ಚಿತ್ರದುರ್ಗ: ಮಗಳ ಅಡ್ಮಿಷನ್ಗಾಗಿ ಊರಿಗೆ ತೆರಳುತ್ತಿದ್ದ ತಂದೆಯನ್ನ ಮಾರ್ಗ ಮಧ್ಯೆ ಕೊಂದ ಅಪರಿಚಿತರು
ಚಿತ್ರದುರ್ಗದ ರೈಲ್ವೆ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಜೂನ್ 1ರ ರಾತ್ರಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿರುವಂತಹ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಜಿಯೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಉದ್ಯೋಗಿ ಚಿತ್ರದುರ್ಗದಲ್ಲಿ ಕೊಲೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಸದ್ಯ ಪ್ರಕರಣ ಭೇದಿಸಿರುವ ಪೊಲೀಸ್ ಇಬ್ಬರನ್ನು ಬಂಧಿಸಿದ್ದಾರೆ.

ಚಿತ್ರದುರ್ಗ, ಜೂನ್ 04: ಬೆಂಗಳೂರಿನಲ್ಲಿ ಜಿಯೋ ಕಂಪನಿ ಉದ್ಯೋಗಿ ಬಸ್ನಲ್ಲಿ ಇಳಕಲ್ಗೆ (Ilkal) ತೆರಳುತ್ತಿದ್ದರು. ಆದರೆ ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಭೀಕರ ಕೊಲೆ (kill) ಆಗಿದ್ದಾರೆ. ಮದ್ಯ ಸೇವನೆಗಾಗಿ ಬಸ್ ಇಳಿದ ವ್ಯಕ್ತಿ ದುರ್ಗದ ಇಬ್ಬರು ಅಪರಿಚಿತರಿಂದ ಹತ್ಯೆ ಆಗಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ ಖಾಕಿ ಪಡೆ ಜೈಲಿಗಟ್ಟಿದ್ದಾರೆ. ಹಾಗಾದರೆ ಅಸಲಿಗೆ ಅಲ್ಲಿ ಆಗಿದ್ದಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಮುಂದೆ ಇದೆ ಓದಿ.
ನಗರದ ರೈಲ್ವೆ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಜೂನ್ 1ರ ರಾತ್ರಿ ವ್ಯಕ್ತಿಯ ಬರ್ಬರ ಹತ್ಯೆ ನಡೆದು ಹೋಗಿತ್ತು. ಮೈಮೇಲೆ ಬಟ್ಟೆಗಳು ಸಹ ಇಲ್ಲದ ಸ್ಥಿತಿಯಲ್ಲಿ ಶವ ಪತ್ತೆ ಆಗಿತ್ತು. ಮೃತ ದೇಹದ ಗುರುತು ಹಚ್ಚುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಶವದ ಆಸುಪಾಸಿನಲ್ಲಿ ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿಯ ಐಡಿ ಪತ್ತೆ ಆಗಿತ್ತು. ಬಳಿಕ ಮೃತ ವ್ಯಕ್ತಿ ಬೆಂಗಳೂರಿನಲ್ಲಿ ಜಿಯೋ ಕಂಪನಿ ಉದ್ಯೋಗಿ, ಬಾಗಲಕೋಟೆಯ ಇಳಕಲ್ ಮೂಲದ ಬಸವರಾಜ ಎಂಬುವುದು ಗೊತ್ತಾಗಿತ್ತು.
ಇದನ್ನೂ ಓದಿ: ಆರ್ಸಿಬಿಗೆ ಐಪಿಎಲ್ ಟ್ರೋಫಿ: ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ
ಬೆಂಗಳೂರಿನ ಜಿಯೋ ಕಂಪನಿ ಉದ್ಯೋಗಿ ಬಸವರಾಜ ಇಲ್ಲಿಗೆ ಏಕೆ ಬಂದು ಕೊಲೆಯಾದರು ಎಂಬುದೇ ಪೊಲೀಸರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿತ್ತು. ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಬಸವರಾಜ, ಬೆಂಗಳೂರಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದರು. ಆಗಾಗ ಬಸ್ ಮೂಲಕ ಊರಿಗೆ ತೆರಳುತ್ತಿದ್ದರು. ಪತ್ನಿ ಮತ್ತು ಓರ್ವ ಪುತ್ರ, ಓರ್ವ ಪುತ್ರಿ ಇಳಕಲ್ನಲ್ಲೇ ವಾಸವಾಗಿದ್ದಾರೆ. ಪುತ್ರಿಯ ಶಾಲಾ ಅಡ್ಮಿಷನ್ಗಾಗಿ ಊರಿಗೆ ತೆರಳುತ್ತಿದ್ದರು ಎಂಬ ಮಾಹಿತಿ ಕುಟುಂಬದಿಂದ ಪೊಲೀಸಿರಿಗೆ ಸಿಕ್ಕಿದೆ.
