Kolar: ಅಗ್ನಿಪಥ್​ಗೆ ಸೇರುವ ಯುವಕರ ಆಸೆಗೆ ನೆರವಾಗುತ್ತಿದೆ ಕೋಲಾರ ಸ್ಪೋರ್ಟ್ಸ್​ ಕ್ಲಬ್

| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2022 | 9:45 AM

ಕೋಲಾರ ಸ್ಟೋರ್ಟ್ಸ್​ ಕ್ಲಬ್​ ಅಗ್ನಿವೀರರಾಗಲು ಬಯಸುವ ಯುವಕ ಯುವತಿಯರಿಗೆ ಉಚಿತವಾಗಿ ದೈಹಿಕ ತರಬೇತಿಯನ್ನು ನೀಡುತ್ತಿದೆ. ಮಾಜಿ ಸೈನಿಕರಾದ ಕೃಷ್ಣಮೂರ್ತಿ ಮತ್ತು ಬ್ಲಾಕ್​ ಕಮ್ಯಾಂಡೋ ತರಬೇತಿ ಪಡೆದಿರುವ ಸುರೇಶ್​​ರಿಂದ ತರಬೇತಿ ನೀಡಲಾಗುತ್ತಿದೆ.

Kolar: ಅಗ್ನಿಪಥ್​ಗೆ ಸೇರುವ ಯುವಕರ ಆಸೆಗೆ ನೆರವಾಗುತ್ತಿದೆ ಕೋಲಾರ ಸ್ಪೋರ್ಟ್ಸ್​ ಕ್ಲಬ್
ವ್ಯಾಯಾಮದಲ್ಲಿ ನಿರತರಾದ ಕೋಲಾರ ಸ್ಪೋರ್ಟ್ಸ್​ ಕ್ಲಬ್ ವಿದ್ಯಾರ್ಥಿಗಳು
Follow us on

ಕೋಲಾರ: ಅದು ದೇಶಕಾಯುವ ಯೋಧರನ್ನು ಸಿದ್ಧ ಮಾಡುವ ಸಲುವಾಗಿ ಶ್ರಮಿಸುತ್ತಿರುವ ನಿರ್ವಾರ್ಥ ಸಂಸ್ಥೆ. ಈಗ ದೇಶದಾದ್ಯಂತ ಹಲವು ರೀತಿಯ ವಿವಾದಕ್ಕೆ ಕಾರಣವಾಗಿದ್ದ, ಅಗ್ನಿಪಥ್ (Agneepath) ​ ಯೋಜನೆಗೆ ಬೇಕಾದ ನೂರಾರು ಅಗ್ನಿವೀರರನ್ನು ಸದ್ದಿಲ್ಲದೆ ಸಿದ್ದಮಾಡುತ್ತಿದೆ. ನೂರಾರು ಯುವಕ ಯುವತಿಯರಿಗೆ ದೈಹಿಕ ತರಬೇತಿ ನೀಡುವ ಮೂಲಕ ಅಗ್ನಿವೀರರು ಸಿದ್ದರಾಗುತ್ತಿದ್ದಾರೆ. ಕೋಲಾರದಲ್ಲಿ ಸಿದ್ದವಾಗುತ್ತಿದ್ದಾರೆ ಅಗ್ನಿಪಥ್​ಗೆ ಸೇರುವ ಮನಸ್ಸುಳ್ಳ ಅಗ್ನಿವೀರರು! ರನ್ನಿಂಗ್​, ವಾಕಿಂಗ್, ಪುಶ್​ ಅಪ್​, ಸೇರಿ ಹತ್ತಾರು ರೀತಿಯ ಕಸರತ್ತುಗಳನ್ನು ಮಾಡಿಸುತ್ತಿರುವ ಮಾಜಿ ಯೋಧರು ಹಾಗೂ ಬ್ಲಾಕ್​ ಕಮ್ಯಾಂಡೋಗಳು. ನಿತ್ಯ ತರಬೇತಿ ನಿರತ ಯುವಕ ಯುವತಿಯರ ಬಾಯಲ್ಲಿ ಜೈಹಿಂದ್​ ಜೈಹಿಂದ್ ಅನ್ನೋ ಘೋಷಣೆ ಇಂಥಾದೊಂದು ಘಟನೆ ನಮಗೆ ಕಂಡು ಬಂದಿದ್ದು ಕೋಲಾರದಲ್ಲಿ. ಸೈನ್ಯಕ್ಕೆ ಸೇರಬೇಕು ದೇಶ ಸೇವೆ ಮಾಡಬೇಕು ಅನ್ನೋದು ಅದೆಷ್ಟೋ ಸಾವಿರಾರು ಯುವಕ ಯುವತಿಯರ ಕನಸು. ಅದರಲ್ಲಿ ಹಲವರಿಗೆ ಸರಿಯಾದ ತರಬೇತಿ ಮಾರ್ಗದರ್ಶನ ಸಿಗದೆ ಅವಕಾಶಗಳನ್ನು ಕಳೆದುಕೊಳ್ಳುವವರೇ ಹೆಚ್ಚು. ಅದರ ಜೊತೆಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದ ಅಗ್ನಿಫತ್​ ಅನ್ನೋ ಯೋಜನೆ ದೇಶದಾದ್ಯಂತ ಹಲವು ವಿವಾದಕ್ಕೂ ಕಾರಣವಾಗಿತ್ತು. ಹೀಗೆ ಹಲವು ವಿವಾದಗಳ ನಡುವೆಯೇ ಕೋಲಾರದಲ್ಲೊಂದು ಸಂಸ್ಥೆ ಸದ್ದಿಲ್ಲದೆ ಅಗ್ನಿಪಥ್​ಗೆ ಸೇರಲು ಮನಸ್ಸುಳ್ಳ ಅಗ್ನಿವೀರರನ್ನು ತಯಾರು ಮಾಡುತ್ತಿದೆ.

