ಒಂದೇ ದಿನ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸಿ ದಾಖಲೆ ಬರೆದ ಕೆಎಂಎಫ್
ಹಾಲು ಸಂಗ್ರಹದಲ್ಲಿ ಕೆಎಂಎಫ್ ಮತ್ತೆ ದಾಖಲೆ ಬರೆದಿದೆ. ಒಂದೇ ದಿನ ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು ಸಂಗ್ರಹ ಮಾಡುವ ಮೂಲಕ ಕಳೆದ ವರ್ಷದ ತನ್ನದೇ ದಾಖಲೆಯನ್ನು ಹಿಂದಿಕ್ಕಿದೆ. ಮುಂಗಾರು ಮಳೆ ಚುರುಕು, ಹಸಿರು ಹುಲ್ಲು ಹಾಗೂ ಮೇವಿನ ಲಭ್ಯತೆಯ ಕಾರಣದಿಂದ ಹಾಲು ಉತ್ಪಾದನೆ ಹೆಚ್ಚಳವಾಗಿರುವುದು ಹಾಲು ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ಬೆಂಗಳೂರು, ಜೂನ್ 4: ಕರ್ನಾಟಕ ಹಾಲು ಒಕ್ಕೂಟ (KMF) ಒಂದೇ ದಿನ ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು (Nandini Milk) ಸಂಗ್ರಹಿಸುವ ಮೂಲಕ ರಾಜ್ಯದ ಡೈರಿ ವಲಯದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಮೇ 22 ರ ನಂತರ ಈ ದಾಖಲೆ ಸಾಧ್ಯವಾಗಿದೆ. ಅನುಕೂಲಕರವಾದ ಮುಂಗಾರು ಮಳೆ ಮತ್ತು ಹಸಿರು ಮೇವಿನ ಲಭ್ಯತೆಯ ಕಾರಣ ಈ ದಾಖಲೆ ಮಾಡುವುದು ಕೆಎಂಎಫ್ಗೆ ಸಾಧ್ಯವಾಗಿದೆ ಎನ್ನಲಾಗಿದೆ. ಕೆಎಂಎಫ್ ಪ್ರಕಾರ, ಇದು ಕಳೆದ ವರ್ಷ ದಿನವೊಂದರಲ್ಲಿ ಸಂಗ್ರಹಿಸಿದ ಗರಿಷ್ಠ ಹಾಲಿಗಿಂತಲೂ ಹೆಚ್ಚು. ಕಳೆದ ವರ್ಷ ಜೂನ್ 28 ರಂದು 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗಿತ್ತು. ಆನಂತರ ದೈನಂದಿನ ಸರಾಸರಿ ಸಂಗ್ರಹ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡಿತ್ತು. ಇದರೊಂದಿಗೆ, ಹಾಲು ಉತ್ಪಾದಿಸುವ ಪ್ರಮುಖ ರಾಜ್ಯವಾಗಿ ಕರ್ನಾಟಕ ತನ್ನ ಛಾಪು ಮುಂದುವರಿಸಿದೆ.
ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವುದು ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮೇವಿನ ಲಭ್ಯತೆ, ಜಾನುವಾರುಗಳಲ್ಲಿ ಪೌಷ್ಟಿಕತೆ, ಆರೋಗ್ಯ ಸುಧಾರಣೆ ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಕೊಡುಗೆ ನೀಡಿವೆ.
ಇದನ್ನೂ ಓದಿ: ಎಲ್ಲ ವಯಸ್ಕರಿಗೂ ಇಷ್ಟವಾಗುವ ಕೇಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ KMF
ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯ ಅಂಗವಾಗಿ, ಕೆಎಂಎಫ್ ತನ್ನ ಜನಪ್ರಿಯ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 18 ಹೊಸ ಬಗೆಯ ಕೇಕ್ಗಳು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಕೆಎಂಎಫ್ ಮತ್ತು ಅದರ ಅಂಗಸಂಸ್ಥೆಗಳಾದ ಹಾಲು ಒಕ್ಕೂಟಗಳು ಈಗಾಗಲೇ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ನಂದಿನಿ ಹಲ್ವಾ, ಬ್ರೆಡ್, ಬನ್ಗಳು ಮತ್ತು ಐಸ್ ಕ್ರೀಮ್ ಸೇರಿದಂತೆ 150 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇದೀಗ ಹೊಸ ಬೇಕರಿ ಉತ್ಪನ್ನಗಳ ಸೇರ್ಪಡೆಯೊಂದಿಗೆ, ಕೆಎಂಎಫ್ ಉದ್ಯಮ ಮತ್ತಷ್ಟು ವಿಸ್ತರಣೆಯಾದಂತಾಗಿದೆ.