ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಟಕ್ಕರ್: ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಬಿಲ್​ ವ್ಯವಸ್ಥೆ ಜಾರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2023 | 3:01 PM

Anna Bhagya Yojana: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ  ಟಕ್ಕರ್​ ಕೊಡಲು ಕೇಂದ್ರ ಇದೀಗ ಮುಂದಾಗಿದ್ದು, ರಾಜ್ಯದಲ್ಲಿ ಗ್ರಾಹಕರಿಗೆ ಪಡಿತರ ವಿತರಣೆ ವೇಳೆ ಹೊಸ ಪ್ರಿಂಟೆಡ್​ ಬಿಲ್​ ವ್ಯವಸ್ಥೆ ಜಾರಿ ಮಾಡುತ್ತಿದೆ. ಸದ್ಯ ಕೋಲಾರ ಸೇರಿದಂತೆ ರಾಜ್ಯಾದ್ಯಂತ ಮುಂದಿನ ತಿಂಗಳಿನಿಂದ ಅಧಿಕೃತವಾಗಿ ಬಿಲ್​ ವ್ಯವಸ್ಥೆ ಜಾರಿ ಮಾಡಲಿದೆ.

ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಟಕ್ಕರ್: ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಬಿಲ್​ ವ್ಯವಸ್ಥೆ ಜಾರಿ
ಹೊಸ ಬಿಸ್​ ಸಿಸ್ಟಮ್
Follow us on

ಕೋಲಾರ, ನವೆಂಬರ್​​​ 20: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಗಳ ಮೂಲಕ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ (Anna Bhagya Yojana) ಗೆ  ಟಕ್ಕರ್​ ಕೊಡಲು ಕೇಂದ್ರ ಇದೀಗ ಮುಂದಾಗಿದ್ದು, ರಾಜ್ಯದಲ್ಲಿ ಗ್ರಾಹಕರಿಗೆ ಪಡಿತರ ವಿತರಣೆ ವೇಳೆ ಹೊಸ ಪ್ರಿಂಟೆಡ್​ ಬಿಲ್​ ವ್ಯವಸ್ಥೆ ಜಾರಿ ಮಾಡುತ್ತಿದೆ. ಬಿಲ್​​ನಲ್ಲಿ ವಿತರಣೆ ಮಾಡುವ ಅಕ್ಕಿಯ ವಿವರದ ಜೊತೆಗೆ ಜನರಿಗೆ ನೀಡುವ ಪಡಿತರ ಅಕ್ಕಿ ಕೇಂದ್ರ ಸರ್ಕಾರದ ಅನುದಾನ ಎಂದು ಮುದ್ರಣ ಮಾಡಲಾಗುತ್ತಿದೆ.

ಅಕ್ಕಿ ವಿತರಣೆಯಲ್ಲಿ ರಾಜ್ಯ ಸರ್ಕಾರದ ಅನುದಾನದ ಪಾಲು ಶೂನ್ಯ. ರಾಜ್ಯ ಸರ್ಕಾರದ ಪಾಲಿನ ಅನುದಾನ ಗ್ರಾಹಕರ ಖಾತೆಗೆ ನೇರವಾಗಿ ಹಣದ ಮೂಲಕ ಸಂದಾಯವಾಗಲಿದೆ. ರಾಜ್ಯ ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಸಲಿಯತ್ತನ್ನು ಜನರಿಗೆ ತಿಳಿಸಲು ಕೇಂದ್ರ ಸರ್ಕಾರ ಪ್ಲಾನ್​ ಮಾಡಿದೆ.

ಇದನ್ನೂ ಓದಿ: ಟಿವಿ9 ವರದಿ ಫಲಶ್ರುತಿ – ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಮಾಡಿದ್ರೆ ಪಡಿತರ ರದ್ದು: ಮೈಸೂರು ಜಿಲ್ಲಾಧಿಕಾರಿ ಎಚ್ಚರಿಕೆ

