ಕೋಲಾರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಮಾವ-ಅಳಿಯರ ನಡುವೆ ಪೈಪೋಟಿ; ಯಾರಿಗೆ ಸಿಗುತ್ತೆ ಟಿಕೆಟ್​?

| Updated By: Rakesh Nayak Manchi

Updated on: Jan 28, 2024 | 8:34 PM

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ ಕ್ಷೇತ್ರದಲ್ಲಿ ಮಾವ ಕೆಎಚ್​ ಮುನಿಯಪ್ಪ ಹಾಗೂ ಅಳಿಯ ಚಿಕ್ಕಪೆದ್ದಣ್ಣ ಅವರು ಟಿಕೆಟ್​ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇಬ್ಬರು ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದು ಹೈಕಮಾಂಡ್​ ಯಾರಿಗೆ ಟಿಕೆಟ್ ನೀಡುತ್ತದೆ ಅನ್ನೋ ಕುತೂಹಲ ಕಾಂಗ್ರೇಸ್ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ಕೋಲಾರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಮಾವ-ಅಳಿಯರ ನಡುವೆ ಪೈಪೋಟಿ; ಯಾರಿಗೆ ಸಿಗುತ್ತೆ ಟಿಕೆಟ್​?
ಕೋಲಾರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಮಾವ ಕೆಎಚ್​ ಮುನಿಯಪ್ಪ ಮತ್ತು ಅಳಿಯ ಚಿಕ್ಕಪೆದ್ದಣ್ಣ ನಡುವೆ ಪೈಪೋಟಿ
Follow us on

ಕೋಲಾರ, ಜ.28: ಲೋಕಸಭೆ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ. ಅದರಲ್ಲೂ ಕೋಲಾರದಲ್ಲಿ ಮಾವ ಕೆಎಚ್​ ಮುನಿಯಪ್ಪ (K.H. Muniyappa) ಹಾಗೂ ಬೆಂಗಳೂರಿನ ಕೆ.ಆರ್​.ಪುರಂ ಹಿರಿಯ ಉಪನೊಂದಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅವರ ಅಳಿಯ ಚಿಕ್ಕಪೆದ್ದಣ್ಣ ನಡುವೆಯೇ ಟಿಕೆಟ್​ಗಾಗಿ ಪೈಟ್​ ಜೋರಾಗಿದೆ. ಇಬ್ಬರು ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದು ಹೈಕಮಾಂಡ್​ ಯಾರಿಗೆ ಟಿಕೆಟ್ ನೀಡುತ್ತದೆ ಅನ್ನೋ ಕುತೂಹಲ ಕಾಂಗ್ರೇಸ್ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ಹೈಕಮಾಂಡ್​ ಮನಸ್ಸು ಗೆಲ್ಲುವವರು ಯಾರು? ಲೆಕ್ಕಾಚಾರ ಏನು?

ಕೋಲಾರ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದರೂ ಪಕ್ಷದಲ್ಲಿನ ಕೆಲವು ಭಿನ್ನಾಭಿಪ್ರಾಯಗಳಿಂದ ಕೆ.ಎಚ್.ಮುನಿಯಪ್ಪ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ತಮ್ಮ ಸೋಲಿನ ಕಹಿ ಮರೆಯಲು ಈ ಬಾರಿ ಮತ್ತೊಂದು ಅವಕಾಶಕ್ಕೆ ಕಾಯುತ್ತಿದ್ದರೆ. ಕಾಂಗ್ರೇಸ್ ಪಕ್ಷ ಕೂಡಾ ತಮ್ಮ ಕ್ಷೇತ್ರವನ್ನು ಮತ್ತೆ ಪಡೆದುಕೊಳ್ಳಲು ನಾನಾ ಕಸರತ್ತು ಮಾಡುತ್ತಿದೆ.

