ಶಬರಿಮಲೆ ಯಾತ್ರೆ ಮುಗಿಸಿ ಬಂದು ಭರ್ಜರಿ ಪಾರ್ಟಿ: ಬಿರಿಯಾನಿ ಸೇವಿಸುವ ವೇಳೆ ಬಿತ್ತು ಹೆಣ
ಅವರು ಒಟ್ಟಿಗೆ ಇರುವ ಕುಚುಕು ಗೆಳೆಯರ ಬಳಗದವರು. ಯಾವುದೇ ಕಾರ್ಯಕ್ರಮವಿರಲಿ, ಸಭೆ ಸಮಾರಂಭವಿರಲಿ, ಊರಿನ ವಿಶೇಷವಿರಲಿ, ಯಾತ್ರೆ ಇರಲಿ ಎಲ್ಲಾ ಕಡೆಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಸ್ನೇಹಿತರ ಸ್ನೇಹದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಭಾನುವಾರ ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿಕೊಂಡು ಬಿರಿಯಾನಿ ಪಾರ್ಸೆಲ್ ತಂದು ಮಾಮೂಲಿ ಜಾಗದಲ್ಲಿ ಕುಳಿತಿದ್ದ ಸ್ನೇಹಿತರ ನಡುವೇ ಜಗಳ ತಾರಕಕ್ಕೇರಿದೆ. ವಾಗ್ವಾದ ಮಿತಿ ಮೀರಿ ಹೊಡೆದಾಟ ನಡೆದು ಓರ್ವ ಸ್ನೇಹಿತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಉಡುಪಿ, (ಡಿಸೆಂಬರ್ 15): ಸ್ನೇಹ (Friends) ಎಂದರೆ ಅದು ರಕ್ತ ಸಂಬಂಧಕ್ಕಿಂತ ಪವಿತ್ರವಾದದ್ದು ಎನ್ನುವ ಮಾತಿ ಆಗಾಗ ಕೇಳಿ ಬರುತ್ತದೆ. ಯಾವುದೇ ಮುಚ್ಚು ಮರೆ ಇಲ್ಲದೇ ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಾಗುವ ಸ್ನೇಹಿತರ ನಡುವೇ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದರೆ ಏನಾಗಬಾರದೋ ಅದೇ ಆಗಿದೆ. ಹೌದು…ಸ್ನೇಹಿತರು ಸೇರಿಕೊಂಡು ಮತ್ತೋರ್ವ ಗೆಳೆಯನ್ನು ಹತ್ಯೆ ಮಾಡಿರುವ ಘಟನೆ ಉಡುಪಿಯ (Udupi) ಬ್ರಹ್ಮಾವರ ತಾಲೂಕು ಕೋಟ ಪಡುಕರೆಯಲ್ಲಿ ನಡೆದಿದೆ. ಆಕ್ಸಿಸ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂತೋಷ್ ಪೂಜಾರಿ(30) ಕೊಲೆಯಾದ ಯುವಕ. ಶಬರಿಮಲೆ ಯಾತ್ರೆ ಮುಗಿಸಿ ಮಾಲೆ ತೆಗೆದ ಬಳಿಕ ಸ್ನೇಹಿತರು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದು, ಇನ್ನೇನು ಎಣ್ಣೆ ಹೊಡೆಯುವುದು ಮುಗಿದು ಬಿರಿಯಾನಿ ಸೇವಿಸಬೇಕೆನ್ನುವಷ್ಟರಲ್ಲೇ ಸಂತೋಷನ ಹೆಣ ಬಿದ್ದಿದೆ. ಪಾರ್ಟಿಯಲ್ಲಿ ಕ್ಷುಲ್ಲಕ ಕಾರಣ ಶುರುವಾದ ಗಲಾಟೆ ಸ್ನೇಹಿತ ಕೊಲೆಯಲ್ಲಿ ಅಂತ್ಯವಾಗಿದೆ.