ಇದನ್ನೂ ಓದಿ: Jammu Kashmir: ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಪೊಲೀಸ್ ಅಧಿಕಾರಿ ಬಲಿ; ಹಲವರಿಗೆ ಗಾಯ

ಕೋಲಾರ ಸ್ಪೋರ್ಟ್ಸ್​ ಕ್ಲಬ್​ ನಿರಂತ ಪ್ರಯತ್ನ..!

ಕೋಲಾರ ಸ್ಟೋರ್ಟ್ಸ್​ ಕ್ಲಬ್​ ಅಗ್ನಿವೀರರಾಗಲು ಬಯಸುವ ಯುವಕ ಯುವತಿಯರಿಗೆ ಉಚಿತವಾಗಿ ದೈಹಿಕ ತರಬೇತಿಯನ್ನು ನೀಡುತ್ತಿದೆ. ಮಾಜಿ ಸೈನಿಕರಾದ ಕೃಷ್ಣಮೂರ್ತಿ ಮತ್ತು ಬ್ಲಾಕ್​ ಕಮ್ಯಾಂಡೋ ತರಬೇತಿ ಪಡೆದಿರುವ ಸುರೇಶ್​​ ಅವರಿಂದ ಜಿಲ್ಲೆಯ ಸುಮಾರು 180ಕ್ಕೂ ಹೆಚ್ಚು ಯುವಕ ಯುವತಿಯರಿಗೆ ಪ್ರತಿನಿತ್ಯ ದೈಹಿಕ ತರಬೇತಿಯನ್ನು ನೀಡಲಾಗುತ್ತಿದೆ. ಕೋಲಾರ ಹೊರವಲಯ ರಾಷ್ಟ್ರೀಯ ಹೆದ್ದಾರಿ ಬಳಿ ರನ್ನಿಂಗ್​, ವಾಮ್​ಅಪ್​, ಮಾಡಿ ನಂತರ ಕೋಲಾರ ನಗರ ರೈಲು ನಿಲ್ದಾಣದ ಬಳಿ ಸೈನ್ಯ ಸೇರಲು ಬೇಕಾದ ಕೆಲವೊಂದು ಕಸರತ್ತು ಹಾಗೂ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ. ಕೋಲಾರ ಸ್ಪೋರ್ಟ್ಸ್​ ಕ್ಲಬ್​ ಇದೇ ಮೊದಲಲ್ಲ 1998 ರಿಂದಲೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಲವು ಕ್ರೀಡೆಗೆ ಸೇರುವ ಕ್ರೀಡಾಪಟುಗಳಿಗೆ ತರಬೇತಿ, ಸೈನ್ಯಕ್ಕೆ ಸೇರ ಬಯಸುವ ಯುವಕ ಯುವತಿಯರಿಗೆ ಮಾಜಿ ಯೋಧರು, ದೈಹಿಕ ಶಿಕ್ಷಕರುಗಳಿಂದ ಸೈನ್ಯಕ್ಕೆ ಸೇರಲು ಬೇಕಾದ ತರಬೇತಿಯನ್ನು ನೀಡುತ್ತಾ ಬಂದಿದೆ. ಕೋವಿಡ್​ ಸೇರಿದಂತೆ ಹಲವು ಕಾರಣಳಿಂದಾಗಿ ತರಬೇತಿ ನಿಲ್ಲಿಸಿದ್ದ ತರಬೇತಿ ಈಗ ಮತ್ತೆ ಕೋಲಾರ ಸ್ಟೋರ್ಟ್ಸ್​ ಕ್ಲಬ್​ ಅಗ್ನಿವೀರರಿಗೆ ತರಬೇತಿ ಆರಂಭಿಸಿದ್ದೇವೆ ಎನ್ನುತ್ತಾರೆ ಕೋಲಾರ ಸ್ಪೋರ್ಟ್ಸ್​ ಕ್ಲಬ್​ನ ಸಾಮಾ ಬಾಬು, ಪುರುಷೋತ್ತಮ್​ ಮೇಸ್ಟ್ರು.

