ಕೋಲಾರ, ಡಿ.17: ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಲಾಗಿದೆ. ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿಗಳು ಮಕ್ಕಳಿಂದ ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ.
ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರು ಕಳೆದ ಹಲವು ದಿನಗಳಿಂದ ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಮಾಡುವುದು ಹೀಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಮಕ್ಕಳಿಂದ ಪಿಟ್ ಕ್ಲೀನ್ ಮಾಡಿಸುವ ವಿಡಿಯೋಗಳು ಟಿವಿ9ಗೆ ಲಭ್ಯವಾಗಿದೆ. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದಾರೆ, ಮಕ್ಕಳಿಗೆ ಕಿರುಕುಳ ನೀಡಿರುವ ಶಿಕ್ಷಕರ ವಿರುದ್ದ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್, ಶೌಚಾಲಯ ಕ್ಲೀನ್ ಮಾಡಿಸಿದವರನ್ನು ಅಮಾನತು ಮಾಡುತ್ತೇವೆ. ಶಿಕ್ಷಕ ಅಭಿಷೇಕ್ನನ್ನು ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ H.Cಮಹದೇವಪ್ಪ ಮಾತನಾಡಿದ್ದು, ಪ್ರಾಂಶುಪಾಲರು, ವಾರ್ಡನ್, ಗ್ರೂಪ್ ಡಿ ಸೇರಿ ಎಲ್ಲರನ್ನೂ ಅಮಾನತು ಮಾಡಿ ತನಿಖೆ ನಡೆಸಿ ಎಂದು ಹೇಳಿದ್ದೇನೆ. ಮಕ್ಕಳನ್ನ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿರುವ ಬಗ್ಗೆ ಮಾಹಿತಿ ಬಂದಿದೆ. ಎಲ್ಲರನ್ನೂ ಸಸ್ಪೆಂಡ್ ಮಾಡಿ ವರದಿ ಕೊಡುವಂತೆ ಹೇಳಿದ್ದೇನೆ. ಇಂಥಾ ಕೆಲಸ ರಾಜ್ಯದಲ್ಲಿ ನಡೆಯದಂತೆ ಸುತ್ತೋಲೆ ಹಾಕಿ ಎಂದಿದ್ದೇನೆ ಎಂದು ತಿಳಿಸಿದರು. ಇನ್ನು ಕೋಲಾರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸಚಿವರು ಇಡೀ ರಾಜ್ಯಾದ್ಯಂತ ಸುತ್ತೋಲೆ ಹೊರಡಿಸುವಂತೆ ಸೂಚನೆ ನೀಡಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:03 am, Sun, 17 December 23