KC Valley: ದೇಶಕ್ಕೆ ಮಾದರಿಯಾದ ಕೆ.ಸಿ. ವ್ಯಾಲಿ ನೀರಾವರಿ ಯೋಜನೆ, ತ್ಯಾಜ್ಯ ನೀರು ಮರು ಬಳಕೆ ಯೋಜನೆ ದೇಶಲ್ಲಿ ವಿಸ್ತರಣೆ

| Updated By: ಆಯೇಷಾ ಬಾನು

Updated on: Jun 17, 2022 | 4:30 PM

ಬೆಂಗಳೂರು ನಗರದ ಜನರು ಬಳಕೆ ಮಾಡಿ ಬಿಟ್ಟಂತ ನೀರು ಮೊದಲು ತಮಿಳುನಾಡಿನ ಹೊಸೂರು ಭಾಗಕ್ಕೆ ಹರಿದು ವ್ಯರ್ಥವಾಗಿ ಹೋಗುತ್ತಿತ್ತು, ಈ ನೀರನ್ನು ಸಂಸ್ಕರಣೆ ಮಾಡಿ ಕೋಲಾರದ ಕೆರೆಗಳಿಗೆ ತುಂಬಿಸಿದರೆ ಕನಿಷ್ಠ ಕೋಲಾರ ಜಿಲ್ಲೆಯ ಅಂತರ್ಜಲವನ್ನಾದರೂ ಮರುಪೂರಣ ಮಾಡಲು ಅನುಕೂಲವಾಗುತ್ತದೆ ಅನ್ನೋ ನಿಟ್ಟಿನಲ್ಲಿ ಯೋಜನೆಯೊಂದನ್ನ ರೂಪಿಸಲಾಯಿತು.

KC Valley: ದೇಶಕ್ಕೆ ಮಾದರಿಯಾದ ಕೆ.ಸಿ. ವ್ಯಾಲಿ ನೀರಾವರಿ ಯೋಜನೆ, ತ್ಯಾಜ್ಯ ನೀರು ಮರು ಬಳಕೆ ಯೋಜನೆ ದೇಶಲ್ಲಿ ವಿಸ್ತರಣೆ
ಕೆ.ಸಿ. ವ್ಯಾಲಿ
Follow us on