ಸದ್ಯ ಕೋಲಾರ ಸೇರಿದಂತೆ ರಾಜ್ಯಾದ್ಯಂತ ಮುಂದಿನ ತಿಂಗಳಿನಿಂದ ಅಧಿಕೃತವಾಗಿ ಬಿಲ್​ ವ್ಯವಸ್ಥೆ ಜಾರಿ ಮಾಡಲಿದೆ. ಈ ಮೊದಲು ಪಡಿತರ ವಿತರಣೆ ವೇಳೆಯಲ್ಲಿ ಕೈನಲ್ಲಿ ಬರೆದಿದ್ದ ಬಿಲ್ ವಿತರಣೆ ಮಾಡಲಾಗುತ್ತಿತ್ತು. ಹೊಸ ಬಿಲ್​ ವ್ಯವಸ್ಥೆಯಿಂದಾಗಿ ಅಕ್ಕಿ ವಿತರಣೆಯ ಅಕ್ರಮಕ್ಕೂ ಕೂಡ ಕಡಿವಾಣ ಹಾಕಲಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್​ ಉಚಿತವಾಗಿ ಹತ್ತು ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿ ಅನ್ನಭಾಗ್ಯ ಯೋಜನೆಯನ್ನು ಜಾರಿ ತರೋದಾಗಿ ಹೇಳಿತ್ತು. ಕಾಂಗ್ರೆಸ್​ ಐದು ಗ್ಯಾರಂಟಿ ಯೋಜನೆಗಳ ಪೈಕಿ ಈ ಅನ್ನಭಾಗ್ಯ ಯೋಜನೆ ಕೂಡಾ ಒಂದಾಗಿತ್ತು. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಪಡಿತರ ವಿತರಣೆಯಲ್ಲಿ ಹೊಸ ಬಿಲ್​ ಪದ್ದತಿಯನ್ನು ಜಾರಿಗೆ ತರುವ ಮೂಲಕ ಜನರಿಗೆ ಯಾವ ಸರ್ಕಾರ ಎಷ್ಟು ಅಕ್ಕಿ ಕೊಡ್ತಿದೆ, ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಅನ್ನೊ ಯೋಜನೆ ಅನುದಾನ ಎಷ್ಟು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅನುದಾನ ಎಷ್ಟು ಅನ್ನೋದನ್ನು ಹೊಸ ಬಿಲ್​ನಲ್ಲಿ ವಿವರವಾಗಿ ಮುದ್ರಿಸುವ ಜೊತೆಗೆ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ, ಎಷ್ಟು ಕೆಜಿ ಅಕ್ಕಿ, ಎಷ್ಟು ಕೆಜಿ ರಾಗಿ ಅಥವಾ ಜೋಳ ವಿತರಣೆಯಾಗಿದೆ ಅದಕ್ಕೆ ತಗುಲುವ ಮೊತ್ತವೆಷ್ಟು, ಆ ಅನುದಾನ ಎಲ್ಲಿಂದ ಬಂದಿದೆ, ರಾಜ್ಯ ಸರ್ಕಾರದ ಅನುಧಾನ ಎಷ್ಟು ಅದು ಯಾವ ರೀತಿ ಗ್ರಾಹಕರಿಗೆ ತಲುಪಿದೆ ಅನ್ನೋ ಪ್ರತಿಯೊಂದು ಮಾಹಿತಿಯನ್ನು ಸದ್ಯ ಹೊಸ ಬಿಲ್​ನಲ್ಲಿ ದಾಖಲಾಗುವಂತೆ ಮಾಡಿದೆ.

ಸದ್ಯ ಈ ಹೊಸ ಬಿಲ್​ ವ್ಯವಸ್ಥೆಯಿಂದ ಜನರಿಗೆ ಅನ್ನಭಾಗ್ಯ ಯೋಜನೆಯ ಅಸಲಿಯತ್ತೇನು ಅನ್ನೋದು ತಿಳಿದು ಬರಲಿದೆ. ಅದರ ಜೊತೆಗೆ ಪಡಿತರ ಅಕ್ಕಿಯಲ್ಲಾಗುತ್ತಿದ್ದ ಸೋರಿಕೆ ಹಾಗೂ ಅವ್ಯವಹಾರವನ್ನು ತಡೆಯಲು ಈ ವ್ಯವಸ್ಥೆ ಅನುಕೂಲವಾಗಲಿದೆ.

