ಕೋಲಾರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ; ಕೇರಳದಿಂದ ಬಂದವರೇ ಸೂಪರ್​ ಸ್ಪ್ರೆಡರ್ಸ್

| Updated By: preethi shettigar

Updated on: Sep 01, 2021 | 1:56 PM

ಆಗಸ್ಟ್ 18 ರಂದು ನೂರ್ ಉನ್ನೀಸಾ ನರ್ಸಿಂಗ್ ಕಾಲೇಜು ಬಸ್ 140 ವಿದ್ಯಾರ್ಥಿಗಳನ್ನು ಕೇರಳದಿಂದ ಕರೆ ತಂದಿದ್ದು, ಮೊದಲಿಗೆ 3 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೂವರಿಂದ 33 ಆಗಿ, ಇದು ಈಗ 66ಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ.

ಕೋಲಾರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ; ಕೇರಳದಿಂದ ಬಂದವರೇ ಸೂಪರ್​ ಸ್ಪ್ರೆಡರ್ಸ್
66 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆ
Follow us on

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಹೆಚ್ಚಾಗಿದೆ. ಕೇರಳದಿಂದ ಬಂದಿರುವ ನರ್ಸಿಂಗ್ ವಿದ್ಯಾರ್ಥಿಗಳಿಂದ 3ನೇ ಅಲೆಯ ಭೀತಿ ಎದುರಾಗಿದೆ. 265 ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ 66 ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಸದ್ಯಕ್ಕೆ ನರ್ಸಿಂಗ್ ಕಾಲೇಜು ಸೀಲ್​ಡೌನ್​ ಮಾಡಿ, ಸೋಂಕು ಹೆಚ್ಚಾಗದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ವಿದ್ಯಾಭ್ಯಾಸಕ್ಕಾಗಿ ಕೇರಳದಿಂದ ಕೋಲಾರಕ್ಕೆ ಬರುವ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಜಿಲ್ಲೆಗೆ ಕೊರೊನಾವನ್ನು ಬಳುವಳಿಯಾಗಿ ನೀಡುತ್ತಿದ್ದಾರೆ. ಅದು ಸಹ ಕೇರಳದಿಂದ ಜಿಲ್ಲೆಗೆ ಬಂದಿರುವ ಒಟ್ಟು 66 ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಂಡಿರುವುದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೂರು ದಿನದ ಹಿಂದೆ ಕೆಜಿಎಫ್ ನಗರದ ನೂರ್ ಉನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿನ ಕೇರಳದಿಂದ ಬಂದಿದ್ದ ವಿದ್ಯಾರ್ಥಿಗಳನ್ನು ಕೊರೊನಾ ಪರೀಕ್ಷೆಗೊಳಪಡಿಸಿದ ವೇಳೆ 15 ವಿದ್ಯಾರ್ಥಿಗಳಿಗೆ ಸೋಂಕಿರುವುದು ದೃಢಪಟ್ಟಿದೆ.

ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಒಳಪಡಿಸಿದ್ದು, ಈ ವೇಳೆ ಒಟ್ಟು 66 ವಿದ್ಯಾರ್ಥಿಗಳಲ್ಲಿ ಸೋಂಕಿರುವುದು ದೃಢಪಟ್ಟಿದೆ. ಆಗಸ್ಟ್ 18 ರಂದು ನೂರ್ ಉನ್ನೀಸಾ ನರ್ಸಿಂಗ್ ಕಾಲೇಜು ಬಸ್ 140 ವಿದ್ಯಾರ್ಥಿಗಳನ್ನು ಕೇರಳದಿಂದ ಕರೆ ತಂದಿದ್ದು, ಮೊದಲಿಗೆ 3 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೂವರಿಂದ 33 ಆಗಿ, ಇದು ಈಗ 66ಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ 12 ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳಿದ್ದು, ಈಗಾಗಲೆ ನರ್ಸಿಂಗ್ ಕಾಲೇಜುಗಳಲ್ಲಿ ಟೆಸ್ಟಿಂಗ್ ಕಾರ್ಯ ಆರಂಭವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಯಾವುದೆ ನೆಗೆಟಿವ್ ರಿಪೋರ್ಟ್ ಇಲ್ಲದೆ ಕೇರಳದಿಂದ ಜಿಲ್ಲೆಗೆ ರೈಲುಗಳ ಮೂಲಕ ಜಿಲ್ಲೆಗೆ ಬರುತ್ತಿದ್ದಾರೆ. ಹೀಗೆ ಬರುವವರಿಗೆ ಯಾವುದೆ ನಿರ್ಬಂಧವಿಲ್ಲ. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ರೈಲು ನಿಲ್ದಾಣಗಳಲ್ಲಿ ಯಾವುದೇ ಕಟ್ಟೆಚ್ಚರ ವಹಿಸಿಲ್ಲ. ಹಾಗಾಗಿ ಸಲೀಸಾಗಿ ಸೋಂಕು ಜಿಲ್ಲೆಗೆ ಹರಡುತ್ತಿದೆ.

ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಭೇಟಿ

ನೂರ್ ಉನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿ 66 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಕಾಲೇಜಿಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸೇರಿ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿತ್ತು. ವಿದ್ಯಾರ್ಥಿಗಳ ಟ್ರಾವಲ್ ಹಿಸ್ಟರಿ ಸೇರಿದಂತೆ ಆರ್​ಟಿಪಿಸಿಆರ್​ ನೆಗಟಿವ್ ರೀಪೋರ್ಟ್ ತಂದಿದ್ದಾರಾ? ಜಿಲ್ಲಿಗೆ ಇವರೆಲ್ಲಾ ಹೇಗೆ ಬಂದಿದ್ದಾರೆ ಎಂಬುವುದರ ಮಾಹಿತಿ ಕಲೆ ಹಾಕಲಾಗುತ್ತಿದೆ.

ನೂರ್ ಉನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿ 265 ವಿದ್ಯಾರ್ಥಿಗಳಿದ್ದು, ಎಲ್ಲರನ್ನು ಪರೀಕ್ಷೆಗೊಳಪಡಿಸಲಾಗಿದೆ. ಜೊತೆಗೆ ಕೇರಳಾದಿಂದ ಬಂದಿರುವ ವಿದ್ಯಾರ್ಥಿಗಳ ಕೊರೊನಾ ಟೆಸ್ಟ್ ರಿಪೋರ್ಟ್ ಹಾಗೂ ವ್ಯಾಕ್ಸಿನ್ ಹಾಕಿಸಿಕೊಂಡಿರುವ ದಾಖಲಾತಿಗಳು ನಕಲಿ ಎನ್ನುವ ಅನುಮಾನ ಮೂಡಿದ್ದು, ಅದರ ಬಗ್ಗೆಯೂ ಕೂಡಾ ತನಿಖೆ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ಕುರಿತಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕೊರೊನಾ ಡೆಲ್ಟಾ ಅಥವಾ ಡೆಲ್ಟಾ ಪ್ಲಸ್ ವೈರಸ್ ಎನ್ನುವುದರ ಮಾಹಿತಿ ಪಡೆಯಲು ಗಂಟಲು ದ್ರವದ ಮಾದರಿಗಳನ್ನು ಬೆಂಗಳೂರಿಗೂ ಕಳಿಸಿಕೊಡಲಾಗಿದೆ. ಸದ್ಯ ಕೊರೊನಾ ಸೋಂಕಿತ ವಿದ್ಯಾರ್ಥಿಗಳನ್ನು ಕೆಜಿಎಫ್ ನಗರದ ಬಿಜಿಎಂಎಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಆರೋಗ್ಯದಿಂದ ಇದ್ದಾರೆ ಎನ್ನಲಾಗಿದೆ. ಇನ್ನೂ ನೂರ್ ಉನ್ನೀಸ್ ನರ್ಸಿಂಗ್ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ನಗರಸಭೆ ಅಧಿಕಾರಿಗಳು ಕಂಟೈನ್ ಮೆಂಟ್ ಜೋನ್ ಮಾಡಿದ್ದು, ಪ್ರಾಥಮಿಕ ಸಂಪರ್ಕಿತ ಕಾಲೇಜಿನಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ತಪಾಸೆಣೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ತಿಲಿಸಿದ್ದಾರೆ.

ಕಾಲೇಜಿನಲ್ಲಿ ನಿರ್ಲಕ್ಷ್ಯದ ಕುರಿತು ಆರೋಗ್ಯ ಸಚಿವ ಸುಧಾಕರ್ ಕೂಡಾ ಇಂದು ಕೆಜಿಎಫ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಒಟ್ಟಾರೆ ಒಂದು ಕಡೆ ಅನ್ಲಾಕ್ ಪ್ರಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದೆಡೆಯಿಂದ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲೇ ಬದುಕುವ ಸ್ಥಿತಿ ಎದುರಾಗಿದೆ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ:

Tokyo Olympics: ಚಿಲಿ ಮತ್ತು ನೆದರ್‌ಲ್ಯಾಂಡ್ಸ್‌ ಸ್ಪರ್ಧಿಗಳಲ್ಲಿ ಕೊರೊನಾ ಸೋಂಕು ಪತ್ತೆ; ಒಟ್ಟು 8 ಆಟಗಾರರಿಗೆ ಸೋಂಕು ಧೃಡ

ಉಡುಪಿಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಇಳಿಕೆ; ಇಂದಿನಿಂದ ಶಾಲೆ ಆರಂಭ

 

Published On - 1:37 pm, Wed, 1 September 21