ಕೋಲಾರ: ತ್ಯಾಜ್ಯ ನೀರನ್ನ ಸಂಸ್ಕರಿಸಿ ಕರೆಗಳನ್ನ ತುಂಬಿಸುವ ದೇಶದ ಮಹತ್ವದ ನೀರಾವರಿ ಯೋಜನೆ ಕೆಸಿ ವ್ಯಾಲಿ(KC Valley) ಈಗ ದೇಶದ ಮಾದರಿ ಯೋಜನೆಯಾಗಿ ಹೊರ ಹೊಮ್ಮಿದೆ, ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಈ ಕೆಸಿ ವ್ಯಾಲಿ ಹಾಗೂ ಹೆಚ್.ಎನ್ ವ್ಯಾಲಿ ಯೋಜನೆ ದೇಶದಾದ್ಯಂತ ವಿಸ್ತರಿಸುವ ಕುರಿತು ಕೇಂದ್ರ ಜಲಶಕ್ತಿ ಸಚಿವಾಲಯ ಆಸಕ್ತಿ ತೋರಿಸಿದ್ದು ಕೆಸಿ ವ್ಯಾಲಿ ಯೋಜನೆ ಈಗ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಹತ್ತಾರು ವರ್ಷಗಳ ಕಾಲ ನೀರಿಗಾಗಿ ಪರಿತಪಿಸುತ್ತಿದ್ದ ಕೋಲಾರ
ರಾಜ್ಯದ ಗಡಿ ಜಿಲ್ಲೆ ಆಂಧ್ರ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿರುವ ಜಿಲ್ಲೆ ಕೋಲಾರ. ನದಿ ನಾಲೆಗಳಿಲ್ಲದೆ ಕೆರೆಗಳ ನಾಡಾಗಿದ್ದ ಬಯಲು ಸೀಮೆ ಕೋಲಾರವನ್ನು ಬರದ ನಾಡು ಎಂದೆಲ್ಲಾ ಕರೆಯಲಾಗುತ್ತಿತ್ತು. ಹತ್ತಾರು ವರ್ಷಗಳ ಕಾಲ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿಯ ಯೋಜನೆ ಕಲ್ಪಿಸಬೇಕು ಎಂದು ಸಾವಿರಾರು ಹೋರಾಟಗಳು ನಡೆದಿವೆ. ಹತ್ತಾರೂ ಯೋಜನೆಗಳನ್ನು ರೂಪಿಸಿತ್ತಾದರೂ ಯಾವುದೇ ಯೋಜನೆ ಜಾರಿ ಮಾಡುವಲ್ಲಿ ಯಾವುದೇ ಸರ್ಕಾರಗಳು ಆಸಕ್ತಿ ತೋರಿರಲಿಲ್ಲ, ಪರಿಣಾಮ ಜಿಲ್ಲೆಯ ಅಂತರ್ಜಲ ಪಾತಾಳ ಸೇರಿ ಹೋಗಿತ್ತು, ಮಳೆಯಾಶ್ರಿತ ಕೋಲಾರ ಜಿಲ್ಲೆಯ ಜನರು ಕೊಳವೆ ಬಾವಿಗಳ ಮೊರೆ ಹೋಗಿ ಪಾತಾಳದಿಂದ ನೀರು ತೆಗೆದು, ಬೆವರು ಹರಿಸಿ ಕೃಷಿ ಮಾಡುತ್ತಿದ್ದರು. ಹೀಗಿರುವಾಗಲೇ ಕೋಲಾರ ಜಿಲ್ಲೆಗೆ ಶೀಘ್ರವಾಗಿ ಜಾರಿ ಮಾಡಬಹುದಾದ ಒಂದು ನೀರಾವರಿಯ ಯೋಜನೆಯೊಂದನ್ನು ಜಾರಿಗೊಳಿಸಲು ತೀರ್ಮಾನ ಮಾಡಲಾಯಿತು.

ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ತ್ಯಾಜ್ಯ ನೀರಿನಿಂದಲೇ ಅದ್ಬುತ ಕ್ರಾಂತಿ
ಬೆಂಗಳೂರು ನಗರದ ಜನರು ಬಳಕೆ ಮಾಡಿ ಬಿಟ್ಟಂತ ನೀರು ಮೊದಲು ತಮಿಳುನಾಡಿನ ಹೊಸೂರು ಭಾಗಕ್ಕೆ ಹರಿದು ವ್ಯರ್ಥವಾಗಿ ಹೋಗುತ್ತಿತ್ತು, ಈ ನೀರನ್ನು ಸಂಸ್ಕರಣೆ ಮಾಡಿ ಕೋಲಾರದ ಕೆರೆಗಳಿಗೆ ತುಂಬಿಸಿದರೆ ಕನಿಷ್ಠ ಕೋಲಾರ ಜಿಲ್ಲೆಯ ಅಂತರ್ಜಲವನ್ನಾದರೂ ಮರುಪೂರಣ ಮಾಡಲು ಅನುಕೂಲವಾಗುತ್ತದೆ ಅನ್ನೋ ನಿಟ್ಟಿನಲ್ಲಿ ಯೋಜನೆಯೊಂದನ್ನ ರೂಪಿಸಲಾಯಿತು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಈ ಯೋಜನೆಯ ಕುರಿತು ಸರ್ಕಾರದ ಗಮನ ಸೆಳೆದು ಯೋಜನೆಯ ರೂಪುರೇಷೆಯನ್ನು ತಯಾರು ಮಾಡಿದರು. ಯೋಜನೆಗೆ 1400 ಕೋಟಿ ರೂಪಾಯಿ ವ್ಯಚ್ಚವಾಗಬಹುದು ಎಂದು ಅಂದಾಜಿಸಿ ಯೋಜನೆಗೆ ಸರ್ಕಾರಗಳು ಆಸಕ್ತಿ ತೋರಿದ ಪರಿಣಾಮ ಯೋಜನೆಯನ್ನು ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹಾಕಿದ ಪರಿಣಾಮ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದನ್ನೂ ಓದಿ: ದೆಹಲಿ: ವ್ಯಾಗನ್‌ಆರ್‌ಗೆ ಡಿಕ್ಕಿ ಹೊಡೆದು ಫ್ಲೈಓವರ್‌ನ ಕೆಳಗೆ ಮಲಗಿದ್ದವರ ಮೇಲೆ ಉರುಳಿ ಬಿದ್ದ ಬಿಎಂಡಬ್ಲ್ಯು; ಇಬ್ಬರು ಮಕ್ಕಳು ಸಾವು

