ಕೋಲಾರ: ಆ ಮನೆಗೆ ಎಂಟ್ರಿಕೊಟ್ರೆ ಸಾಕು ಹಾಗಲಕಾಯಿ, ಪಡವಲಕಾಯಿ, ಚಪ್ಪರದವರೆಕಾಯಿ, ಹೀರೇಕಾಯಿ ಸ್ವಾಗತ ಕೋರುತ್ತವೆ. ಇನ್ನು ಬಗೆ ಬಗೆ ಹೂವಿನ ಪರಿಮಳವಂತೂ ಮನಸ್ಸನ್ನ ಆಹ್ಲಾದಕರವಾಗಿಸುತ್ತವೆ. ಇವುಗಳ ಜೊತೆ ಔಷಧಿ ಸಸ್ಯಗಳು ವೆರೈಟಿ ವೆರೈಟಿ ಸೊಪ್ಪು ಮನಸೆಳೆಯುತ್ತವೆ.
ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿರೋ ಕೃಷ್ಣಪ್ಪ ಅನ್ನೋರ ನಿವಾಸದಲ್ಲಿ ಇಂತಹದೊಂದು ಸುಂದರ ಕೈ ತೋಟವಿದೆ. ಅಂದಹಾಗೆ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿ ಇದೀಗ ನಿವೃತ್ತಿ ಹೊಂದಿ ಮನೆಯ ಮುಂದೆಯೇ ಒಂದು ಸುಂದರ ಪ್ರಕೃತಿ ನಿರ್ಮಿಸಿದ್ದಾರೆ. ಅದರಲ್ಲಿ ಹಲವು ಬಗೆಯ ಹೂವುಗಳು, ಔಷಧಿಯ ಗಿಡಗಳು, ಲಾವಂಚ, ಲೆಮನ್ ಗ್ರಾಸ್, ಧವನ, ಸೇರಿದಂತೆ ಹಲವು ಸುಗಂಧ ಬೀರುವ ಗಿಡಗಳನ್ನ ಬೆಳೆಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಮನೆಯ ಟೆರೇಸ್ ಮೇಲೆ ಕೈತೋಟ ಮಾಡಿ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ.
ಮನೆಯ ಸುತ್ತಮುತ್ತಲಿನ ಜಾಗವನ್ನೇ ಸುಂದರ ಕಾಡನ್ನಾಗಿ ಮಾಡಿರುವ ಕೃಷ್ಣಪ್ಪ, ಅವರ ಮನೆಯ ಮೇಲೆ ಬೀಳುವ ಒಂದೇ ಒಂದು ಹನಿ ನೀರು ಹೊರಗಿನ ಚರಂಡಿಗಳಿಗೆ ಹರಿಯಲು ಬಿಡೋದಿಲ್ಲ. ಮಳೆ ಕೊಯ್ಲು ಪದ್ದತಿ ಮೂಲಕ ನೀರನ್ನು ಸಂಗ್ರಹಿಸಿ ಗಿಡಗಳಿಗೆ ಮತ್ತು ಕುಡಿಯಲು ಬಳಸುತ್ತಾರೆ. ಮನೆಯಲ್ಲಿನ ಕಸವನ್ನು ಹೊರಗೆ ಹಾಕದೆ ಹಸಿ ಕಸವನ್ನು ಕಾಂಪೋಸ್ಟ್ ಮಾಡಿ, ಪ್ಲಾಸ್ಟಿಕ್ ಹಾಗೂ ಒಣಕಸವನ್ನು ಸುಟ್ಟು ಅದನ್ನು ಪ್ರಕೃತಿಗೆ ಹಾನಿಯಾಗದಂತೆ ಬಳಸುತ್ತಿದ್ದಾರೆ.
ಸುಂದರವಾದ ಪ್ರಕೃತಿಯ ಮಡಿಲಲ್ಲಿ ಬದುಕೋದಕ್ಕೆ ಕಾಡಿಗೆ ಹೋಗಬೇಕೆಂದಿಲ್ಲ, ಪ್ರಕೃತಿಯ ಮೇಲೆ ಒಂದಷ್ಟು ಕಾಳಜಿ ಪ್ರೀತಿ ತೋರಿಸಿದರೆ ಸಾಕು, ನಾವಿರುವ ಸ್ಥಳವೇ ಪ್ರಕೃತಿ ಮಡಿಲಾಗಿ ಬದಲಾಗಿ ಹೋಗುತ್ತದೆ ಅನ್ನೋದಕ್ಕೆ ಕೃಷ್ಣಪ್ಪ ಅವರ ಮನೆಯೇ ಸಾಕ್ಷಿ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: Health Tips; ಒಮಿಕ್ರಾನ್ ವಿರುದ್ಧ ಹೋರಾಡಲು ಈ ಸರಳ ಮಾರ್ಗಗಳನ್ನು ಅನುಸರಿಸಿ