ಕೋಲಾರ, ಮೇ 27: ಉಡುಪಿಯಲ್ಲಿ ನಡೆದ ಭೀಕರ ಗ್ಯಾಂಗ್ ವಾರ್ (Udupi Gangwar) ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಜನತೆ ಭೀತಿಗೊಂಡಿರುವ ಸಂದರ್ಭದಲ್ಲೇ ಕೋಲಾರದಲ್ಲಿ (Kolar) ಯುವಕನೊಬ್ಬ ಮಾರಕಾಸ್ತ್ರ (Weapon) ಹಿಡಿದು ಜನರಲ್ಲಿನ ಭಯ ಹುಟ್ಟಿಸಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ಪಿಚ್ಚಗುಂಟ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು, 27 ವರ್ಷ ವಯಸ್ಸಿನ ಸಂದೀಪ್ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ತಲ್ವಾರ್ ವಶಕ್ಕೆ ಪಡೆಯಲಾಗಿದೆ.
ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ, ಜನರ ನೆಮ್ಮದಿಗೆ ಭಂಗ ತರುವ ಮತ್ತು ಗಲಭೆ ಸೃಷ್ಟಿ ಮಾಡುವ ಉದ್ದೇಶದಿಂದ ಸಂದೀಪ್ ಲಾಂಗ್ ಹಿಡಿದು ಪೋಸ್ ಕೊಡುತ್ತಿದ್ದ ಎನ್ನಲಾಗಿದೆ ಎಂದು ಮುಳಬಾಗಲು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ತಡರಾತ್ರಿ 2 ಗಂಟೆಯ ಹೊತ್ತಿಗೆ ಎರಡು ಗ್ಯಾಂಗ್ಗಳ ಮಧ್ಯೆ ಭೀಕರ ಕಾಳಗ ನಡೆದಿತ್ತು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವೈರಲ್ ಆಗಿತ್ತು. ಇಂಥ ಕೃತ್ಯಗಳು ಹಾಗೂ ವಿಡಿಯೋಗಳಿಂದ ಪ್ರಚೋದನೆ ಪಡೆದು ರಾಜ್ಯದ ಇತರ ಕಡೆಗಳಲ್ಲಿಯೂ ಯುವಕರು ಇಂಥ ಕೃತ್ಯಕ್ಕೆ ಇಳಿಯುತ್ತಿರುವುದು ಇದೀಗ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಒಂದೆಡೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಾಗಿ ಪ್ರತಿಪಕ್ಷಗಳು ಗಂಭೀರ ಆರೋಪ ಮಾಡುತ್ತಿವೆ. ಮತ್ತೊಂದೆಡೆ ಗ್ಯಾಂಗ್ ವಾರ್, ತಲ್ವಾರ್ ಪ್ರದರ್ಶನ, ಕೊಲೆಯಂಥ ಘಟನೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಈ ಮಧ್ಯೆ, ಕೋಲಾರದ ಪಿಚ್ಚಗುಂಟ್ಲಹಳ್ಳಿಯಲ್ಲಿಯೂ ಇದೀಗ ಭಯದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ನೋಡಿ: ಉಡುಪಿಯಲ್ಲಿ ಮೇ 18ರಂದು ನಡೆದ ಭಯಾನಕ ಗ್ಯಾಂಗ್ವಾರ್ ದೃಶ್ಯಗಳು ಲಭ್ಯ, ಇಬ್ಬರು ಸೆರೆ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಡುವಲಪಾಳ್ಯ ಗ್ರಾಮದಲ್ಲಿ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 6300 ರೂ ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:13 am, Mon, 27 May 24