ಸ್ವತಂತ್ರ್ಯಾ ನಂತರ ಮಾಡಲಾದ ಮೊದಲ ಯೋಜನೆ, ಅಷ್ಟೇ ಶೀಘ್ರವಾಗಿ ಅನುಷ್ಠಾನ
ಸ್ವತಂತ್ರ್ಯಾ ನಂತರ ಕೋಲಾರ ಜಿಲ್ಲೆಗೆ ರೂಪಿಸಲಾದ ಮೊದಲ ನೀರಾವರಿ ಯೋಜನೆಯಾಗಿ ಅಂದಿನ ಸಿದ್ದರಾಮಯ್ಯ ಸರ್ಕಾರ 1400 ಕೋಟಿ ರೂಪಾಯಿ ವ್ಯಚ್ಚದಲ್ಲಿ ಯೋಜನೆಯನ್ನು ಅನುಷ್ಠಾನ ಗೊಳಿಸಿತ್ತು. ಸಿದ್ದರಾಮಯ್ಯ ಸರ್ಕಾರ ಕೇವಲ ಒಂದೇ ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಹೇಳಿ ಕಾಮಗಾರಿ ಆರಂಭ ಮಾಡಿತ್ತು. ಈ ವೇಳೆ ಹತ್ತು ಹಲವು ತೊಡಕುಗಳು ಬಂದಾಗಲೂ ಎಲ್ಲವನ್ನು ಶೀಘ್ರವಾಗಿ ಮುಗಿಸುತ್ತಾ ಯೋಜನೆಗೆ ಬೆನ್ನುಬಿದ್ದು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ರಮೇಶ್ ಕುಮಾರ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳು ಶ್ರಮ ವಹಿಸಿದರು. ಇವರ ಶ್ರಮಕ್ಕೆ ತಕ್ಕಂತೆ ಕಾಮಗಾರಿ ಟೆಂಡರ್ ಪಡೆದಿದ್ದ ಹೈದರಾಬಾದ್ ಮೂಲದ ಮೆಗಾ ಎಂಜಿನಿಯರಿಂಗ್ ವರ್ಕ್ ಕಂಪನಿ ಕೂಡಾ ಅಷ್ಟೇ ವೇಗವಾಗಿ ಕಾಮಗಾರಿಯನ್ನು ಮಾಡುವ ಮೂಲಕ ಯೋಜನೆಯನ್ನು ನಿಗದಿತ ಸಮಯಕ್ಕೆ ಮುಗಿಸಿಕೊಟ್ಟಿತ್ತು. ಅದರಂತೆ ಯೋಜನೆ 2018 ಜೂನ್ 1 ರಂದು ಅಧಿಕೃತವಾಗಿ ಜಿಲ್ಲೆಗೆ ಪಾದರ್ಪಣೆ ಮಾಡಿತ್ತು. ಅಂದಿಗೆ ಕೋಲಾರ ಜಿಲ್ಲೆಗೆ ಹಿಡಿದಿದ್ದ ನೀರಿನ ಬರ ಬಿಟ್ಟಂತಾಗಿತ್ತು. ಆರಂಭದಲ್ಲಿ ನೀರಿನ ಶುದ್ದತೆ ವಿಚಾರವಾಗಿ ಹಲವು ತೊಡಕುಗಳು ಬಂದು ನೀರಿನ ಶುದ್ದತೆಯ ಪ್ರಶ್ನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅಲ್ಲಿಂದಲೂ ಗೆದ್ದು ಬಂದಿತ್ತು. ಈಗ ಎಲ್ಲಾ ಅಡೆತಡೆಗಳನ್ನು ಮೀರಿ ಇಂದು ದೇಶಕ್ಕೆ ಮಾದರಿ ಯೋಜನೆ ಎಂಬ ಕೀರ್ತಿ ತನ್ನದಾಗಿಸಿಕೊಂಡಿದೆ.

