ಪಹಲ್ಗಾಮ್ ದಾಳಿಗೆ ಪಾಕ್ ಉಗ್ರನೇ ಮಾಸ್ಟರ್‌ಮೈಂಡ್; ಲಷ್ಕರ್ ಕಮಾಂಡರ್ ಸಂಚು ಬಯಲಿಗೆಳೆದ ಎನ್‌ಐಎ
ಈ ವರ್ಷ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಭಾರತದ ಪಾಲಿಗೆ ಕರಾಳ ನೆನಪಾಗಿಯೇ ಉಳಿದಿದೆ. ಇಡೀ ಜಗತ್ತನ್ನು ಕಂಗೆಡಿಸಿದ್ದ ಈ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಸರ್ಕಾರ ನೇರ ಆರೋಪ ಮಾಡಿದ್ದರೂ ಪಾಕ್ ಅದನ್ನು ನಿರಾಕರಿಸಿತ್ತು. ಇದೀಗ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಶಾಖೆಯ ನೇತೃತ್ವ ವಹಿಸಿದ್ದ ಪಾಕಿಸ್ತಾನಿ ಭಯೋತ್ಪಾದಕನೇ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಂದು ಎನ್‌ಐಎ ತನ್ನ ವರದಿಯಲ್ಲಿ ಘೋಷಿಸಿದೆ.

ನವದೆಹಲಿ, ಡಿಸೆಂಬರ್ 15: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Terror Attack) ಪ್ರಕರಣದಲ್ಲಿ ಎಲ್‌ಇಟಿ ಕಮಾಂಡರ್ ಸಾಜಿದ್ ಜಾಟ್ ಅವರನ್ನು ಪ್ರಮುಖ ಸಂಚುಕೋರ ಎಂದು ಎನ್‌ಐಎ ಹೆಸರಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಭಾಗಿಯಾಗಿರುವುದು ಬಹಿರಂಗವಾಗಿದ್ದು, ಏಪ್ರಿಲ್ 22ರಂದು 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಸಂಚುಕೋರ ಪಾಕಿಸ್ತಾನಿ ಪ್ರಜೆ ಸಾಜಿದ್ ಸೈಫುಲ್ಲಾ ಜಟ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೆಸರಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಎಂದು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಸಾಜಿದ್ ಜಾಟ್ ಅವರನ್ನು ಹೆಸರಿಸಲಾಗಿದೆ. ಎನ್‌ಐಎ ಹೆಸರಿಸಿದ ಆ ಉಗ್ರ ಸಾಜಿದ್ ಅವರನ್ನು ಹಿಡಿದುಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ ವೇಳೆ ಲಷ್ಕರ್ ಉಗ್ರರಿಗೆ ಸಹಾಯ ಮಾಡಿದ್ದ ಕಾಶ್ಮೀರಿ ವ್ಯಕ್ತಿಯ ಬಂಧನ
ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಅದರ ಮುಂಭಾಗದ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಭಯೋತ್ಪಾದಕ ಸಂಘಟನೆ ಸೇರಿದಂತೆ 7 ಆರೋಪಿಗಳ ವಿರುದ್ಧ ಎನ್‌ಐಎ ಇಂದು ಆರೋಪಪಟ್ಟಿ ಸಲ್ಲಿಸಿದೆ. ಎನ್‌ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಾಜಿದ್ ಜಾಟ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಈ ಪ್ರಕರಣದಲ್ಲಿ ಪಾಕಿಸ್ತಾನದ ಪಿತೂರಿ, ಆರೋಪಿಗಳ ಪಾತ್ರಗಳು ಮತ್ತು ಪೋಷಕ ಪುರಾವೆಗಳನ್ನು ವಿವರಿಸುವ ಆರೋಪಪಟ್ಟಿಯಲ್ಲಿ ಪಹಲ್ಗಾಮ್ ದಾಳಿಯನ್ನು ಯೋಜಿಸುವುದು, ಸುಗಮಗೊಳಿಸುವುದು ಮತ್ತು ಕಾರ್ಯಗತಗೊಳಿಸುವಲ್ಲಿ ನಿಷೇಧಿತ ಎಲ್‌ಇಟಿ/ ಟಿಆರ್‌ಎಫ್‌ನ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಪಾಕ್ ಪ್ರಾಯೋಜಿತ ಭಯೋತ್ಪಾದಕರು ಧರ್ಮ ಆಧಾರಿತವಾಗಿ ಗುರಿಯಾಗಿಟ್ಟುಕೊಂಡ ಈ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ನಾಗರಿಕ ಸಾವನ್ನಪ್ಪಿದ್ದರು.