ಇದನ್ನೂ ಓದಿ: ಅಕ್ಕಿ ಕಳ್ಳರ ವಿರುದ್ಧ ಸಮರ ಸಾರಿದ ಆಹಾರ ಇಲಾಖೆ, ಅಕ್ರಮ ಅಕ್ಕಿ ಸಾಗಾಟಗಾರರ ಗಡಿಪಾರಿಗೆ ಪ್ಲ್ಯಾನ್​​

ಕಾಂಗ್ರೆಸ್​ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿಯ ಪಾಲನ್ನು ಹೇಳದೆ ಕಾಂಗ್ರೆಸ್​ನ ಅನ್ನಭಾಗ್ಯ ಯೋಜನೆಯಿಂದಲೇ ಹತ್ತು ಕೆಜಿ ಉಚಿತ ಅಕ್ಕಿಯನ್ನು ವಿತರಣೆ ಮಾಡುತ್ತೇವೆ ಎಂದು ಹೇಳಿಕೊಂಡು ಬಿಟ್ಟಿ ಪ್ರಚಾರ ತೆಗೆದುಕೊಂಡಿತ್ತು. ನಂತರ ಯೋಜನೆ ಜಾರಿ ಮಾಡುವ ವೇಳೆಯಲ್ಲೂ ಕೂಡಾ ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದ ಪಾಲು ಬಿಟ್ಟು ರಾಜ್ಯ ಸರ್ಕಾರ ಹತ್ತು ಕೆಜಿ ಅಕ್ಕಿ ಅಂದರೆ ಒಟ್ಟು ಹದಿನೈದು ಕೆ.ಜಿ ಅಕ್ಕಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದರು.

ಆ ನಂತರ ಅಕ್ಕಿ ಪೂರೈಕೆ ಮಾಡಲು ಅಕ್ಕಿ ಸಿಗದ ಕಾರಣ ರಾಜ್ಯ ಸರ್ಕಾರ ಅಕ್ಕಿಯ ಬದಲಾಗಿ ಒಂದು ಕೆಜಿ ಅಕ್ಕಿಗೆ 36 ರೂಪಾಯಿಯಂತೆ ಹಣವನ್ನು ಗ್ರಾಹಕರ ಖಾತೆಗೆ ನೀಡುತ್ತಿದೆ. ಹಾಗಾಗಿ ಸದ್ಯ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಜನರಿಗೆ ವಿತರಣೆ ಮಾಡುತ್ತಿರುವ ಅಕ್ಕಿ ಮತ್ತು ರಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಅನ್ನ ಯೋಜನೆಯದ್ದು ಅನ್ನೋದನ್ನು ವಿವರವಾಗಿ ಮುದ್ರಿಸಿ ನೀಡುತ್ತಿದೆ.

ಹಾಗಾಗಿ ಲೋಕಸಭಾ ಚುನಾವಣೆ ವೇಳೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಸಲಿಯತ್ತನ್ನು ಜನರಿಗೆ ಅರ್ಥಮಾಡಿಸುವುದು ಕೇಂದ್ರ ಸರ್ಕಾರದ ಈ ಹೊಸ ಪ್ರಿಂಟೆಡ್​ ಬಿಲ್​ನ ಉದ್ದೇಶವಾಗಿದೆ. ಸದ್ಯ ಈ ವ್ಯವಸ್ಥೆಗೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ್ದು ಇದು ಅಕ್ಕಿ ವಿತರಣೆಯ ಸೋರಿಕೆಯನ್ನು ತಡೆಯಲಿದೆ ಅನ್ನೋದು ಗ್ರಾಹಕರ ಮಾತು.

ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರ ಸಿದ್ದತೆಯನ್ನು ಮಾಡಿಕೊಂಡಿದ್ದು, ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಹಾಗೂ ಅವರ ಗ್ಯಾರಂಟಿ ಯೋಜನೆಗೆ ಅಸಲಿಯತ್ತನ್ನು ನಯವಾಗಿ ಜನರಿಗೆ ತಿಳಿಸಲು ಹೊಸ ಪ್ಲಾನ್​ ಮಾಡಿದೆ. ಆದರೆ ಇದು ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಕೇಂದ್ರಕ್ಕೆ ಅನುಕೂಲವಾಗತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 2:43 pm, Mon, 20 November 23