ಶಬರಿಮಲೆ ಯಾತ್ರೆಗೆ ತೆರಳಿ ಮರಳಿ ಬಂದ ಖುಷಿಗೆ ಡಿ.14ರ ಸಂಜೆ ಒಂದಾಗಿ ಸೇರಿ ಬಾರ್‌ನಲ್ಲಿ ಪಾರ್ಟಿ ಮುಗಿಸಿ ಸಂತೋಷದಲ್ಲಿ ತಮ್ಮ ಮಾಮೂಲಿ ಸೇರುವ ಜಾಗಕ್ಕೆ ಹೋಗಿದ್ದರು. ಹೋಗುವಾಗ ಒಟ್ಟಿಗೆ ಊಟ ಮಾಡುವ ಉದ್ದೇಶಕ್ಕೆ ಬಿರಿಯಾನಿ ಪಾರ್ಸಲ್ ತಂದು ಊಟಕ್ಕೆ ಕುಳಿತವರ ನಡುವೆ ಸಣ್ಣ ಮನಸ್ತಾಪ ಉಂಟಾಗಿದೆ. ಸಂತೋಷ್ ಪೂಜಾರಿ, ಸಚಿನ್, ಚೇತನ್, ಕೌಶಿಕ್, ಸುಜನ್ ಹಾಗೂ ದರ್ಶನ್ ಒಟ್ಟಿಗೆ ಊಟ ಮಾಡುವಾಗ ಸಂತೋಷ್ ಅವರ ಕುಟುಂಬ ವಿಚಾರ ಹಾಗೂ ಕುಡಿತದ ವಿಷಯದಲ್ಲಿ ದರ್ಶನ್, ಕೌಶಿಕ್, ಅಂಕಿತ್ ಹಾಗೂ ಸುಜನ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಜಗಳದ ವೇಳೆ ಅವಾಚ್ಯ ಪದ ಬಳಸಿ ಜಗಳ ತಾರಕಕ್ಕೇರಿದ್ದು,ನಾಲ್ವರು ಸೇರಿ ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಎಣ್ಣೆ ಪಾರ್ಟಿಗೆ ಬಂದು ಗೆಳೆಯನ ಹೆಂಡ್ತಿ ಜತೆ ಚಕ್ಕಂದ: ಕಣ್ಣಾರೆ ಕಂಡ ಪತಿ ಮಾಡಿದ್ದೇನು ಗೊತ್ತಾ?
ದರ್ಶನ್ ಸಂತೋಷ್ ಅವರ ಕುತ್ತಿಗೆಯ ಹಿಂಭಾಗಕ್ಕೆ ಕೈಯಿಂದ ಬಲವಾಗಿ ಹೊಡೆದಿದ್ದು, ಕೌಶಿಕ್ ಕೂಡ ಕೈಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ರಜತ್ ಎನ್ನುವವರು ಮಧ್ಯಪ್ರವೇಶಿಸಿ ಜಗಳ ತಡೆಯಲು ಯತ್ನಿಸಿದರೂ, ಹಲ್ಲೆಯಿಂದ ಸಂತೋಷ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ.
ಹಲ್ಲೆಗೊಳಗಾದ ಸಂತೋಷ್ ಕುಸಿದು ಬಿದ್ದ ತಕ್ಷಣ ಗಾಬರಿಯಾದ ಉಳಿದವರು ಅಲ್ಲಿಂದ ಪರಾರಿಯಾಗಿದ್ದಾರೆ. ಸಂತೋಷ್ ಅವರ ಬಾಯಿಯಿಂದ ನೊರೆ ಬರುತ್ತಿದ್ದು ಮಾತನಾಡದ ಸ್ಥಿತಿಯಲ್ಲಿ ಇದ್ದ ಹಿನ್ನೆಲೆಯಲ್ಲಿ, ಜಗಳ ಬಿಡಿಸಲು ಯತ್ನಿಸಿದ ರಜತ್, ಸಚಿನ್, ಚೇತನ್ ಹಾಗೂ ಪ್ರಕಾಶ್ ಸಹಾಯದಿಂದ ಕಾರಿನಲ್ಲಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿ, ಸಂತೋಷ್ ಈಗಾಗಲೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಬಳಿಕ ರಜತ್ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಪೊಲೀಸರು, ದರ್ಶನ್ (21), ಕೌಶಿಕ್ (21), ಅಂಕಿತ (19), ಸುಜನ್ (21) ಎನ್ನುವರನ್ನು ಬಂಧಿಸಿದ್ದಾರೆ. ಇನ್ನು ಮೃತ ಸಂತೋಷ್ ಮೊದಲೇ ಹೃದಯ ರೋಗದಿಂದ ಬಳಲುತ್ತಿದ್ದು, ಇತ್ತೀಚಿಗಷ್ಟೇ ಸ್ಟಂಟ್ ಹಾಕಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಒಟ್ಟಾರೆಯಾಗಿ ಸಂತೋಷದಲ್ಲಿ ಕಳೆಯ ಬೇಕಾದ ಸಮಯದಲ್ಲಿ ಸ್ನೇಹಿತರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿರುವುದು ಸ್ಥಳೀಯರಿಗೆ ಆತಂಕ ತಂದಿದ್ದು, ಒಟ್ಟಿಗೆ ದಿನ ಕಳೆಯುತ್ತಿದ್ದವರೇ ಈ ರೀತಿಯಾಗಿ ಪ್ರಾಣ ತೆಗೆದರೆ ಇನ್ಯಾರನ್ನು ನಂಬುವುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.



