
ಕೋಲಾರ: ವೇತನ ಸಮಸ್ಯೆಯಿಂದಾಗಿ ಕಾರ್ಮಿಕರು ಸಿಟ್ಟಿಗೆದ್ದು ದಾಂದಲೆ ನಡೆಸಿದ ಕಾರಣಕ್ಕೆ ದೇಶವ್ಯಾಪಿ ಸುದ್ದಿಯಾಗಿದ್ದ ವಿಸ್ಟ್ರಾನ್ ಕಂಪನಿಯಲ್ಲಿ ಮತ್ತೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸಂಸ್ಥೆ ಮತ್ತೆ ಕೆಲಸಕ್ಕೆ ಕರೆದಿದ್ದು, ಪೊಲೀಸರಿಂದ ನಿರಪೇಕ್ಷಣಾ ಪತ್ರ (ಎನ್ಒಸಿ) ತರುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೋಲಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಭ್ಯರ್ಥಿಗಳ ದಂಡು ನೆರೆದಿದೆ. ಕಂಪನಿಯಿಂದ ಬಂದಿರುವ ಎಸ್ಎಂಎಸ್ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ಆಧಾರ್ ಕಾರ್ಡ್, ಪಾನ್ಕಾರ್ಡ್ನ ಮೂಲ ಪ್ರತಿಗಳನ್ನು ತರಬೇಕು ಎಂದು ಸೂಚಿಸಲಾಗಿದೆ. ಸಿಬ್ಬಂದಿ ನೆರವಿನೊಂದಿಗೆ ಸಬ್ ಇನ್ಸ್ಪೆಕ್ಟರ್ ಕಿರಣ್ ಸ್ವತಃ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಪ್ರತಿ ಅಭ್ಯರ್ಥಿಯೂ ತಮ್ಮ ಪರವಾಗಿ ಸಾಕ್ಷಿ ಹಾಕಲು ತಮ್ಮ ಸಂಬಂಧಿಗಳಲ್ಲದ ಇಬ್ಬರು ಸ್ವಗ್ರಾಮ ನಿವಾಸಿಗಳನ್ನು ಕರೆತರಬೇಕು ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳ ಹಿನ್ನೆಲೆಯನ್ನು ಕೂಲಂಕಶವಾಗಿ ಪರಿಶೀಲಿಸಿದ ನಂತರವಷ್ಟೇ ನಿರಪೇಕ್ಷಣಾ ಪತ್ರ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣೆ ಆವರಣದಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಅಭ್ಯರ್ಥಿ ಗೀತಾ, ‘ಕಾರ್ಖಾನೆಯಲ್ಲಿ ದಾಂದಲೆ ನಡೆಸಿ, ಆಸ್ತಿಪಾಸ್ತಿ ಹಾನಿ ಮಾಡಿದವರಿಗೆ ಕೆಲಸ ಕೊಡದಿದ್ದರೆ ಒಳ್ಳೆಯದು. ಕೋಲಾರ ಜಿಲ್ಲೆಗೆ ಒಂದು ಬಹುರಾಷ್ಟ್ರೀಯ ಕಂಪನಿ ಬಂದಿತ್ತು ಅನ್ನೋದು ಹೆಮ್ಮೆಯ ವಿಷಯವಾಗಿತ್ತು. ಹಳ್ಳಿಗಳಲ್ಲಿರುವ ಹಲವರಿಗೆ ಕೆಲಸ ಸಿಕ್ಕಿತ್ತು’ ಎಂದು ಹೇಳಿದರು.
ಮತ್ತೋರ್ವ ಅಭ್ಯರ್ಥಿ ವಿಜಯ್ ಮಾತನಾಡಿ, ‘ಗಲಾಟೆ ಆದ ಮೇಲೆ ಸಂಬಳದ ವಿಚಾರ ಇತ್ಯರ್ಥಪಡಿಸಿದ್ದಾರೆ. ನಮಗೆ ಮತ್ತೊಮ್ಮೆ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಮತ್ತೆ ಕೆಲಸ ಶುರು ಆಗುವ ದಿನಾಂಕ ತಿಳಿಸಿಲ್ಲ. ನಮ್ಮದಲ್ಲದ ತಪ್ಪಿಗೆ ನಾವು ಮನೆಯಲ್ಲಿ ಕುಳಿತುಕೊಳ್ಳುವಂತೆ ಆಯಿತು. ಇದಕ್ಕಾಗಿ ಸಂಸ್ಥೆ ನಮಗೆ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ಗೀತಾ ಮತ್ತು ವಿಜಯ್
ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದಾಖಲೆ ಪರಿಶೀಲನೆ
ಪೊಲೀಸ್ ಠಾಣೆ ಎದುರು ಅಭ್ಯರ್ಥಿಗಳ ಸಾಲು
Published On - 3:13 pm, Mon, 18 January 21