ದೆಹಲಿ ಮಾಡೆಲ್ ಕಿಡ್ನಾಪ್, ಬೆಂಗಳೂರು ಪೊಲೀಸರ ಕ್ವಿಕ್ ರೆಸ್ಪಾನ್ಸ್: ನೂರಾರು ಸಿಸಿಟಿವಿ ಪರಿಶೀಲನೆ! ಆದ್ರೆ ನಡೆದಿದ್ದೇ ಬೇರೆ
ಬರೋಬ್ಬರಿ ನೂರಕ್ಕೂ ಅಧಿಕ ಸಿಸಿಟಿವಿಗಳನ್ನ ಪರಿಶೀಲಿಸಿದ ಪೊಲೀಸರು, ಒಂದು ಸ್ಕೂಟರ್ ನಂಬರ್ ಟ್ರ್ಯಾಕ್ ಮಾಡಿ ಕೊನೆಗೂ ಯುವತಿ ಪತ್ತೆ ಮಾಡಿದ್ದಾರೆ. ಯುವತಿಯ ಹೆಸರು ಅಮೃತ ಎಂದು ತಿಳಿದುಬಂದಿದ್ದು ದೆಹಲಿ ಮೂಲದ ಮಾಡೆಲ್ ಎಂಬುದು ಪತ್ತೆಯಾಗಿದೆ.
ಬೆಂಗಳೂರು: ಜಾಗೃತ ನಾಗರೀಕ ಹಾಗೂ ಇದು ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯವೈಖರಿಗೆ ಉತ್ತಮ ನಿದರ್ಶನ. ಯುವತಿಯೊಬ್ಬಳ ಅಪಹರಣವನ್ನ ಕಣ್ಣಾರೆ ಕಂಡೆ ಅಂತಾ ವ್ಯಕ್ತಿಯೊಬ್ಬ 112ಗೆ ಮಾಡಿದ ಕರೆ ಆಧರಿಸಿ ತ್ವರಿತ ಕಾರ್ಯಾಚರಣೆ ಕೈಗೊಂಡ ಪೊಲೀಸರು ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಘಟನೆ ನಿನ್ನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ ?
ನಿನ್ನೆ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿದ್ದ ಶೇಖರ್ ಎಂಬಾತ ‘ಯಾರೋ ಒಬ್ಬ ಬಾಣಸವಾಡಿಯ ಸುಬ್ಬಯ್ಯನಪಾಳ್ಯ ರಸ್ತೆಯಲ್ಲಿ ಯುವತಿಯೊಬ್ಬಳನ್ನ ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದಾನೆ’ ಎಂದಿದ್ದ.ಆದರೆ ಆ ಯುವತಿ ಯಾರು,ಆಕೆಯ ಹಿನ್ನಲೆ ಏನು ಎಂಬ ಮಾಹಿತಿಯೇ ಇರಲಿಲ್ಲ. ಮಾಹಿತಿಯಿಲ್ಲದಿದ್ದರೂ ಸಹ ನಿರ್ಲಕ್ಷ್ಯಿಸದೇ ಕೂಡಲೇ ಕಾರ್ಯಪ್ರವೃತ್ತರಾದ ಬಾಣಸವಾಡಿ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳು ಕಾರ್ಯಾಚರಣೆಗಿಳಿದಿದ್ದವು. ಆರಂಭದಲ್ಲಿ ಘಟನಾ ಸ್ಥಳದಲ್ಲಿದ್ದ ಸ್ಕೂಟರ್ ನಂಬರ್ ಪರಿಶೀಲಿಸಿದಾಗ ಅದು ಶಿವಮೊಗ್ಗದ ವಿನೋಭಾ ನಗರದ ವಿಳಾಸದಲ್ಲಿರುವುದು ಪತ್ತೆಯಾಗಿದೆ. ಶಿವಮೊಗ್ಗದ ಪೊಲೀಸರ ಸಹಾಯದಿಂದ ಅಲ್ಲಿನ ಸ್ಥಳೀಯ ವಿಳಾಸದಲ್ಲಿ ಪರಿಶೀಲಿಸಿದಾಗ ಆ ಸ್ಕೂಟರ್ ಮಾಲೀಕರು ಎರಡು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಶಿಫ್ಟ್ ಆಗಿರುವುದು ಪತ್ತೆಯಾಗಿದೆ. ಬಳಿಕಆಕೆಯ ನಂಬರ್ ಪಡೆದು ಕರೆ ಮಾಡಿದಾಗ ಆಕೆ ಮನೆಯಲ್ಲೇ ಇರೋದು ಪತ್ತೆಯಾಗಿತ್ತು. ಆದ್ರೆ ಅದೇ ಮನೆಯಲ್ಲಿದ್ದ ಮತ್ತೊಬ್ಬಾಕೆ ಬೆಳಿಗ್ಗೆಯೇ ಊರಿಗೆ ಹೋಗುವುದಾಗಿ ಹೊರಟಿದ್ದಳು ಎಂಬುದರ ಮಾಹಿತಿ ಪಡೆದ ಪೊಲೀಸರು ಆಕೆಯ ನಂಬರ್ ಪಡೆದು ಪರಿಶೀಲನೆ ಆರಂಭಿಸಿದ್ದಾರೆ. ಆದ್ರೆ ಮತ್ತೊಬ್ಬಾಕೆಯೂ ಸಹ ಕಾಕ್ಸ್ ಟೌನ್ ನ ಸ್ನೇಹಿತರ ಮನೆಯಲ್ಲಿರುವುದು ಖಚಿತವಾಗಿದೆ. ಬಳಿಕ ಬರೋಬ್ಬರಿ ನೂರಕ್ಕೂ ಅಧಿಕ ಸುತ್ತಮುತ್ತಲಿನ ಏರಿಯಾಗಳ ಸಿಸಿಟಿವಿಗಳ ಪರಿಶೀಲನೆಯ ಜೊತೆ ಸುತ್ತಮುತ್ತಲಿನ ಮನೆಗಳಲ್ಲಿ ಪರಿಶೀಲಿಸಿದಾಗ ಕೊನೆಗೂ ಅಸಲಿ ಯುವತಿ ಪತ್ತೆಯಾಗಿದ್ದಾಳೆ.
ಯುವತಿಯ ಹೆಸರು ಅಮೃತ, ದೆಹಲಿ ಮೂಲದ ಮಾಡೆಲ್ ಎಂಬುದು ಬೆಳಕಿಗೆ ಬಂದಿದೆ. ಅಸಲಿಗೆ ನಿನ್ನೆ ಬೆಳಿಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಸ್ನೇಹಿತನ ಮನೆಯಿಂದ ಹೊರಟಿದ್ದ ಅಮೃತಾ ಲೋ ಶುಗರ್ ನಿಂದ ಬಳಲಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯ ಸ್ನೇಹಿತ ಎತ್ತಿಕೊಂಡು ಕಾರಲ್ಲಿ ಕರೆದೊಯ್ದು ಮನೆಗೆ ಬಿಟ್ಟು ಬಂದಿದ್ದಾನೆ. ಇದನ್ನ ಗಮನಿಸಿದ್ದ ಶೇಖರ್ 112 ಗೆ ಕರೆ ಮಾಡಿ ಅಪಹರಣ ಅಂತ ದೂರು ಕೊಟ್ಟಿದ್ದಾನೆ. ಏನೇ ಇದ್ರೂ ನಿರ್ಲಕ್ಷ್ಯಿಸದೇ ತ್ವರಿತ ಕಾರ್ಯಾಚರಣೆ ಕೈಗೊಂಡ ಪೊಲೀಸರು ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ ಬಯಲು
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಯ ಎಡವಟ್ಟು ಮತ್ತೊಮ್ಮೆ ಬಟಾ ಬಯಲಾಗಿದೆ. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಡಿ ಫ್ರಿಡ್ಜ್ ದುರಸ್ಥಿಯಾಗಿದೆ. ಡಿ ಫ್ರಿಡ್ಜ್ ಹಾಳಾಗಿದ್ರು ಅದನ್ನ ನೋಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಂದು ಶವಾಗಾರದಲ್ಲಿ ಕೆಟ್ಟ ದುರ್ನಾತ ಬರುತ್ತಿದ್ದ ಪರಿಣಾಮ ಶವಾಗಾರವನ್ನ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಶವಾಗಾರವನ್ನ ತೆರೆದ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಮೃತ ಪಟ್ಟಿದ್ದ ಅನಾಮಿಕ ಮೃತ ದೇಹವನ್ನ ಡಿ ಫ್ರಿಡ್ಜ್ ನಲ್ಲಿ ಇಡಲಾಗಿದ್ದು ಆದ್ರೆ ಡಿ ಫ್ರಿಡ್ಜ್ ದುರಸ್ಥಿಯಾದ ಹಿನ್ನಲೆ ಈ ಅವಘಡ ಸಂಭವಿಸಿದೆ. ಸದ್ಯ ಪಾಂಡವಪುರ ಆಸ್ಪತ್ರೆಯಲ್ಲಿ ನಡೆದ ಈ ಅವಘಡ ಎಲ್ಲೆಡೆ ಸಾಕಷ್ಟು ಚರ್ಚೆಯಾಗುತ್ತಿದೆ.
Published On - 3:33 pm, Sat, 5 November 22