ಆರ್ಎಸ್ಎಸ್ ಕಂಟ್ರೋಲ್ನಲ್ಲಿ ಈ ಸರ್ಕಾರ ನಡೆಯುತ್ತಿದೆ, ಬೊಮ್ಮಾಯಿ ಸಾಹೇಬರ ಕೈಯಲ್ಲೇನಿಲ್ಲ: ಪ್ರಿಯಾಂಕ್ ಖರ್ಗೆ
ಬೊಮ್ಮಾಯಿ ಸಾಹೇಬರ ಕಂಟ್ರೋಲ್ನಲ್ಲಿ ಈ ಸರ್ಕಾರ ಇಲ್ಲ. ಕೇಶವಕೃಪ ಕಂಟ್ರೋಲ್ನಲ್ಲಿ ಈ ಸರ್ಕಾರ ನಡೆಯುತ್ತಿದೆ ಎಂದು ನಗರದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದರು.
ಬೆಂಗಳೂರು: ಬೊಮ್ಮಾಯಿ ಸಾಹೇಬರ ಕಂಟ್ರೋಲ್ನಲ್ಲಿ ಈ ಸರ್ಕಾರ ಇಲ್ಲ. ಕೇಶವಕೃಪ ಕಂಟ್ರೋಲ್ನಲ್ಲಿ ಈ ಸರ್ಕಾರ ನಡೆಯುತ್ತಿದೆ ಎಂದು ನಗರದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದರು. ಅವರ ಕಂಟ್ರೋಲ್ನಲ್ಲಿ ಇದ್ದಿದ್ದರೆ ಸ್ಪಂದಿಸುತ್ತಿದ್ದರು. ಕ್ಯಾಬಿನೆಟ್ ಸಹ ಸಿಎಂ ಬೊಮ್ಮಾಯಿ ಕಂಟ್ರೋಲ್ನಲ್ಲಿ ಇಲ್ಲ. ಆರ್ಎಸ್ಎಸ್ ಕಂಟ್ರೋಲ್ನಲ್ಲಿ ಎಲ್ಲ ನಡೆಯುತ್ತಿದೆ. ಸುಧಾಕರ್ಗೆ ಸ್ವಲ್ಪವೂ ಮಾನವೀಯತೆ ಇಲ್ಲ. ಈ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿದೆ. ಬಿಮ್ಸ್ ಸಾವು ಪ್ರಕರಣ, ಕೋವಿಡ್ ಪ್ರಕರಣ ಎಲ್ಲ ನಡೆದರೂ ಸುಧಾಕರ ರಾಜೀನಾಮೆ ಕೊಡಬೇಕಿತ್ತು. ಇಂಥವರು ರಾಜೀನಾಮೆ ಕೊಡುತ್ತಾರೆ ಈಗ ಅಂತ ನಿರೀಕ್ಷೆ ಮಾಡಬಹುದಾ? ಮೂರು ವರ್ಷದಲ್ಲಿ ಏನು ನಿಮ್ಮ ಸಾಧನೆ ಎಂದು ಕಿಡಿಕಾರಿದರು.
ಸಸ್ಪೆಂಡ್ ಮಾಡಿದರೆ ಸಾಲದು ವೈದ್ಯರ ಲೈಸೆನ್ಸ್ ರದ್ದು ಮಾಡಬೇಕು: ಪ್ರಿಯಾಂಕ್ ಖರ್ಗೆ
ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಶಿಶುಗಳ ಸಾವು ಕೇಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು. ಸರ್ಕಾರ ಮಾನವೀಯತೆ ಕಳೆದುಕೊಂಡಿದೆ. ಬಿಜೆಪಿ ನಾಯಕರಿಗೆ ದುಡ್ಡು ಗಳಿಸುವುದು ಮಾತ್ರ ಗೊತ್ತಿದೆ. PSI ಅಭ್ಯರ್ಥಿಗಳು ಸಚಿವರ ಬಳಿ ಹೋದರೆ DySP ಹೊಡೀತಾರೆ. ಆಸ್ಪತ್ರೆಯಲ್ಲಿ ದುಡ್ಡು ಕೊಡಿ ಅಂತಾ ಹಿಂಸೆ ಕೊಟ್ಟು ಹೊರ ಹಾಕುತ್ತಾರೆ. ತುಮಕೂರಿನಲ್ಲಿ ನಡೆದ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ. ಸಸ್ಪೆಂಡ್ ಮಾಡಿದರೆ ಸಾಲದು ವೈದ್ಯರ ಲೈಸೆನ್ಸ್ ರದ್ದು ಮಾಡಬೇಕು. ದುಡ್ಡು ಪಡೆದು ಪೋಸ್ಟಿಂಗ್ ಆಗುತ್ತಿರುವುದಕ್ಕೆ ಹೀಗೆ ಆಗುತ್ತಿದೆ. ಚಾಮರಾಜನಗರದಲ್ಲೂ ದಾಖಲೆ ತಿದ್ದಿ ಯಾರೂ ಸತ್ತಿಲ್ಲ ಅಂದರು. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗೆ ಈವರೆಗೆ 21 ಜನ ಸತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ನಿಮ್ಮ ಸರ್ಕಾರದಲ್ಲಿ ಸತ್ತಿಲ್ವಾ ಅಂತಾರೆ ಎಂದು ಹೇಳಿದರು.
ಘಟನೆ ಹಿನ್ನೆಲೆ:
ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ (death) ಯಾಗಿರುವಂತಹ ಘಟನೆ ಜಿಲ್ಲೆಯ ಭಾರತಿನಗರದ ಆಂಜನೇಯ ದೇಗುಲ ಬಳಿ ನಡೆದಿದೆ. ಬಾಣಂತಿ ಕಸ್ತೂರಿ(30), ಅವಳಿ ಮಕ್ಕಳು ಮೃತಪಟ್ಟಿದ್ದಾರೆ. ತಮಿಳುನಾಡು ಮೂಲದ ಕಸ್ತೂರಿ 1 ತಿಂಗಳಿಂದ ಓರ್ವ ಪುತ್ರಿ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗರ್ಭಿಣಿ ಕಸ್ತೂರಿಗೆ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರು ಆಟೋದಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲವೆಂದು ದಾಖಲಿಸಿಕೊಳ್ಳಲು ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದು, ನಾವು ಚಿಕಿತ್ಸೆ ನೀಡಲ್ಲ ಎಂದು ವೈದ್ಯರು ಕೂಡ ನಿರಾಕರಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸಿಬ್ಬಂದಿ ಹೇಳಿದ್ದು, ಬೆಂಗಳೂರಿಗೆ ತೆರಳಲು ಹಣವಿಲ್ಲದೆ ಕಸ್ತೂರಿ ಮನೆಗೆ ಹಿಂದಿರುಗಿದ್ದರು.
ನ.3ರಂದು ಮುಂಜಾನೆ ಒಂದು ಮಗುವಿಗೆ ಜನ್ಮ ನೀಡಿದ್ದು, ಮತ್ತೊಂದು ಮಗುವಿಗೆ ಜನ್ಮನೀಡುವಾಗ ರಕ್ತಸ್ರಾವವಾಗಿ ಅವಳಿ ಗಂಡು ಮಕ್ಕಳು, ತಾಯಿ ಕಸ್ತೂರಿ(30) ಸಾವನ್ನಪ್ಪಿದ್ದರು. ತಾಯಿ, ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯರೇ ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ತುಮಕೂರಿನ ಎನ್ಇಪಿಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:14 pm, Sat, 5 November 22