ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ: ಬೆತ್ತಲೆ ವಿಡಿಯೋ ಚಿತ್ರೀಕರಣ, ವಿದ್ಯಾರ್ಥಿನಿ ಆರೋಪ
Morarji Desai Residential Schools: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಟ್ಟೆ ಬದಲಾಯಿಸುವ ವೇಳೆ ನನ್ನ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಶಾಲಾ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿನಿ, ಪೋಷಕರಿಂದ ಗಂಭೀರ ಆರೋಪ ಮಾಡಿದ್ದಾರೆ.
ಕೋಲಾರ, ಡಿಸೆಂಬರ್ 17: ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential Schools) ಯಲ್ಲಿ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಲಾಗಿತ್ತು. ಇದೀಗ ಬಟ್ಟೆ ಬದಲಾಯಿಸುವ ವೇಳೆ ನನ್ನ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾಳೆ. ಶಾಲಾ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿನಿ, ಪೋಷಕರಿಂದ ಗಂಭೀರ ಆರೋಪ ಕೇಳಿಬಂದಿದೆ.
ವಿಡಿಯೋವನ್ನು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ನಮಗೆ ತೋರಿಸಿದ್ದಾರೆ ಎಂದಿದ್ದಾರೆ. ವಿಡಿಯೋ ನೋಡಿ ದಂಗಾಗಿರುವ ವಸತಿ ಶಾಲೆಯ ವಿದ್ಯಾರ್ಥಿನಿ ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ವಿಚಾರ ನನ್ನ ಗಮನಕ್ಕೆ ಬಂದಿದೆ: ನವೀನ್ ರಾಜ್
ಟಿವಿ9ನಲ್ಲಿ ವರದಿ ಪ್ರಸಾರ ಬೆನ್ನಲ್ಲೇ ಶಾಲೆಗೆ ಕರ್ಣಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ರಾಜ್ ಭೇಟಿ ನೀಡಿದ್ದು, ಶಾಲೆಯ ಸಿಬ್ಬಂದಿ, ಪೋಷಕರು, ಮಕ್ಕಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ವಿಚಾರ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಇದರ ಹಿಂದೆ ಇರುವ ಜಾಲದ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಈಗಾಗಲೇ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋಲಾರ: ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ; ನಾಲ್ವರು ಸಿಬ್ಬಂದಿ ಅಮಾನತು
ವಸತಿ ಶಾಲೆಯಲ್ಲಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗುವುದು. ಮಕ್ಕಳು ಮತ್ತು ಪೋಷಕರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಯಲುವಳ್ಳಿ ಬಳಿಯ ವಸತಿ ಶಾಲೆಯ ಪ್ರಿನ್ಸಿಪಾಲ್ ಭಾರತಮ್ಮ, ಶಿಕ್ಷಕ ಮುನಿಯಪ್ಪ, ವಾರ್ಡನ ಮಂಜುನಾಥ್ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪೋಷಕರಿಂದ ಪ್ರತಿಭಟನೆ
ಘಟನೆ ಖಂಡಿಸಿ ನವೀನ್ ಕುಮಾರ್ ರಾಜ್‌ಗೆ ಮುತ್ತಿಗೆ ಹಾಕಿ ಪೋಷಕರಿಂದ ಪ್ರತಿಭಟನೆ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಮಾಡಿಸಿದ ಪ್ರಕರಣಕ್ಕೆ ಸಂಬಂಧ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕ್ಯಾಜುವೆಲ್ ಇದ್ದಾರೆ, ಅವರ ಮಂತ್ರಿಗಳು ಕ್ಯಾಜುವೆಲ್ ಇದ್ದಾರೆ. ಯಾವಾಗ ಮಂತ್ರಿಗಳು, ಮುಖ್ಯ ಮಂತ್ರಿಗಳು ಕ್ಯಾಜುವೆಲ್ ಆಗಿರುತ್ತಾರೋ ಆಗ ಅಧಿಕಾರಿಗಳಿಗೆ ಗಂಭೀರತೆ ಬರಲ್ಲ, ಇಂತಹ ಘಟನೆಗಳು ಆಗುತ್ತೆ. ಬೆಳಗಾವಿ ಘಟನೆ ಇರಬಹುದು, ಕೋಲಾರದ ಘಟನೆ ಇರಬಹುದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:51 pm, Sun, 17 December 23