ಅಣ್ಣವ್ರ ಸನಾದಿ ಅಪ್ಪಣ್ಣ ಸಿನಿಮಾದ ಪ್ರೇರಣೆಗೊಂಡು ಮೂಗಿನಲ್ಲೇ ಶಹನಾಯ್​ ನುಡಿಸುವ ಯುವ ಕಲಾವಿದ

| Updated By: Rakesh Nayak Manchi

Updated on: Nov 05, 2022 | 2:23 PM

ಡಾ.ರಾಜ್​ ಕುಮಾರ್ ಅವರ ಸನಾದಿ ಅಪ್ಪಣ್ಣ ಸಿನಿಮಾದಿಂದ ಪ್ರೇರೇಪಣೆ ಪಡೆದುಕೊಂಡಿದ್ದ ಯುವಕ, ಶಹನಾಯ್​ ಕಲಿತನು. ನಂತರ ನನ್ನ ಮೂಗನ್ನೇ ಯಾಕೆ ಶಹನಾಯ್ ಮಾಡಿಕೊಳ್ಳಬಾರದೆಂದು ಯೋಚಿಸಿ ಅಭ್ಯಾಸ ಮಾಡಿ ಇದೀಗ ರಾಜ್ಯಾದ್ಯಂತ ಸುದ್ದು ಮಾಡುತ್ತಿದ್ದಾನೆ.

ಅಣ್ಣವ್ರ ಸನಾದಿ ಅಪ್ಪಣ್ಣ ಸಿನಿಮಾದ ಪ್ರೇರಣೆಗೊಂಡು ಮೂಗಿನಲ್ಲೇ ಶಹನಾಯ್​ ನುಡಿಸುವ ಯುವ ಕಲಾವಿದ
ಮೂಗಿನಲ್ಲೇ ಶಹನಾಯ್​ ನುಡಿಸುವ ಕಲಾವಿದ ಪ್ರೇಮ್ ಕುಮಾರ್
Follow us on

ಕೋಲಾರ: ತನ್ನ ಮೂಗಿನಲ್ಲೇ ಶಹನಾಯ್​ ರೀತಿಯಲ್ಲಿ ಹಾಡುಗಳನ್ನು ನುಡಿಸುತ್ತಿರುವ ಯುವ ಕಲಾವಿದ ಪ್ರೇಮ್ ಕುಮಾರ್, ಕಾಂತಾರಾ ಸಿನಿಮಾ, ಪುನಿತ್​ ರಾಜ್​ಕುಮಾರ್ ಅಭಿನಯದ​ ಗೊಂಬೆ ಹೇಳುತೈತೆ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಹಾಡುಗಳನ್ನು ತನ್ನ ಮೂಗಿನಲ್ಲೇ ನುಡಿಸುತ್ತಾರೆ. ಇನ್ನೊಂದುಕಡೆ ಪ್ರಖ್ಯಾತ ಕಲಾವಿದರ, ಸಾಧಕರ ಧ್ವನಿಯನ್ನು ಮಿಮಿಕ್ರಿ ಮಾಡುತ್ತಿದ್ದಾರೆ. ಈ ಸಾಧನೆಯನ್ನು ಮಾಡುತ್ತಿರುವ ಪ್ರೇಮ್ ಕುಮಾರ್ ಕೋಲಾರ ನಗರದ ಗಾಂಧಿನಗರದವನಾಗಿದ್ದಾರೆ. ಚಂದ್ರಶೇಖರ್ ಎಂಬುವರ ಮಗನಾಗಿರುವ ಇವರು, ಸದ್ಯ ವಿಭಿನ್ನ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ತಾನೊಬ್ಬ ವಿಭಿನ್ನ ಕಲಾವಿದನಾಗಿ ಗುರುತು ಮಾಡಿಕೊಳ್ಳುತ್ತಿದ್ದಾರೆ.

ಡಿಪ್ಲಮೋ ವ್ಯಾಸಾಂಗ ಮಾಡಿಕೊಂಡಿರುವ ಪ್ರೇಮ್​ ಕುಮಾರ್ ಹವಲು ವರ್ಷಗಳ ಹಿಂದೆ ಸನಾದಿ ಅಪ್ಪಣ್ಣ ಸಿನಿಮಾದಲ್ಲಿ ಡಾ.ರಾಜ್​ ಕುಮಾರ್​ ಅವರು ಶಹನಾಯ್​ ನುಡಿಸುವ ದೃಷ್ಯಗಳನ್ನು ನೋಡಿದ್ದರು. ಇದರಿಂದ ಪ್ರೇರೇಪಿತರಾದ ಪ್ರೇಮ್​ ಕುಮಾರ್​ ತಾನು ತನ್ನ ಮೂಗಿನಿಂದಲೇ ಆ ರೀತಿಯ ಸದ್ದು ಮಾಡಬೇಕು ಅಂತ ಯೋಚಿಸಿದರು. ಅದರಂತೆ ಅದಕ್ಕೆ ಬೇಕಾದ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡು ಅಬ್ಯಾಸ ಮಾಡಿದ ಪ್ರೇಮ್​ ಕುಮಾರ್​ ಶಹನಾಯ್​ ರೀತಿಯಲ್ಲಿ ತನ್ನ ಮೂಗಿನಿಂದ ಸದ್ದು ಮಾಡೋದನ್ನ ಅಬ್ಯಾಸ ಮಾಡಿದ್ದಾರೆ. ನಿಧಾನವಾಗಿ ಮೂಗಿನಲ್ಲಿ ಹೆಹನಾಯ್ ನುಡಿಸುವುದನ್ನು ಕರಗತ ಮಾಡಿಕೊಂಡರು.

