ಕೋಲಾರ : ದೇಶ ವಿದೇಶಗಳಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡಿದ್ದ ಸಹೋದರರು ಹಳ್ಳಿ ಕಡೆಗೆ ಮುಖ ಮಾಡಿದ್ದಾರೆ. ಕೃಷಿಯಲ್ಲಿ ಏನಾದರೂ ಮಾಡಬೇಕೆಂಬ ತುಡಿತ ಮತ್ತೆ ಹುಟ್ಟೂರಿಗೆ ಕರೆತಂದು ಬಿಟ್ಟಿತ್ತು. ಪರಿಣಾಮ ಇಬ್ಬರೂ ಸಹೋದರರು ಇಂದು ಸಾವಯವ ಕೃಷಿ (Organic farming) ಮೂಲಕ ತಮ್ಮದೇ ಪ್ರಯೋಗಗಳನ್ನು ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಜತೆಗೆ ಆರೋಗ್ಯಕರ(Health) ಬದುಕಿನ ಅರಿವು ಮೂಡಿಸುತ್ತಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹರಳಕುಂಟೆ ಗ್ರಾಮದ ಶಶಿಕುಮಾರ್ ಹಾಗೂ ಶಿವಕುಮಾರ್ ಇಬ್ಬರೂ ಕೈತುಂಬಾ ಸಂಬಳ ಕೊಡುವ ಕೆಲಸ ಮಾಡುತ್ತಿದ್ದವರು. ಶಶಿಕುಮಾರ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶಿವಕುಮಾರ್ ದುಬೈ, ನ್ಯೂಜಿಲೆಂಡ್ ಸೇರಿ ಹಲವು ದೇಶಗಳಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದವರು. ಆದರೆ ಎಲ್ಲೂ ತೃಪ್ತಿ ಕಾಣದ ಅವರು ತಮ್ಮೂರಿನಲ್ಲಿ ಕೃಷಿಯಲ್ಲಿ(Agriculture) ನೆಲೆ ಕಂಡುಕೊಳ್ಳಲು ತಮ್ಮೂರಿಗೆ ವಾಪಸ್ಸಾಗಿದ್ದಾರೆ.
ಕೃಷಿಯಲ್ಲಿ ಏನಾದರೂ ಮಾಡಬೇಕೆಂಬ ತುಡಿತ ಸಾವಯವ ಕೃಷಿಗೆ ಕರೆತಂದಿತ್ತು
ಶಶಿಕುಮಾರ್ ಹಾಗೂ ಶಿವಕುಮಾರ್ ಇಬ್ಬರಿಗೂ ಕೈತುಂಬಾ ಸಂಬಳ ಬರುತ್ತಿದ್ದರೂ ಕೂಡಾ ಕೃಷಿಯಲ್ಲಿ ಅದರಲ್ಲೂ ಸಾವಯವ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೆಲಸವನ್ನು ಬಿಟ್ಟು ಬಂದು ತಮ್ಮೂರಿನಲ್ಲಿ, ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ ಏಳು ಎಕರೆ ಭೂಮಿಯಲ್ಲಿ ಕೃಷಿ ಮಾಡಲು ಆರಂಭಿಸಿದರು. ಆರಂಭದಲ್ಲಿ ರಾಸಾಯನಿಕ ಕೃಷಿ ಮಾಡಿದರಾದರೂ ತಾವು ನಿರೀಕ್ಷಿಸಿದಷ್ಟು ಆದಾಯವೂ ಸಿಗಲಿಲ್ಲ. ತೃಪ್ತಿಯೂ ಸಿಗಲಿಲ್ಲ. ಪರಿಣಾಮ ಸಾವಯವ ಕೃಷಿ ಮಾಡಬೇಕೆಂದು ನಿರ್ಧರಿಸಿ ಕೆಲವೊಂದು ಸಾವಯವ ಕೃಷಿ ಕಾರ್ಯಾಗಾರಗಳಿಗೆ ಹೋಗಿ ತಿಳಿದುಕೊಂಡು, ನಂತರ ಸಾವಯವ ಕೃಷಿ ಮಾಡಲು ಆರಂಭಿಸಿದರು.
ಸಾವಯವ ಕೃಷಿಯ ಜೊತೆಗೆ ಗೋಶಾಲೆ ಮಾಡಿ ಸಾವಯವ ಕೃಷಿಗೆ ಬೆಂಬಲ
ಸಾವಯವ ಕೃಷಿಯ ಜೊತೆಗೆ ಸಾವಯವ ಕೃಷಿಗೆ ಬೇಕಾದ ದೇಸಿ ಹಸುಗಳ ಸಗಣಿ, ಗಂಜಲಕ್ಕಾಗಿ ತಮ್ಮದೇ ಜಮೀನಿಲ್ಲಿ ಗೋಶಾಲೆ ಆರಂಭಿಸಿ ದೇಸೀ ಘೀರ್ ತಳಿ ಹಸುಗಳನ್ನು ಸಾಕುತ್ತಾ, ಅವುಗಳಿಂದ ಉತ್ಪತ್ತಿಯಾಗುವ ಗಂಜಲ ಹಾಗೂ ಸಗಣಿಯಿಂದ ಜೀವಾಂಮೃತ, ಗೋಕೃಪಾಂಮೃತ ತಯಾರು ಮಾಡಿಕೊಂಡು ಬೆಳೆಗಳಿಗೆ ಸಿಂಪಡಿಸಿದ್ದಾರೆ. ಇಡೀ ಭೂಮಿಗೆ ಒಂಚೂರು ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಬಳಸದೆ ಸಂಪೂರ್ಣ ಸಾವಯವ ಕೃಷಿ ಆರಂಭಿಸಿದ್ದಾರೆ. ಮೊದಲು ಸ್ವೀಟ್ ಕಾರ್ನ್ ಬೆಳೆ ಬೆಳೆದು, ನಂತರ ಕುಂಬಳಕಾಯಿ ಬೆಳೆದು, ಈಗ ಏಲಕ್ಕಿ ಹಾಗೂ ಜಿ9 ತಳಿಯ ಚುಕ್ಕೆ ಬಾಳೆಹಣ್ಣು ಬೆಳೆದಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸಾವಯವ ವಿಧಾನದಲ್ಲಿ ಬೆಳೆಯಲಾದ ಬಾಳೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಒಳ್ಳೆಯ ಆದಾಯ ಕೂಡ ದೊರೆತಿದೆ. ಸದ್ಯ ಈ ಸಹೋದರರು ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ.
