AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಹರಾಜಿಗೆ ಕೆಲವೇ ಗಂಟೆಗಳ ಮೊದಲು ಸಿಡಿಲಬ್ಬರದ ಶತಕ ಸಿಡಿಸಿದ ಮಾಜಿ ಆರ್​ಸಿಬಿ ಆಟಗಾರ

ಐಪಿಎಲ್ ಹರಾಜಿಗೆ ಕೆಲವೇ ಗಂಟೆಗಳ ಮೊದಲು ಸಿಡಿಲಬ್ಬರದ ಶತಕ ಸಿಡಿಸಿದ ಮಾಜಿ ಆರ್​ಸಿಬಿ ಆಟಗಾರ

ಪೃಥ್ವಿಶಂಕರ
|

Updated on: Dec 15, 2025 | 5:55 PM

Share

Tim Seifert BBL Century: ಐಪಿಎಲ್ ಮಿನಿ ಹರಾಜು ಸಮೀಪಿಸುತ್ತಿದ್ದಂತೆ, ಆರ್‌ಸಿಬಿಯಿಂದ ಕೈಬಿಟ್ಟಿದ್ದ ಟಿಮ್ ಸೀಫರ್ಟ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಮೆಲ್ಬೋರ್ನ್ ಪರ ಏಕಾಂಗಿ ಹೋರಾಟ ನಡೆಸಿ 102 ರನ್ ಗಳಿಸಿದ ಈ ನ್ಯೂಜಿಲೆಂಡ್ ಆಟಗಾರನಿಗೆ ಐಪಿಎಲ್‌ನಲ್ಲಿ ಬೇಡಿಕೆ ಹೆಚ್ಚಿದ್ದು, ಯಾವ ತಂಡ ಖರೀದಿ ಮಾಡುತ್ತದೆ ಎಂಬ ಕುತೂಹಲ ಮೂಡಿಸಿದೆ. ಇವರ ವಿಕೆಟ್‌ಕೀಪಿಂಗ್ ಸಾಮರ್ಥ್ಯವೂ ತಂಡಗಳಿಗೆ ಲಾಭ.

ಐಪಿಎಲ್ ಮಿನಿ ಹರಾಜಿಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಹರಾಜಿನಲ್ಲಿ ಸಾಕಷ್ಟು ವಿದೇಶಿ ಆಟಗಾರರು ರೇಸ್​ನಲ್ಲಿದ್ದಾರೆ. ಅವರಲ್ಲಿ ಕೆಲವರು ಭಾರಿ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಲ್ಲಿದ್ದಾರೆ. ಅಂತಹವರ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟಿಂಗ್‌ ಹಾಗೂ ಮಾಜಿ ಆರ್​ಸಿಬಿ ಆಟಗಾರ ಟಿಮ್ ಸೀಫರ್ಟ್ ಕೂಡ ಸೇರಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡಿದ್ದ ಸೀಫರ್ಟ್​ಗೆ ತಂಡದಲ್ಲಿ ಆಡುವ ಅವಕಾಶಗಳು ಸಿಗಲಿಲ್ಲ. ಅಲ್ಲದೆ ಹರಾಜಿಗೂ ಮುನ್ನವೇ ಅವರನ್ನು ತಂಡದಿಂದ ಕೈಬಿಡಲಾಯಿತು. ಆರ್​ಸಿಬಿಯಿಂದ ಹೊರಬಿದ್ದ ಬಳಿಕ ಬಿಬಿಎಲ್​ನಲ್ಲಿ ಆಡುತ್ತಿರುವ ಟಿಮ್ ಸೀಫರ್ಟ್ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

ಬಿಗ್ ಬ್ಯಾಷ್ ಲೀಗ್‌ನ ಎರಡನೇ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದ ಸೀಫರ್ಟ್ 56 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಆರು ಸಿಕ್ಸರ್‌ಗಳೊಂದಿಗೆ 102 ರನ್ ಕಲೆಹಾಕಿದರು. ಮೆಲ್ಬೋರ್ನ್ ತಂಡದ ಇತರ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಬಲಗೈ ಆರಂಭಿಕ ಟಿಮ್ ಸೀಫರ್ಟ್ ಅದ್ಭುತ ಇನ್ನಿಂಗ್ಸ್ ಆಡಿದರು. ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಜೋಶ್ ಬ್ರೌನ್ 15 ರನ್‌, ಮೊಹಮ್ಮದ್ ರಿಜ್ವಾನ್ ಕೇವಲ 4 ರನ್, ಮಗಾರ್ಕ್ ಕೂಡ 14 ರನ್‌ಗಳ ಇನ್ನಿಂಗ್ಸ್ ಆಡಿ ಔಟಾದರು.

ಆದರೆ ತಂಡದ ಪರ ಏಕಾಂಗಿ ಹೋರಾಟ ನೀಡಿದ ಟಿಮ್ ಸೀಫರ್ಟ್ ಅದ್ಭುತ ಶತಕ ಗಳಿಸಿದರು. 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೀಫರ್ಟ್ ಆ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದರು. ಸೀಫರ್ಟ್​ಗೆ ಉತ್ತಮ ಸಾಥ್ ನೀಡಿದ ಪೀಕ್ ಕೇವಲ 46 ಎಸೆತಗಳಲ್ಲಿ ಶತಕದ ಜೊತೆಯಾಟ ನಡೆಸಿದರು. ಪೀಕ್ ಕೇವಲ 25 ಎಸೆತಗಳಲ್ಲಿ 50 ರನ್ ಗಳಿಸಿದರೆ, ಟಿಮ್ ಸೀಫರ್ಟ್ 6 ಸಿಕ್ಸರ್‌ಗಳ ಸಹಾಯದಿಂದ ಶತಕ ಸಿಡಿಸಿದರು.

ಟಿಮ್ ಸೀಫರ್ಟ್ ಕಳೆದ ಮೂರು ವರ್ಷಗಳಿಂದ ಐಪಿಎಲ್‌ನಲ್ಲಿ ಆಡಿಲ್ಲ. ಐಪಿಎಲ್‌ನಲ್ಲಿ ಇದುವರೆಗೆ ಕೇವಲ ಮೂರು ಪಂದ್ಯಗಳನ್ನು ಆಡಿರುವ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡು ಪಂದ್ಯಗಳನ್ನು ಮತ್ತು ಕೆಕೆಆರ್ ಪರ ಒಂದು ಪಂದ್ಯವನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲವಾದರೂ, ಸೀಫರ್ಟ್‌ಗೆ ಟಿ20 ಅನುಭವವಿದೆ. ಇದುವರೆಗೆ 269 ಟಿ20 ಇನ್ನಿಂಗ್ಸ್‌ಗಳನ್ನಾಡಿರುವ ಸೀಫರ್ಟ್, 28.62 ಸರಾಸರಿಯಲ್ಲಿ 6698 ರನ್ ಗಳಿಸಿದ್ದಾರೆ, ಇದರಲ್ಲಿ ನಾಲ್ಕು ಶತಕಗಳು ಸೇರಿವೆ. ಅವರು ಒಬ್ಬ ಅದ್ಭುತ ವಿಕೆಟ್ ಕೀಪರ್ ಕೂಡ. ಹೀಗಾಗಿ ಸೀಫರ್ಟ್‌ರನ್ನು ಯಾವ ತಂಡ ಖರೀದಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