ನಂತರ ಸಿನಿಮಾ ಚಿತ್ರದ ಹಾಡುಗಳನ್ನು ಹಾಗೂ ದೇವರ ಭಕ್ತಿಗೀತೆಗಳನ್ನು ನುಡಿಸುವುದನ್ನ ಅಬ್ಯಾಸ ಮಾಡಿಕೊಂಡ ಪ್ರೇಮ್ ಇದೀಗ ಎಲ್ಲೆಡೆ ಗಮನ ಸೆಳೆಯುತ್ತಿದ್ದಾರೆ. ಪ್ರೇಮ್​ ಕುಮಾರ್​ ಕೇವಲ ಮೂಗಿನಲ್ಲಿ ಶಹನಾಯ್​ ರೀತಿಯಲ್ಲಿ ನುಡಿಸುವುದಷ್ಟೇ ಅಲ್ಲದೆ ರಾಜ್ಯದ ಶಂಕರ್​ನಾಗ್​, ರವಿಬೆಳೆಗೆರೆ, ಹೀಗೂಉಂಟೆ ನಾರಾಯಣಸ್ವಾಮಿ, ದಿನೇಶ್​ ಸೇರಿದಂತೆ ಹಲವು ಪ್ರಖ್ಯಾತ ನಟರ ವಾಯ್ಸ್​ಗಳನ್ನು ಕೂಡ ಮಿಮಿಕ್ರಿ ಮಾಡುತ್ತಾರೆ.

ಆರಂಭದಲ್ಲಿ ಪ್ರೇಮ್​ ಕುಮಾರ್​ಗೆ ತನ್ನ ಕಲೆಯನ್ನು ಪ್ರದರ್ಶನ ಮಾಡಲು ಯಾವುದೇ ವೇದಿಕೆಗಳು ಸಿಗುತ್ತಿರಲಿಲ್ಲ. ಆಗ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು, ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ತಾನಾಗಿ ತಾನೇ ಹೋಗಿ ಕಾರ್ಯಕ್ರಮಗಳನ್ನು ಕೊಟ್ಟು ಬರುತ್ತಿದ್ದರಂತೆ, ಅದಾದ ನಂತರದಲ್ಲಿ ಪ್ರೇಮ್​ ಕುಮಾರ್ ಅವರ ಕೆಲವೊಂದು ಕಲೆಯನ್ನು ಗುರುತಿಸಿದ ನಂತರದಲ್ಲಿ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಕೊಡಲು ಅವಕಾಶ ಸಿಕ್ಕಿದೆ.

ಕಳೆದ ಐದಾರು ವರ್ಷಗಳಿಂದ ತನ್ನ ಓದಿನ ಜೊತೆ ಜೊತೆಗೆ ಪ್ರೇಮ್​ ಕುಮಾರ್​ ವೇದಿಕೆಗಳಲ್ಲಿ ತನ್ನ ಮೂಗಿನಿಂದ ಶಹನಾಯ್​ ರೀತಿಯಲ್ಲಿ ನುಡಿಸುವುದು, ಮಿಮಿಕ್ರಿ ಮಾಡುವ ಮೂಲಕ ಎಲ್ಲೆಡೆ ಗಮನ ಸೆಳೆಯುತ್ತಿದ್ದಾರೆ. ಸದ್ಯ ಪ್ರೇಮ್​ ಕುಮಾರ್​ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂದು ಬಯಸುತ್ತಿದ್ದ ತಂದೆ ತಾಯಿ ಪೊಷಕರು ಕೂಡಾ ಪ್ರೇಮ್​ ಕುಮಾರ್​ ಆಸಕ್ತಿ ನೋಡಿ ಅವನೊಬ್ಬ ಕಲಾವಿದನಾಗಿ ಬೆಳೆಯಲಿ ಎಂದು ಅವರು ಕೂಡಾ ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರೇಮ್​ ಕುಮಾರ್ ತನ್ನ ಮೂಗಿನ ಮೂಲಕ ನಿರಂತರವಾಗಿ ಶಹನಾಯ್​ ರೀತಿ ಹಾಡುಗಳನ್ನು ಹಾಡುವ ಕಲೆಯನ್ನು ಸದ್ಯ ಬುಕ್​ ಆಫ್​ ರೆಕಾರ್ಡ್​ನಲ್ಲೂ ಸೇರಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಮಗನ ಈ ವಿಭಿನ್ನ ಸಾಧನೆಯನ್ನು ಕಂಡ ಪೊಷಕರು ಕೂಡಾ ಮಗನಿಗೆ ಸಹಕಾರ ನೀಡುವ ಜೊತೆಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ಒಬ್ಬೊಬ್ಬರಲ್ಲಿ ಒಂದೊಂದು ಕಲೆ ಇರುತ್ತದೆ. ಅದು ಅವಕಾಶಗಳು ಸಿಕ್ಕಾಗ ಮಾತ್ರವೇ ಹೊರಬರುತ್ತವೆ ಅನ್ನೋದಕ್ಕೆ ಸದ್ಯ ಪ್ರೇಮ್​ ಕುಮಾರ್​ ಸಾಕ್ಷಿಯಾಗಿ ನಿಲ್ಲುತ್ತಾರೆ, ಪ್ರೇಮ್​ ಕುಮಾರ್​ಗೆ ಇನ್ನಷ್ಟು ಪ್ರೋತ್ಸಾಹ ಹಾಗೂ ಅವಕಾಶಗಳು ಸಿಕ್ಕಿದ್ದೇ ಆದಲ್ಲಿ ಮತ್ತಷ್ಟು ಉತ್ತಮ ಕಲಾವಿದನಾಗೋದರಲ್ಲಿ ಯಾವುದೇ ಅನುಮಾನವಿಲ್ಲ.

ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