ಗೃಹಲಕ್ಷ್ಮಿ ಹಣದಲ್ಲಿ ಜೆಸಿಬಿ ತರಿಸಿ ಸಾರ್ವಜನಿಕ ರಸ್ತೆ ಸರಿಪಡಿಸಿದ ಕೊಪ್ಪಳದ ಮಹಿಳೆ
ಗೃಹ ಲಕ್ಷ್ಮಿ ಹಣದಿಂದ ಫ್ರಿಜ್ಡ್ಜ್, ಬೈಕ್ ಖರೀದಿ ಮಾಡಿದ್ದನ್ನು ಈ ಹಿಂದೆ ಕೇಳಿದ್ದೇವೆ. ಆದರೆ, ಇದೀಗ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ರೈತ ಮಹಿಳೆ ಸವಿತಾ ನಾಗರಡ್ಡಿ ಎಂಬವರು ಸಾರ್ವಜನಿಕ ರಸ್ತೆಯ ದುರಸ್ತಿಗೆ ಗೃಹಲಕ್ಷ್ಮಿ ಹಣ ಬಳಸಿ ಮಾದರಿಯಾಗಿದ್ದಾರೆ. ಜೆಸಿಬಿ ತರಿಸಿ ಮುಳ್ಳು ಕಂಟಿಗಳನ್ನು ತೆರವುಗೊಳಿಸಿದ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೊಪ್ಪಳ, ಜೂನ್ 4: ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸವಿತಾ ನಾಗರಡ್ಡಿ ಎಬವರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ವಿನಿಯೋಗಿಸಿ ಸಾರ್ವಜನಿಕ ರಸ್ತೆಯನ್ನು ಸ್ವಚ್ಛಗೊಳಿಸಿ ಗಮನ ಸೆಳೆದಿದ್ದಾರೆ. ಯರೇಹಂಚಿನಾಳದಿಂದ ಕೋಟಮಚಗಿ ಸಂಪರ್ಕಿಸುವ ರಸ್ತೆ ಬದಿ ಬೆಳೆದ ಮುಳ್ಳು ಕಂಟಿಗಳನ್ನು ಜೆಸಿಬಿ ತರಿಸಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ರಸ್ತೆಯುದ್ದಕ್ಕೂ ಮುಳ್ಳು ಕಂಟಿಗಳು ಬೆಳೆದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ತೆರವು ಮಾಡಿಕೊಡಿ ಎಂದು ಸ್ಥಳೀಯಾಡಳಿತಕ್ಕೆ ಅವರು ಮನವಿ ಮಾಡಿದ್ದರು. ಬಹಳ ದಿನಗಳಾದರೂ ಆಡಳಿತ ಕ್ರಮ ಕೈಗೊಳ್ಳದ ಕಾರಣ ತಾವೇ ಕ್ರಮ ಕೈಗೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