ಎನ್‌ಐಎ ಪ್ರಕಾರ, ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ 1,597 ಪುಟಗಳ ಆರೋಪಪಟ್ಟಿಯಲ್ಲಿ ಪಾಕಿಸ್ತಾನಿ ನಿಯೋಜಕ ಭಯೋತ್ಪಾದಕ ಸಾಜಿದ್ ಜಾಟ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಪಹಲ್ಗಾಮ್ ದಾಳಿಯ ಕೆಲವು ವಾರಗಳ ನಂತರ, ಜುಲೈ 2025ರಲ್ಲಿ ಶ್ರೀನಗರದ ಡಚಿಗಮ್‌ನಲ್ಲಿ ಆಪರೇಷನ್ ಮಹಾದೇವ್‌ನಲ್ಲಿ ಭಾರತೀಯ ಭದ್ರತಾ ಪಡೆಗಳು ಹತ್ಯೆ ಮಾಡಿದ ಮೂವರು ಪಾಕಿಸ್ತಾನಿ ಭಯೋತ್ಪಾದಕರ ಹೆಸರನ್ನು ಕೂಡ ಎನ್‌ಐಎಯ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ. ಆ ಮೂವರನ್ನು ಫೈಸಲ್ ಜಾಟ್ ಅಲಿಯಾಸ್ ಸುಲೇಮಾನ್ ಶಾ, ಹಬೀಬ್ ತಾಹಿರ್ ಅಲಿಯಾಸ್ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಪಾಕ್ಗೂ ಇರುವ ನಂಟು ಖಾತ್ರಿಯಾಯ್ತು, ಪಿಒಕೆಯಲ್ಲಿ ನಡೆದಿದೆ ದಾಳಿಕೋರನ ಅಂತ್ಯಕ್ರಿಯೆ
ಕಳೆದ 8 ತಿಂಗಳ ಅವಧಿಯಲ್ಲಿ ನಡೆದ ಸೂಕ್ಷ್ಮವಾದ ವೈಜ್ಞಾನಿಕ ತನಿಖೆಯ ಮೂಲಕ ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಿರಂತರವಾಗಿ ಪ್ರಾಯೋಜಿಸುತ್ತಿರುವ ಪಾಕಿಸ್ತಾನಕ್ಕೂ ಪಹಲ್ಗಾಮ್ ದಾಳಿಗೂ ಇರುವ ಸಂಬಂಧವನ್ನು ಎನ್‌ಐಎ ಪತ್ತೆಹಚ್ಚಿದೆ.
ಸಾಜಿದ್ ಜಾಟ್ ಯಾರು?:
ಪಾಕಿಸ್ತಾನದ ಭಯೋತ್ಪಾದಕ ಸಾಜಿದ್ ಜಾಟ್ ಅವರನ್ನು ಹಿಡಿದುಕೊಟ್ಟವರಿಗೆ 10 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿದೆ. ಆತ NIAಯ ಮೋಸ್ಟ್ ವಾಂಟೆಡ್ ಕಾರ್ಯಕರ್ತರಲ್ಲಿ ಒಬ್ಬ. ಅವನ ನಿಜವಾದ ಹೆಸರು ಹಬೀಬುಲ್ಲಾ ಮಲಿಕ್. ಅವನು ಪಂಜಾಬ್ ಪ್ರಾಂತ್ಯದ ಪಾಕಿಸ್ತಾನದ ಕಸೂರ್ ಜಿಲ್ಲೆಯ ನಿವಾಸಿ. ಸೈಫುಲ್ಲಾ, ನೋಮಿ, ನುಮಾನ್, ಲ್ಯಾಂಗ್ಡಾ, ಅಲಿ ಸಾಜಿದ್, ಉಸ್ಮಾನ್ ಹಬೀಬ್ ಮತ್ತು ಶಾನಿ ಸೇರಿದಂತೆ ಹಲವಾರು ಹೆಸರುಗಳಿಂದ ಅವನನ್ನು ಕರೆಯಲಾಗುತ್ತದೆ.
ಎಲ್‌ಇಟಿ ಮತ್ತು ಅದರ ಮುಂಭಾಗದ ಸಂಘಟನೆಯಾದ ಟಿಆರ್‌ಎಫ್‌ನ ಉನ್ನತ ಕಮಾಂಡರ್ ಸಾಜಿದ್ ಜಾಟ್ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಲವಾರು ಪ್ರಮುಖ ಭಯೋತ್ಪಾದಕ ದಾಳಿಗಳ ಹಿಂದಿನ ಪ್ರಮುಖ ಮಾಸ್ಟರ್‌ಮೈಂಡ್ ಎನ್ನಲಾಗಿದೆ. ಸಾಜಿದ್ ಜಾಟ್ ಇಸ್ಲಾಮಾಬಾದ್‌ನಲ್ಲಿರುವ ಎಲ್‌ಇಟಿ ಪ್ರಧಾನ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ತನಿಖಾ ಸಂಸ್ಥೆ ಅನುಮಾನ ವ್ಯಕ್ತಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




