ಪಾಜಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆಹಾರ ಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಲು ಶಾಲೆಗೆ ಭೇಟಿ ನೀಡಿದ ಅವರು, ಧಾನ್ಯ ಸಂಗ್ರಹ ಕೊಠಡಿಯಲ್ಲಿನ ಧಾನ್ಯಗಳಲ್ಲಿ ಹುಳುಗಳು ಇರುವುದನ್ನು ಪತ್ತೆ ಮಾಡಿದ್ದಾರೆ.

ಇನ್ನು ಧಾನ್ಯ ಸಂಗ್ರಹ ಕೊಠಡಿಯ ಗೋಡೆಗಳ ಮೇಲೆ ರಾಶಿ ರಾಶಿ ಹುಳುಗಳು ಓಡಾಡುತ್ತಿರುವುದು ಕಂಡು ಬಂದಿದೆ. ಗುತ್ತಿಗೆದಾರರು ನಾಲ್ಕಾರು ತಿಂಗಳಿಗೊಮ್ಮೆ ಆಹಾರಧಾನ್ಯ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಇಲಾಖೆಗೆ ತಿಳಿಸಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಇದನ್ನೂ ಓದಿ: ಅ.30ರಿಂದ ರಾಜ್ಯಾದ್ಯಂತ ದತ್ತಮಾಲೆ ಅಭಿಯಾನ; 7 ಪ್ರಮುಖ ಬೇಡಿಕೆ ಮುಂದಿಟ್ಟ ಶ್ರೀರಾಮಸೇನೆ

ಮತ್ತೊಂದೆಡೆ ಇದರಿಂದ ಮಕ್ಕಳು ಶಾಲೆಗೆ ಹೋಗಲು ಭಯಪಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಗುಣಮಟ್ಟದ ಆಹಾರಧಾನ್ಯ ವಿತರಿಸುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಎಚ್ಚರಿಸಿದರು. ಸ್ಥಳಕ್ಕೆ ಬಂದ ಸಮಗ್ರ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯ ಅಧಿಕಾರಿ ಹೊನ್ನೇಗೌಡ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನವೀನ್, ಗುಣಮಟ್ಟದ ಆಹಾರಧಾನ್ಯ ವಿತರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಮಾಲ್ದಾರೆ ಜಿ.ಪಂ.ಮಾಜಿ ಸದಸ್ಯೆ ಹಾಗೂ ಗಿರಿಜನ ಮುಖಂಡರಾದ ಇಂದಿರಾ ಅವರು ಈ ಬಗ್ಗೆ ಮಾತನಾಡಿ, ಗಿರಿಜನ ಮಕ್ಕಳ ಶಿಕ್ಷಣಕ್ಕಾಗಿ ಆಶ್ರಮ ಶಾಲೆ ತೆರೆಯಲಾಗಿದೆ. ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡದೆ, ಹುಳುಗಳು ತುಂಬಿರುವ ಆಹಾರವನ್ನು ನೀಡುವುದು ಒಳ್ಳೆಯದಲ್ಲ. ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಆರೋಗ್ಯ ಇಲಾಖೆ ತಿಂಗಳಿಗೊಮ್ಮೆ ಶಾಲೆಗೆ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಕೊಡಗಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