ಹೇಮಾವತಿ ಲಿಂಕ್ ಕೆನಾಲ್ ಯೋಜನೆ: ಪ್ರತಿಭಟನಾಕಾರರ ವಿರುದ್ಧದ ಪ್ರಕರಣ ಕೈಬಿಡಲು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಪತ್ರ
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಬಗ್ಗೆ ಕೇಂದ್ರ ಜಲಶಕ್ತಿ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಯೋಜನೆಯ ವಿರುದ್ಧ ಪ್ರತಿಭಟನೆ ಮಾಡಿದವರ ಮೇಲೆ ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿದ್ದಾರೆ. ಪ್ರತಿಭಟನಾಕಾರರ ಮೇಲಿನ ಪ್ರಕರಣ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಬೆಂಗಳೂರು, ಜೂನ್ 4: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ (Hemavati Link Canal Project) ವಿರೋಧಿಸಿ ಬೆಂಗಳೂರು ಶಿವಮೊಗ್ಗ ಹೆದ್ದಾರಿ (Bengaluru Shivamogga Highway) ತಡೆದು ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಕೇಂದ್ರ ಜಲಶಕ್ತಿ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ (V Somanna) ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದಿದ್ದು, ಚುನಾಯಿತ ಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳು ಸೇರಿದಂತೆ ಇತರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಯೋಜನೆಯ ಕುರಿತು ಚರ್ಚಿಸಲು ತುಮಕೂರಿನ ಚುನಾಯಿತ ಪ್ರತಿನಿಧಿಗಳೊಂದಿಗೆ ವಿಶೇಷ ಸಭೆ ಕರೆಯುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಸಭೆಯಲ್ಲಿ ತಾವು ಕೂಡ ಭಾಗವಹಿಸುವುದಾಗಿ ಹೇಳಿದ್ದಾರೆ.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಅನುಷ್ಠಾನಗೊಂಡರೆ ತುಮಕೂರು ಪ್ರದೇಶದ ರೈತರು ತಮ್ಮ ಪಾಲಿನ ನೀರಿನಿಂದ ವಂಚಿತರಾಗಬೇಕಾಗುತ್ತದೆ. ಹೀಗಾಗಿ ಈ ಯೋಜನೆಯನ್ನು ನಿಲ್ಲಿಸಬೇಕೆಂದು ಸೋಮಣ್ಣ ಆಗ್ರಹಿಸಿದ್ದಾರೆ. ಯೋಜನೆ ಸಂಬಂಧ ಈ ಹಿಂದೆಯೇ ಸರ್ಕಾರಕ್ಕೆ ಮನವಿ ಮಾಡಿದ್ದೆ. ಅದರ ಹೊರತಾಗಿಯೂ, ಸರ್ಕಾರ ಯೋಜನೆಯನ್ನು ನಿಲ್ಲಿಸಲಿಲ್ಲ, ಇದು ದುರದೃಷ್ಟಕರ ಎಂದು ಸೋಮಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ತುಮಕೂರಿನ ಜನರಲ್ಲಿ ಅಸಮಾಧಾನ ಉಂಟುಮಾಡಿದೆ. ಸರ್ಕಾರವು ಅವರ ಸಮಸ್ಯೆಯನ್ನು ಪರಿಹರಿಸುವ ಬದಲು, ರೈತರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ ಪ್ರತಿಭಟನೆ ನಡೆಸುತ್ತಿರುವವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಸೋಮಣ್ಣ ಆರೋಪಿಸಿದ್ದಾರೆ.
‘ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿಎನ್ ಮಂಜುನಾಥ್ ಕೂಡ ನನ್ನೊಂದಿಗೆ ಮಾತನಾಡಿ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ’ ಎಂದು ಸೋಮಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿದ್ದ ಇಬ್ಬರು ಸ್ವಾಮೀಜಿ, ಮೂವರು ಶಾಸಕರು ಸೇರಿ 11 ಮಂದಿ ವಿರುದ್ಧ ಎಫ್ಐಆರ್
ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸೋಮಣ್ಣ ಒತ್ತಾಯಿಸಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಎರಡೂ ಕಡೆಯ ತಜ್ಞರನ್ನು, ಯೋಜನೆಯನ್ನು ಬೆಂಬಲಿಸುವ ಮತ್ತು ವಿರೋಧಿಸುವವರನ್ನು ಆ ಸಭೆಗೆ ಆಹ್ವಾನಿಸಬೇಕು ಎಂದೂ ಅವರು ಹೇಳಿದ್ದಾರೆ.