AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್ ದಾಳಿ ವೇಳೆ ಲಷ್ಕರ್ ಉಗ್ರರಿಗೆ ಸಹಾಯ ಮಾಡಿದ್ದ ಕಾಶ್ಮೀರಿ ವ್ಯಕ್ತಿಯ ಬಂಧನ

ಪಹಲ್ಗಾಮ್ ಭಯೋತ್ಪಾದಕ ದಾಳಿ ವೇಳೆ ಭಯೋತ್ಪಾದಕರಿಗೆ ಸಹಾಯ ಮಾಡಿದ ಲಷ್ಕರ್ ಆಪರೇಟರ್ ಒಬ್ಬನನ್ನು ಬಂಧಿಸಲಾಗಿದೆ. ಆ ವ್ಯಕ್ತಿಯನ್ನು ಕುಲ್ಗಾಮ್ ನಿವಾಸಿ ಮೊಹಮ್ಮದ್ ಯೂಸುಫ್ ಕಟಾರಿಯಾ ಎಂದು ಗುರುತಿಸಲಾಗಿದೆ. ಆಪರೇಷನ್ ಮಹಾದೇವ್ ಸಮಯದಲ್ಲಿ ಭಯೋತ್ಪಾದಕರಿಂದ ವಶಪಡಿಸಿಕೊಂಡ ಉಪಕರಣಗಳನ್ನು ಪರಿಶೀಲಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪಹಲ್ಗಾಮ್ ದಾಳಿ ವೇಳೆ ಲಷ್ಕರ್ ಉಗ್ರರಿಗೆ ಸಹಾಯ ಮಾಡಿದ್ದ ಕಾಶ್ಮೀರಿ ವ್ಯಕ್ತಿಯ ಬಂಧನ
Pahalgam Terror Attack
ಸುಷ್ಮಾ ಚಕ್ರೆ
|

Updated on: Sep 24, 2025 | 7:29 PM

Share

ಶ್ರೀನಗರ, ಸೆಪ್ಟೆಂಬರ್ 24: ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Terror Attack) ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಬೈಸಾನ್ ಕಣಿವೆಯಲ್ಲಿ 26 ಪ್ರವಾಸಿಗರ ಹತ್ಯೆಗೆ ಕಾರಣವಾದ ಭಯೋತ್ಪಾದಕರಿಗೆ ವಸತಿ ಸೌಕರ್ಯ ನೀಡಿ, ಬೆಂಬಲ ನೀಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಪ್ರಮುಖ ಲಷ್ಕರ್-ಎ-ತೈಬಾ (ಟಿಆರ್‌ಎಫ್) ಕಾರ್ಯಕರ್ತನನ್ನು ಬಂಧಿಸಿದ್ದಾರೆ.

ಆಪರೇಷನ್ ಮಹಾದೇವ್ ಸಮಯದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳ ವಿವರವಾದ ವಿಶ್ಲೇಷಣೆಯ ನಂತರ ಕಾಶ್ಮೀರಿ ವ್ಯಕ್ತಿಯನ್ನು ಬಂಧಿಸಲಾಯಿತು. ಆರೋಪಿಯನ್ನು ಕುಲ್ಗಾಮ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಯೂಸುಫ್ ಕಟಾರಿಯಾ ಎಂದು ಗುರುತಿಸಲಾಗಿದೆ. ಆತನಿಗೆ 26 ವರ್ಷವಾಗಿದ್ದು, ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ನಿಂದ ಮಸೂದ್ ಅಜರ್ ಕುಟುಂಬ ಛಿದ್ರವಾಯಿತು; ಕೊನೆಗೂ ಒಪ್ಪಿಕೊಂಡ ಜೈಶ್ ಕಮಾಂಡರ್

ಮೊಹಮ್ಮದ್ ಯೂಸುಫ್ ಕಟಾರಿಯಾ ಅವರ ಸಹಚರರನ್ನು ಗುರುತಿಸಲು ಮತ್ತು ವಿಶಾಲವಾದ ಎಲ್‌ಇಟಿ (ಟಿಆರ್‌ಎಫ್) ಜಾಲವನ್ನು ಕಿತ್ತುಹಾಕಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕ ಘಟಕಗಳನ್ನು ದುರ್ಬಲಗೊಳಿಸುವ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವ ತಮ್ಮ ನಿರ್ಧಾರವನ್ನು ಅವರು ಪುನರುಚ್ಚರಿಸಿದ್ದಾರೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಒಂದು ಬಣವು ಪಹಲ್ಗಾಮ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಮೇ 22ರಂದು ಶ್ರೀನಗರದ ಬಳಿಯ ಡಚಿಗಾಮ್‌ನಲ್ಲಿ ಭಯೋತ್ಪಾದಕರು ಆಶ್ರಯ ಪಡೆದಿದ್ದಾರೆ ಎಂದು ಭದ್ರತಾ ಪಡೆಗಳಿಗೆ ಗುಪ್ತಚರ ಮಾಹಿತಿ ದೊರೆತ ನಂತರ ಆಪರೇಷನ್ ಮಹಾದೇವ್ ಕಾರ್ಯಾಚರಣೆ ಪ್ರಾರಂಭವಾಯಿತು. ಜುಲೈ 28ರಂದು ದಾಳಿಯನ್ನು ಪ್ರಾರಂಭಿಸಲಾಯಿತು.

ಇದನ್ನೂ ಓದಿ: ಪಾಕಿಸ್ತಾನದ ಅಮಾಯಕರ ಸಾವು ತಪ್ಪಿಸಲು ಮಧ್ಯರಾತ್ರಿ ಆಪರೇಷನ್ ಸಿಂಧೂರ್‌ ದಾಳಿ ನಡೆಸಿದೆವು; ಸಿಡಿಎಸ್ ಅನಿಲ್ ಚೌಹಾಣ್

ದಚಿಗಮ್ ರಾಷ್ಟ್ರೀಯ ಉದ್ಯಾನವನದ ಬಳಿಯ ಹರ್ವಾನ್ ಪ್ರದೇಶದ ಮುಲ್ನಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಸುಲೈಮಾನ್ ಅಲಿಯಾಸ್ ಆಸಿಫ್ ಮತ್ತು ಅವನ ಇಬ್ಬರು ಸಹಚರರನ್ನು ಭಾರತೀಯ ಸೇನೆಯ ಪ್ಯಾರಾ ಕಮಾಂಡೋಗಳು ಗುಂಡಿಕ್ಕಿ ಕೊಂದಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