ಕೆ.ಸಿ. ವ್ಯಾಲಿ

ಕೆಸಿ ವ್ಯಾಲಿ ಯೋಜನೆಯಿಂದ ಐದು ವರ್ಷದಲ್ಲಿ ಮಹತ್ವದ ಬದಲಾವಣೆ
ಯೋಜನೆ ಅನುಷ್ಠಾನಗೊಂಡ ನಂತರ ಕೋಲಾರ ಜಿಲ್ಲೆಯಲ್ಲಿ ಹಲವಾರು ಬದಲಾವಣೆಗಳಾಗಿವೆ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ ಕಾಣುವ ಜೊತೆಗೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಮೀನುಗಾರಿಕೆ ಚಟುವಟಿಕೆಗಳು ಕೂಡಾ ಮರು ಜೀವ ಪಡೆದುಕೊಂಡಿದ್ದು ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಜೊತೆಗೆ ಉತ್ತಮ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಎಲ್ಲಾ ಕೆರೆಗಳೆಲ್ಲಾ ತುಂಬಿ ಹರಿಯುತ್ತಿದೆ. ಎಲ್ಲಿ ನೋಡಿದರು ಅಲ್ಲಿ ಹಸಿರು ಕಂಗೊಳಿಸುವಂತೆ ವಾತಾವರಣ ಬದಲಾಗಿದೆ. ಜಿಲ್ಲೆಯ ಕೆಲವೆಡೆ ರೈತರು ಭತ್ತ ಬೆಳೆಯುತ್ತಿದ್ದಾರೆ ಇಂಥ ಬದಲಾವಣೆಗೆ ಕೆಸಿ ವ್ಯಾಲಿ ಯೋಜನೆ ಕಾರಣ ಅನ್ನೋದು ಜಿಲ್ಲೆಯ ಜನರ ಹಾಗೂ ಜನಪ್ರತನಿಧಿಗಳ ಅಭಿಪ್ರಾಯ.

