ಗ್ರೇಟರ್ ಬೆಂಗಳೂರು ಆಯ್ತು ಇದೀಗ ಗ್ರೇಟರ್ ತುಮಕೂರು: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಬೆಂಗಳೂರು ಮಾದರಿಯಲ್ಲಿ ಗ್ರೇಟರ್ ತುಮಕೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮಾದರಿಯಲ್ಲಿ ನಾವು ಗ್ರೇಟರ್ ತುಮಕೂರು ಮಾಡಲು ಮುಂದಾಗಿದ್ದೇವೆ. ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸದ್ಯ ತುಮಕೂರು ನಗರಕ್ಕೆ ಹೊಸ ರೂಪ ಕೊಡುವ ಚರ್ಚೆ ಜೋರಾಗಿದೆ.

ತುಮಕೂರು, ಡಿಸೆಂಬರ್ 15: ತುಮಕೂರು (Tumakuru) ಮಹಾನಗರ ಪಾಲಿಕೆ ವಿಸ್ತರಣೆ ಭಾರಿ ಚರ್ಚೆ ಸೃಷ್ಟಿಸಿತ್ತು. ಬೆಳೆಯುತ್ತಿರುವ ನಗರದ ವ್ಯಾಪ್ತಿಗೆ ಮತ್ತಷ್ಟು ಹಳ್ಳಿ ಸೇರಿಸುವ ಪ್ರಸ್ತಾವನೆ ಸರ್ಕಾರಕ್ಕೆ ತಲುಪಿತ್ತು. ಆದರೆ ಈಗ ಇದರ ಜೊತೆಗೆ ಮತ್ತೊಂದು ಪ್ರಸ್ತಾವನೆ ಸರ್ಕಾರದ ಅಂಗಳಕ್ಕೆ ತಲುಪಿದ್ದು, ತುಮಕೂರು ಮಹಾನಗರ ಪಾಲಿಕೆಯನ್ನು ಬೆಂಗಳೂರು ಮಾದರಿ ಗ್ರೇಟರ್ ತುಮಕೂರು ಮಾಡುವ ವಿಚಾರ ಮುನ್ನೆಲೆಗೆ ಬಂದಿದೆ.
ಗ್ರೇಟರ್ ತುಮಕೂರನ್ನಾಗಿ ಮಾಡಲು ಪ್ರಸ್ತಾವನೆ ಸಲ್ಲಿಕೆ
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತುಮಕೂರು ನಗರಕ್ಕೆ ಹೊಸ ರೂಪ ಕೊಡುವ ಚರ್ಚೆ ಸದ್ಯ ಜೋರಾಗಿದೆ. ತುಮಕೂರು ನಗರಕ್ಕೆ ಒಂದಷ್ಟು ಹಳ್ಳಿಗಳನ್ನು ಸೇರಿಸಿಕೊಳ್ಳುವ ಚಿಂತನೆ ಈ ಹಿಂದೆ ನಡೆಸಲಾಗಿತ್ತು. ಈ ಬಗ್ಗೆ ಆಕ್ಷೇಪದ ಮಾತು ಸಹ ಕೇಳಿ ಬಂದಿತ್ತು. ಆ ವಿಚಾರ ಇನ್ನು ಚಾಲ್ತಿಯಲ್ಲಿರುವ ನಡುವೆಯೇ ಬೆಳೆಯುತ್ತಿರುವ ತುಮಕೂರು ನಗರವನ್ನು ಬೆಂಗಳೂರಿನ ಮಾದರಿಯಲ್ಲೇ ಅಭಿವೃದ್ಧಿಪಡಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ತುಮಕೂರು ಪಾಲಿಕೆಯನ್ನು ವಿಸ್ತರಿಸಿ ಗ್ರೇಟರ್ ತುಮಕೂರನ್ನಾಗಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದನ್ನೂ ಓದಿ: ರಸ್ತೆ, ಚರಂಡಿ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ? ಚರ್ಚೆಗೆ ಗ್ರಾಸವಾದ ಪರಮೇಶ್ವರ್ ಹೇಳಿಕೆ
ಈ ಬಗ್ಗೆ ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಮಹತ್ವದ ಸುಳಿವು ನೀಡಿದ್ದು, ಒಂದು ಕಾಲದಲ್ಲಿ ಒಂದೇ ಪಾಲಿಕೆಯಲ್ಲಿದ್ದ ಬೆಂಗಳೂರು ಗ್ರೇಟರ್ ಬೆಂಗಳೂರಾಗಿ ಇಂದು ಐದು ಪಾಲಿಕೆಗಳಾಗಿ ವಿಸ್ತಾರಣೆಗೊಂಡಿದೆ. ನಗರದ ವಿಸ್ತರಣೆ, ಜನಸಂಖ್ಯೆ ಹೆಚ್ಚಳ ಹಾಗೂ ಮೂಲಸೌಕರ್ಯ ಅಗತ್ಯತೆ ಆಧಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಇದೀಗ ಅದೇ ಮಾದರಿಯಲ್ಲಿ ನಾವು ತುಮಕೂರು ನಗರವನ್ನು ಅಭಿವೃದ್ಧಿಪಡಿಸುವ ಚಿಂತನೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ ಎಂದರು.
ಜೊತೆಗೆ ಬೆಳೆಯುತ್ತಿರುವ ಬೆಂಗಳೂರು ಈಗಾಗಲೇ ತುಮಕೂರಿನ ಗಡಿವರೆಗೂ ಬಂದಿದೆ. ಈ ಹಿನ್ನಲೆ ತುಮಕೂರು ಸಹ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಾವು ತುಮಕೂರನ್ನು ಗ್ರೇಟರ್ ಸಿಟಿಯಾಗಿ ಮಾಡುತ್ತೇವೆ. ಅದರಂತೆ ಈಗ ಗ್ರೇಟರ್ ತುಮಕೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಸದ್ಯ ಗ್ರೇಟರ್ ತುಮಕೂರು ಮಾಡುವ ಚಿಂತನೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ಗ್ರೇಟರ್ ತುಮಕೂರು ಯೋಜನೆ ಜಾರಿಯಾದರೇ ನಗರದ ಆಡಳಿತ, ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳಿಗೆ ಹೊಸ ರೂಪ ಸಿಗಲಿದೆ ಎನ್ನುವುದು ಜಿಲ್ಲಾ ಉಸ್ತುವಾರಿ ಸಚಿವರ ಅಭಿಪ್ರಾಯ. ಸದ್ಯ ಈ ಚಿಂತನೆ ಸರ್ಕಾರದ ಹಂತದಲ್ಲಿದ್ದು, ಬದಲಾವಣೆ ಯಾವಾಗ ಅನ್ನೊದು ಸದ್ಯದ ಚರ್ಚೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