ಇದನ್ನೂ ಓದಿ; Agnipath: ಅಗ್ನಿಪಥ್ ಯೋಜನೆ ಖಂಡಿಸಿ ಬೆಳಗಾವಿ ಬಂದ್ ಕರೆಗೆ ಜನರು ಬೆಂಬಲಿಸಬಾರದು: ಲಕ್ಷ್ಮಣ್ ಸವದಿ ಮನವಿ

ಅಗ್ನಿವೀರರ ತರಬೇತಿಗೆ ರಾಜ್ಯದೆಲ್ಲೆಡೆಯಿಂದ ಸಿಕ್ಕಾಪಟ್ಟೆ ಡಿಮ್ಯಾಂಡ್​..!

ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಅಗ್ನಿಫತ್​ ಯೋಜನೆ ವಿವಾದ ಶುರುವಾದ ಮೇಲಂತೂ ಸೈನ್ಯಕ್ಕೆ ಸೇರ ಬಯಸುವ ಯುವಕ ಯುವತಿಯರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಹಲವು ಸೌಲಭ್ಯಗಳ ಕೊರತೆಯಿಂದ ಕೋಲಾರ ಸ್ಪೋರ್ಟ್ಸ್​ ಕ್ಲಬ್​ನ ಸದಸ್ಯರು ಕೋಲಾರ ಜಿಲ್ಲೆಯ ಯುವಕ ಯುವತಿಯರಿಗೆ ಮಾತ್ರ ತರಬೇತಿ ನೀಡುತ್ತಿದ್ದಾರೆ. ಇಲ್ಲಿ ನೀಡುತ್ತಿರುವ ಕಠಿಣ ತರಬೇತಿಯ ವಿಚಾರ ತಿಳಿದು ಉತ್ತರ ಕರ್ನಾಟಕ ಸೇರಿದಂತೆ ಮೈಸೂರು, ಚಾಮರಾಜನಗರ, ತುಮಕೂರು, ಬೆಳಗಾಂ, ಬೀದರ್​ ಸೇರಿ ಹಲವು ಜಿಲ್ಲೆಗಳ ಯುವಕ ಯುವತಿಯರು ತರಬೇತಿ ಪಡೆಯಲು ಬರುವ ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಸ್ಥಳೀಯವಾಗಿ ವಸತಿ ಸೇರಿದಂತೆ ಹಲವು ಸೌಲಭ್ಯಗಳ ಕೊರತೆಯಿಂದ ಕೇವಲ ಕೋಲಾರ ಜಿಲ್ಲೆಯ ಯುವಕ ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ ಅನ್ನೋದು ಕ್ಲಬ್​ ಸದಸ್ಯರ ಮಾತು.

ಅಗ್ನಿವೀರರ ತರಬೇತಿಗೆ ಸಂಸದ ಮುನಿಸ್ವಾಮಿ ಪ್ರೋತ್ಸಾಹ..!

ಇನ್ನು ಕೋಲಾರದಲ್ಲಿ 182 ಯುವಕರಿಗೆ ನಡೆಯುತ್ತಿರುವ ಉಚಿತ ಸೈನಿಕ ತರಬೇತಿಯಲ್ಲಿ ಭಾಗವಹಿಸಿದ ಯುವಕರಿಗೆ ಕೋಲಾರ ಸಂಸದರಾದ ಎಸ್​.ಮುನಿಸ್ವಾಮಿ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ತರಬೇತಿಗೆ ಗ್ರಾಮೀಣ ಬಾಗದಿಂದ ಹಾಗೂ ಹೊರ ಜಿಲ್ಲೆಗಳಿಂದ ಬರುವ ಯುವಕ ಯುವತಿಯರಿಗೆ ಕೋಲಾರದಲ್ಲಿ ಉಳಿದುಕೊಳ್ಳಲು ವಸತಿ ಹಾಗೂ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಪ್ರತಿನಿತ್ಯ ತರಬೇತಿ ವೇಳೆ ಬೇಕಾಗುವ ಪೌಷ್ಠಿಕ ಆಹಾರ, ಮೊಟ್ಟೆ, ಕಾಳುಗಳು, ಹಾಲು ಸೇರಿದಂತೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ. ದೈಹಿಕ ಪರೀಕ್ಷೆ ಮುಗಿದ ನಂತರ ನುರಿತ ಶಿಕ್ಷಕರಿಂದ ಪರೀಕ್ಷಾ ಸಿದ್ದತೆಗೆ ಬೇಕಾದ ತರಬೇತಿಯನ್ನು ನೀಡುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಗ್ನಿಪಥ್​ ಹಲವು ವಿವಾದಗಳ ನಡುವೆಯೂ ಸದ್ದಿಲ್ಲದೆ ಯೋಜನೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ, ಸೈನ್ಯಕ್ಕೆ ಸೇರಲು ಕೋಲಾರ ಜಿಲ್ಲೆಯ ನೂರಾರು ಜನರು ಉತ್ಸುಕರಾಗಿದ್ದು ಅಗ್ನಿವೀರರಾಗಲು ತರಬೇತಿ ಪಡೆದು ಸಿದ್ದರಾಗುತ್ತಿದ್ದಾರೆ ಅನ್ನೋದು ವಿಶೇಷ.

ವರದಿ : ರಾಜೇಂದ್ರ ಸಿಂಹ