ದೇಶದ ಗಮನ ಸೆಳೆದ ಕೆ.ಸಿ.ವ್ಯಾಲಿ ಯೋಜನೆ, ದೇಶಕ್ಕೆ ಮಾದರಿ
ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ಕೋಲಾರದ ಕೆ.ಸಿ. ವ್ಯಾಲಿ ನೀರಾವರಿ ಯೋಜನೆ ದೇಶದಲ್ಲೇ ಮೊದಲ ನೀರಾವರಿ ಯೋಜನೆಯಾಗಿದೆ. ಬೆಂಗಳೂರಿನಲ್ಲಿ ಎರಡು ಹಂತಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳನ್ನು ತುಂಬಿಸಲು ಈ ನೀರು ಸರಬರಾಜು ಮಾಡಲಾಗುತ್ತಿದೆ. ಇದೀಗ ಈ ಯೋಜನೆಯನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಮತ್ತು ರಾಮನಗರ ಜಿಲ್ಲೆಯ ಕನಕಪುರದ ಕೆಲ ಭಾಗಗಳಿಗೆ ವಿಸ್ತರಿಸಲಾಗುತ್ತಿದೆ. ಸದ್ಯ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಯೋಜನೆಗಳನ್ನು ವೇಗಗೊಳಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರ ಕರ್ನಾಟಕದ ಕೋರಮಂಗಲ-ಚಲ್ಲಘಟ್ಟ ವ್ಯಾಲಿ ಏತ ನೀರಾವರಿ ಯೋಜನೆ ಮಾದರಿಯನ್ನು ದೇಶದಾದ್ಯಂತ ಜಾರಿಗೆ ತರಲು ಮುಂದಾಗಿದೆ. ಕೇಂದ್ರ ಜಲಶಕ್ತಿ ಸಚಿವಾಲಯವು ಕೆರೆಗಳನ್ನು ತುಂಬಿಸಲು ಮರುಬಳಕೆಯ ನೀರನ್ನು ಪೂರೈಸುವ ಕರ್ನಾಟಕ ಸರ್ಕಾರದ ಕೆ.ಸಿ. ವ್ಯಾಲಿ ಯೋಜನೆಯನ್ನು ಅಧ್ಯಯನ ಮಾಡಿದೆ. ಕರ್ನಾಟಕದಲ್ಲಿ ಸಂಸ್ಕರಿಸಿದ ನೀರಿನಿಂದ ಕೆರೆಗಳನ್ನು ತುಂಬಿಸಿದ್ದರಿಂದ ಅಂತರ್ಜಲ ಮರುಪೂರಣ ಜೊತೆಗೆ ಜಿಲ್ಲೆಯಲ್ಲಿ ಮೀನುಗಾರಿಕೆ ಸೇರಿ ಹಲವು ಬೆಳವಣಿಗೆಯಾಗಿದ್ದು ಯೋಜನೆಯು ಉತ್ತಮ ಫಲಿತಾಂಶವನ್ನು ನೀಡಿದೆ. ಹಾಗಾಗಿ ಈ ಯೋಜನೆಯನ್ನು ಇತರ ರಾಜ್ಯಗಳಲ್ಲಿಯೂ ಅನುಷ್ಠಾನಕ್ಕೆ ತರಲು ಮುಂದಾಗಿದೆ ಎನ್ನಲಾಗಿದೆ.ಈಗಾಗಲೇ ವಿಶ್ವ ಬ್ಯಾಂಕ್ನ ನಿಯೋಗವೊಂದು ಜಿಲ್ಲೆಗೆ ಬೇಟಿ ನೀಡಿ ಕೆ.ಸಿ. ವ್ಯಾಲಿ ಯೋಜನೆಯನ್ನು ಅಧ್ಯಯನ ನಡೆಸಿದೆ ಎಂದು ಜಿಲ್ಲಾಪಂಚಾಯ್ತಿ ಸಿಇಓ ಯುಕೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: Karnataka 2nd PUC Result 2022 Live: ನಾಳೆ ಬೆಳಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ

ಒಟ್ಟಾರೆ 2 ದಶಕಗಳ ಕಾಲ ಮಳೆಯಿಲ್ಲದೆ, ಅಂತರ್ಜಲ ಪಾತಾಳಕ್ಕೆ ಕುಸಿದು ನೀರಿಗಾಗಿ ಪರದಾಡುತ್ತಿದ್ದ ಬರದನಾಡಲ್ಲಿ ಸದ್ಯ ಕೆಸಿ ವ್ಯಾಲಿಯಿಂದ ಬಯಲುಸೀಮೆ ಜಿಲ್ಲೆ ಈಗ ಸಮೃದ್ದವಾಗಿದೆ. ಇದಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಕೆ.ಸಿ.ವ್ಯಾಲಿ ಯೋಜನೆ ಅನುಕೂಲವಾಗಿದ್ದು,ಇದು ಮತ್ತಷ್ಟು ವಿಸ್ತರಣೆಯಾಗಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹರಿಯಲಿ ಬರದನಾಡಲ್ಲಿ ಸಮೃದ್ದಿ ನೆಲೆಸಲಿ ಅನ್ನೋದೆ ಎಲ್ಲರ ಆಶಯ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

Published On - 4:30 pm, Fri, 17 June 22