AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್ ಕದಿಯೋಕೆ ಫ್ಲೈಟ್​​ನಲ್ಲಿ ಬರ್ತಿದ್ದ ಖದೀಮರು ಖಾಕಿ ಬಲಗೆ ಬಿದ್ದಿದ್ದೇ ರೋಚಕ!

ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನಕ್ಕೆ ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದ ಹೈಟೆಕ್ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಐಷಾರಾಮಿ ಪಾರ್ಟಿ ಮತ್ತು ಕಾರ್ಯಕ್ರಮಗಳಲ್ಲಿ ಐಫೋನ್ ಸೇರಿದಂತೆ ದುಬಾರಿ ಫೋನ್‌ಗಳನ್ನು ಕದಿಯುವುದು ಈ ಆರೋಪಿಗಳ ಕಾಯಕವಾಗಿತ್ತು. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 14 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊಬೈಲ್ ಕದಿಯೋಕೆ ಫ್ಲೈಟ್​​ನಲ್ಲಿ ಬರ್ತಿದ್ದ ಖದೀಮರು ಖಾಕಿ ಬಲಗೆ ಬಿದ್ದಿದ್ದೇ ರೋಚಕ!
ಸಾಂದರ್ಭಿಕ ಚಿತ್ರ
ಪ್ರದೀಪ್​ ಚಿಕ್ಕಾಟಿ
| Edited By: |

Updated on:Mar 03, 2026 | 2:00 PM

Share

ಬೆಂಗಳೂರು, ಮಾರ್ಚ್​ 03: ದ್ವಿಚಕ್ರ ವಾಹನ ಅಥವಾ ಕಾರಲ್ಲಿ ಬಂದು ಮೊಬೈಲ್​​ಗಳನ್ನು ಎಗರಿಸುವ ಖದೀಮರ ಬಗ್ಗೆ ನೀವು ಸಾಕಷ್ಟು ಕೇಳಿರುತ್ತೀರಿ. ಆದ್ರೆ ಇಲ್ಲೊಂದು ಮೊಬೈಲ್​​ ಕಳ್ಳತನ ಜಾಲವನ್ನು ಭೇದಿಸಿರುವ ಪೊಲೀಸರು ಅಕ್ಷರಶಃ ಶಾಕ್​​ ಆಗಿದ್ದಾರೆ. ಯಾಕೆಂದ್ರೆ ಈ ಕಳ್ಳರು ಮೊಬೈಲ್​​ ಕಳವು ಮಾಡಲೆಂದು ಬರುತ್ತಿದ್ದಿದ್ದು ವಿಮಾನದಲ್ಲಿ. ಈ ವಿಷಯ ನಂಬೋದು ತುಸು ಕಷ್ಟವಾದರೂ ಇದು ಅಕ್ಷರಶಃ ಸತ್ಯ. ಪೊಲೀಸರ ತನಿಖೆ ವೇಳೆ ಈ ಹೈಫೈ ಕಳ್ಳರ ಕರಾಮತ್ತು ಒಂದೊಂದೇ ಬಯಲಾಗಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು ಈ ಖದೀಮರು ಸಣ್ಣ ಪುಟ್ಟ ಮೊಬೈಲ್​​ಗಳನ್ನು ಮುಟ್ಟುತ್ತಲೂ ಇರಲಿಲ್ಲ. ಐಫೋನ್​ ಸೇರಿದಂತೆ ಇತರ ದುಬಾರಿ ಫೋನ್​​ಗಳು ಮಾತ್ರ ಇವರ ಟಾರ್ಗೆಟ್​​ ಆಗಿದ್ದವು. ದೊಡ್ಡ ದೊಡ್ಡ ಪಾರ್ಟಿ, ಕಾರ್ಯಕ್ರಮಗಳಿಗೆ ಎಂಟ್ರಿ ಕೊಡ್ತಿದ್ದ ಆರೋಪಿಗಳು, ಅಲ್ಲಿ ತಮ್ಮ ಕೈಚಳಕ ತೋರುತ್ತಿದ್ದರು. ಜೊತೆಗೆ ಐಷಾರಾಮಿ ಬಸ್​​ಗಳಲ್ಲೂ ಕಳ್ಳತನ ನಡೆಸುತ್ತಿದ್ದರು. ಒಂದೆರಡು ಸಂಗೀತ ಕಾರ್ಯಕ್ರಮಗಳಲ್ಲಿ ಕೇವಲ ಒಂದೇ ಗಂಟೆಯಲ್ಲಿ 14 ಮೊಬೈಲ್​​ಗಳನ್ನು ಇವರು ಕದ್ದಿದ್ದರು. ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣದಲ್ಲಿಯೂ ಆರೋಪಿಗಳು ಮೊಬೈಲ್ ಕಳವು ಮಾಡಿದ್ದು, ಅಲ್ಲಿಂದ ವೈಟ್​​ಫೀಲ್ಡ್ ಕಡೆ ಬರೋವಾಗ ಬಸ್​​ನಲ್ಲಿ ಮತ್ತೊಂದು ಐಫೋನ್ ಎಸ್ಕೇಪ್​​ ಮಾಡಿದ್ದರು. ಈ ಮೊಬೈಲ್​​ ಪತ್ತೆಗಾಗಿ ಪೊಲೀಸರು ಬೆನ್ನುಬಿದ್ದಾಗ ಆರೋಪಿಗಳು ಲಾಕ್​​ ಆಗಿದ್ದಾರೆ.