ಕುಡಿತದ ಚಟವೇ ಸಾವಿಗೆ ಕಾರಣವಾಯ್ತಾ?
ಬಸವರಾಜ್ ಜಗಳಗಂಟನಲ್ಲ, ಯಾರೊಂದಿಗೂ ದ್ವೇಷ ಕಟ್ಟಿಕೊಂಡವನಲ್ಲ. ಅಕ್ರಮ ಸಂಬಂಧಗಳು, ಹಣದ ವ್ಯವಹಾರ ಯಾವುದೂ ಇಲ್ಲ ಎಂದು ಕುಟುಂಬಸ್ಥರು ಸ್ಪಷ್ಟವಾಗಿ ಹೇಳಿದ್ದರು. ಆದರೆ ಬಸವರಾಜನಿಗೆ ಕುಡಿಯುವ ಚಟವಿತ್ತು ಎಂಬಂಶ ತಿಳಿದಾಗಲೇ ಪೊಲೀಸರಿಗೆ ಕೊಲೆ ಮೂಲ ಹುಡುಕಲು ಸುಳಿವು ಸಿಕ್ಕಿತ್ತು. ಬೆಂಗಳೂರಿನಿಂದ ಹೊರಟಿದ್ದ ಬಸವರಾಜ್ ಬಸ್ ನಿಲ್ಲಿಸಿದ ಊರುಗಳಲ್ಲಿ ಇಳಿದು ಬಾರ್ಗೆ ತೆರಳಿ ಕುಡಿದಿದ್ದಾರೆ.
ಅಂತೆಯೇ ಚಿತ್ರದುರ್ಗದಲ್ಲಿ ಇಳಿದಿದ್ದು, ಬಸ್ ನಿಲ್ದಾಣದ ಎದುರಿಗಿನ ಬಾರ್ಗೆ ತೆರಳಿ ಕುಡಿಯಲು ಕುಳಿತಿದ್ದಾರೆ. ತನ್ನ ಪಾಡಿಗೆ ತಾನು ಕುಡಿದು, ಸ್ನ್ಯಾಕ್ಸ್ ತಿನ್ನುತ್ತ ಏಂಜಾಯ್ ಮಾಡುತ್ತಿದ್ದರು. ಬಸವರಾಜ್ ಹಣವಂತನಾಗಿದ್ದು, ಏಕಾಂಗಿಯಾಗಿ ಕುಳಿತು ಕುಡಿಯುವುದನ್ನು ಗಮನಿಸಿದ ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯ ವಿಜಯ್ ಮತ್ತು ರಹೀಂ ಬಸವರಾಜನ ಟೇಬಲ್ಗೆ ಹೋಗಿ ಕುಳಿತುಕೊಳ್ಳುತ್ತಾರೆ. ಪರಿಚಯ ಮಾಡಿಕೊಂಡು ಫ್ರೆಂಡ್ಲಿಯಾಗಿ ನಡೆದುಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ.