ಮಾರುಕಟ್ಟೆ ಹಾಗೂ ಬೆಲೆ ಸಮಸ್ಯೆಗೂ ಇಲ್ಲಿದೆ ಉತ್ತಮ ಪರಿಹಾರ
ರೈತರು ಕಷ್ಟಪಟ್ಟು ಕೃಷಿ ಮಾಡುತ್ತಾರೆ. ಆದರೆ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದೇ ಸಾವಲಿನ ಕೆಲಸ. ಅದಕ್ಕಾಗಿ ಇಬ್ಬರು ಸಹೋದರರು ಒಂದು ಪ್ಲಾನ್ ಮಾಡಿಕೊಂಡು ನೇರ ಗ್ರಾಹಕರ ಕೈಗೆ ತಾವು ಬೆಳೆದ ಸಾವಯವ ಬೆಳೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚಾಗಿದೆ. ಕೆಮಿಕಲ್ ಮಿಶ್ರಿತ ಆಹಾರ ಪದಾರ್ಥ ಸೇವಿಸುವ ಬದಲು ರಾಸಾಯನಿಕವಿಲ್ಲದ ಸಾವಯವ ಆಹಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ತಾವು ಬೆಳೆದ ಸಾವಯವ ಹಣ್ಣು ಮತ್ತು ತರಕಾರಿಗಳನ್ನು ನೇರ ಗ್ರಾಹಕರ ಮನೆಗಳಿಗೆ ತಲುಪಿಸುತ್ತಿದ್ದಾರೆ.
ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಪಟ್ಟಣಗಳಲ್ಲಿ ಒಂದಷ್ಟು ಗ್ರಾಹಕರ ಗುಂಪುಗಳನ್ನು ಮಾಡಿಕೊಂಡು ಅವರಿಗೆ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ, ಬೇಡಿಕೆಗನುಗುಣವಾಗಿ ತಾವು ಬೆಳೆದ ಹಣ್ಣುಗಳನ್ನು ತಲುಪಿಸುತ್ತಿದ್ದಾರೆ. ಇದರಿಂದ ಮಾರುಕಟ್ಟೆಗಿಂತ ಒಳ್ಳೆಯ ಬೆಲೆ ಸಿಗುತ್ತದೆ. ಜೊತೆಗೆ ಗ್ರಾಹಕರಿಗೂ ಉತ್ತಮ ತರಕಾರಿ ಹಣ್ಣುಗಳನ್ನು ಪಡೆದ ತೃಪ್ತಿ ಇರುತ್ತದೆ. ಈ ಮೂಲಕ ಮಾರುಕಟ್ಟೆ ಸಮಸ್ಯೆ ಇಲ್ಲದೆ ಉತ್ತಮ ಆದಾಯ ಗಳಿಸುವ ಮೂಲಕ ಪ್ರಾಯೋಗಿಕ ಹಾಗೂ ಬುದ್ಧಿವಂತಿಕೆಯ ಸಾವಯವ ಕೃಷಿ ಮಾಡುತ್ತಾ ತಿಂಗಳಿಗೆ 80 ಸಾವಿರದಿಂದ ಒಂದು ಲಕ್ಷದಷ್ಟು ಸಂಪಾದನೆ ಮಾಡುತ್ತಿದ್ದಾರೆ.
ಒಟ್ಟಾರೆ ದೇಶ ವಿದೇಶಗಳನ್ನು ಸುತ್ತಿದರೂ ತಮ್ಮೂರಿನಲ್ಲಿ ಸಿಗುವ ತೃಪ್ತಿ, ತಮ್ಮೂರಿನಲ್ಲಿ ಸಿಗುವ ನೆಮ್ಮದಿ ಮತ್ತೆಲ್ಲೂ ಸಿಗುವುದಿಲ್ಲ ಎನ್ನುವುದನ್ನು ಅರಿತುಕೊಂಡಿರುವ ಈ ಸಾವಯವ ಕೃಷಿಕ ಸಹೋದರರು, ಆಹಾರದ ಜೊತೆಗೆ ಆರೋಗ್ಯಕರ ಬದುಕಿಗೆ ಬೇಕಾದ ವಿಷಮುಕ್ತ ಆಹಾರ ಕೊಡಲು ಆರಂಂಭಿಸಿ ತಮ್ಮದೇ ಆದ ರೀತಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ.
ವರದಿ: ರಾಜೇಂದ್ರ ಸಿಂಹ
ಇದನ್ನೂ ಓದಿ:
ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಬೀದರ್ ರೈತ; ನೈಸರ್ಗಿಕ ಕೃಷಿ ಪದ್ಧತಿಯಿಂದಲೇ ವರ್ಷಕ್ಕೆ 20 ಲಕ್ಷ ರೂ. ಆದಾಯ