ಇದನ್ನೂ ಓದಿ: ಸಿಸಿಬಿ ಪೊಲೀಸರ ಮೆಗಾ ರೇಡ್​​; ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್​​ ಸೀಜ್​

ಲಾಡ್ಜ್​​ ಒಂದರಲ್ಲಿ ಕದ್ದ ಮೊಬೈಲ್ ನೋಡುವಾಗ ಎಂಟ್ರಿಕೊಟ್ಟಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದೆಹಲಿ ಮೂಲದ ಜಯಚಂದ್ರ ಮತ್ತು ತರುಣ್ ಬಂಧಿತರಾಗಿದ್ದು, ಇವರಿಂದ 10 ಲಕ್ಷ ಮೌಲ್ಯದ 14 ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್​​ಗಳನ್ನು ಕದಿಯಲೆಂದೇ ಆರೋಪಿಗಳು ದೆಹಲಿಂದ ನಗರಕ್ಕೆ ಫ್ಲೈಟ್​​ನಲ್ಲಿ ಬರುತ್ತಿದ್ದರು ಎಂಬುದು ಗೊತ್ತಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.

ಮನೆಗಳ್ಳರ ಬಂಧನ

ಕಾಶಿಯಾತ್ರೆಗೆ ಹೋಗಿದ್ದವರ ಮನೆ ದೋಚಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪಾಂಡ್ಯರಾಜು, ಪೃಥ್ವಿ ಮತ್ತು ಮಂಜುನಾಥ್ ಬಂಧಿತರಾಗಿದ್ದು, ಲಾಕ್ ಮಾಡಿದ ಮನೆಗಳನ್ನು ಟಾರ್ಗೆಟ್ ಮಾಡಿ ಇವರು ಕಳ್ಳತನ ಮಾಡುತ್ತಿದ್ದರು. ಕಾಶಿಯಾತ್ರೆಗೆ ಹೋಗಿದ್ದವರ ಮನೆಗೀ ಇವರು ಕನ್ನ ಹಾಕಿದ್ದು, ಮನೆಯವರು ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತರ ಪೈಕಿ ಪಾಂಡ್ಯರಾಜು ಮೇಲೆ ಅಮೃತಹಳ್ಳಿ, ವೈಟ್ ಫೀಲ್ಡ್, ಕಲಾಸಿಪಾಳ್ಯ, ಬೆಳ್ಳಂದೂರಿನಲ್ಲಿ ಮನೆಗಳ್ಳತನ ಪ್ರಕರಣಗಳು ಇವೆ ಎನ್ನುವುದು ಗೊತ್ತಾಗಿದೆ. ಆರೋಪಿಗಳಿಂದ 44 ಲಕ್ಷ ಮೌಲ್ಯದ 3 ಕೆಜಿ ಬೆಳ್ಳಿ, 220 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:58 pm, Tue, 3 March 26

Follow Us