ಬಸವರಾಜ್ ಸಹ ಕುಡಿಯಲು ಕಂಪನಿ ಸಿಕ್ಕಿತೆಂದು ಅದೂ ಇದು ಮಾತನಾಡುತ್ತ ನಶೆಯಲ್ಲಿ ತೇಲ ತೊಡಗಿದ್ದನು. ಮಾತು ಮಾತಿನಲ್ಲೇ ವಿಜಯ್ ಮತ್ತು ರಹೀಂ ಸೇರಿ ಬಸವರಾಜ್ಗೆ ಹೊರಗಡೆ ಹೋಗಿ ಕುಳಿತು ಹಾಯಾಗಿ ಕುಡಿಯೋಣ ಎಂದು ಪುಸಲಾಯಿಸಿ ಕರೆದೊಯ್ದರು. ಚಿತ್ರದುರ್ಗದ ರೈಲ್ವೆ ಸ್ಟೇಷನ್ ಬಳಿಗೆ ಕರೆದೊಯ್ದು ಬಸವರಾಜನ ಹಣದಲ್ಲೇ ಕೊಂಡೊಯ್ದ ಮದ್ಯವನ್ನು ಭರ್ತಿ ಸೇವಿಸಿದ್ದಾರೆ. ಬಳಿಕ ಬಸವರಾಜ ಅಲ್ಲಿಂದ ಹೊರಟಾಗ ಮತ್ತೆ ಮದ್ಯ ಕೊಡಿಸು ಎಂದು ಗಲಾಟೆ ತೆಗೆದಿದ್ದಾರೆ. ಹಣಕ್ಕಾಗಿ ಬೇಡಿಕೆಯಿಟ್ಟು ಗಲಾಟೆ ಮಾಡಿದ್ದಲ್ಲದೇ ಬಟ್ಟೆಯನ್ನು ಹರಿದು ಹಾಕಿದ್ದು, ಈ ವೇಳೆ ಕೆಳಗೆ ಬಿದ್ದ ಬಸವರಾಜ್ ತಲೆ ಮೇಲೆ ಇಟ್ಟಿಗೆ ಹಾಕಿ ಹತ್ಯೆ ಮಾಡಿದ್ದಾರೆ.
ಇಬ್ಬರ ಬಂಧನ
ಮೃತ ಬಸವರಾಜ ಮದ್ಯ ವ್ಯಸನಿ ಆಗಿದ್ದನೆಂಬ ಮಾಹಿತಿ ಆಧರಿಸಿ ಸಿಪಿಐ ಉಮೇಶ್ ತಂಡ ತನಿಖೆಗಿಳಿದಿದ್ದೇ ತಡ ಪ್ರಕರಣ ಬಯಲಾಗಿದೆ. ಪೊಲೀಸರು ಚಿತ್ರದುರ್ಗದ ಬಸ್ ನಿಲ್ದಾಣ ಎದುರಿನ ಬಾರ್ನ ಸಿಸಿಟಿವಿ ಚೆಕ್ ಮಾಡಿದಾಗ ಬಸವರಾಜ್ನನ್ನು ರಹೀಂ ಮತ್ತು ವಿಜಯ್ ಜತೆಗೆ ಕರೆದೊಯ್ದ ವಿಡಿಯೋ ಸಿಕ್ಕಿದೆ. ತಕ್ಷಣಕ್ಕೆ ಇಬ್ಬರೂ ಆರೋಪಿಗಳನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದಾರೆ.
ಕೇವಲ ಮದ್ಯ ಸೇವನೆ ಮಾತ್ರ ಅಲ್ಲದೆ ಗಾಂಜಾ ಸಹ ಸೇವಿಸಿರುವ, ಅದೇ ಅಮಲಿನಲ್ಲೇ ಭೀಕರ ಹತ್ಯೆ ಮಾಡಿದ್ದಾರೆಂಬ ಅನುಮಾನಗಳು ಹೆಚ್ಚಿವೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆ ಕೇಸ್: ಆರೋಪಿ ಅಬ್ದುಲ್ ರಜಾಕ್ ಬಂಧನ
ಮಗಳ ಅಡ್ಮಿಷನ್ಗಾಗಿ ಊರಿಗೆ ತೆರಳುತ್ತಿದ್ದ ಬಸವರಾಜ್ ಕುಡಿಯುವ ದುಶ್ಚಟದಿಂದ ದುರ್ಗದಲ್ಲಿ ಇಳಿದು ಗುರುತು ಪರಿಚಯವಿಲ್ಲದ ದುರುಳರ ಜತೆ ಸಹವಾಸ ಮಾಡಿ ಜೀವ ಕಳೆದುಕೊಂಡಂತಾಗಿದೆ. ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿದ ಖಾಕಿ ಪಡೆ ಜೈಲಿಗಟ್ಟಿದೆ. ಇತ್ತ ಬಸವರಾಜ್ರನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