ಹಾಗಾಗಿ ಅಳೆದು ತೂಗಿ ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೇಸ್​ ಆಲೋಚನೆ ಮಾಡುತ್ತಿದೆ. ಈ ನಡುವೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೇಸ್​ ಟಿಕೆಟ್​ಗಾಗಿ ಹನ್ನೆರಡು ಜನ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್​ ಖಚಿತ ಪಡಿಸಿದ್ದಾರೆ. ಈ ಪೈಕಿ ಟಿಕೆಟ್​ ಬೇಕು ಎನ್ನುವವರ ರೇಸ್​ನಲ್ಲಿ ಮುನಿಯಪ್ಪ ಹಾಗೂ ಅವರ ಅಳಿಯ ಚಿಕ್ಕಪೆದ್ದಣ್ಣ ಕೂಡಾ ಇದ್ದಾರೆ ಅನ್ನೋದು ವಿಶೇಷ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ನಿಂದ ಕಲೆಕ್ಷನ್; ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ

ಚುನಾವಣೆಗೆ ನಿಲ್ಲುವಂತೆ ಬೆಂಬಲಿಗರು ಹಾಗೂ ಕಾರ್ಯಕರ್ತರು ಮುನಿಯಪ್ಪ ಅವರಿಗೆ ಒತ್ತಡ ಹಾಕುತ್ತಿದ್ದಾರೆ. ಅದಾಗ್ಯೂ, ಹೈಕಮಾಂಡ್​ ಒಪ್ಪಿದರೆ ಮಾತ್ರ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. ಆದರೆ ​ಮುನಿಯಪ್ಪಗೆ ಟಿಕೆಟ್​ ಕೊಟ್ಟರೆ ಮತ್ತೆ ಜಿಲ್ಲೆಯಲ್ಲಿ ಬಣರಾಜಕೀಯ ಶುರುವಾಗುವ ಸಾಧ್ಯತೆ ಇರುವ ಹಿನ್ನೆಲೆ ಅವರ ಬದಲು ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣರನ್ನು ರಾಜಕೀಯಕ್ಕೆ ಕರೆತಂದು ಎರಡೂ ಬಣಗಳ ನಾಯಕರನ್ನು ಸಮಾಧಾನ ಪಡಿಸಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಚಿಂತಾಮಣಿ ತಾಲೂಕಿನ ಕೋಡಿಗಲ್ ಮೂಲದ ಚಿಕ್ಕಪೆದ್ದಣ್ಣ ಅವರು ಕೆ.ಆರ್​.ಪುರಂನಲ್ಲಿ ಹಿರಿಯ ಉಪನೊಂದಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಜೊತೆಗೆ ಚಿಕ್ಕಪೆದ್ದಣ್ಣ ಅವರು ಈಗಾಗಲೇ ಹಲವು ಸಾಮಾಜಿಕ ಕಾರ್ಯಕಗಳ ಮೂಲಕ ಗುರುತಿಸಿಕೊಂಡಿರುವ ಹಿನ್ನೆಲೆ ಅವರಿಗೆ ಟಿಕೆಟ್​ ನೀಡಿ​ ಮುನಿಯಪ್ಪ ಹಾಗೂ ರಮೇಶ್‌ ಕುಮಾರ್ ಬಣಗಳ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿಸುವ ಪ್ಲಾನ್​ ಕೂಡಾ ಮಾಡಲಾಗುತ್ತಿದೆ. ಆದರೆ ಇದನ್ನು​ ಮುನಿಯಪ್ಪ ವಿರೋಧಿ ಬಣ ಹೇಗೆ ಸ್ವೀಕರಿಸಲಿದೆ ಅನ್ನೋದು ಕೂಡಾ ಕುತೂಹಲದ ವಿಷಯ.

ಪ್ರಾಬಲ್ಯ ಉಳಿಸಿಕೊಳ್ಳಲು ಟಿಕೆಟ್ ಅನಿವಾರ್ಯ

ಸದ್ಯದ ಪರಿಸ್ಥಿತಿಯಲ್ಲಿ ಕೋಲಾರ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಬಣದ ಪ್ರಾಬಲ್ಯ ಮುಂದುವರಿಸಬೇಕಾದರೆ ಹಾಲಿ ಸಚಿವರಾಗಿರುವ ಕೆಹೆಚ್​​ ಮುನಿಯಪ್ಪರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಮುನಿಯಪ್ಪ ಚುನಾವಣೆಗೆ ಸ್ಪರ್ಧೆ ಮಾಡಲು ಹಿಂದೇಟು ಹಾಕಿದಂತಹ ಸಂದರ್ಭದಲ್ಲಿ ಕೆ.ಎಚ್‌. ಮುನಿಯಪ್ಪ ಪುತ್ರ ಅಥವಾ ಅಳಿಯನಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಅಂತಿಮವಾಗಿ ಜಿಲ್ಲೆಯ ಎರಡು ಕಾಂಗ್ರೇಸ್​ ಬಣಗಳ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧಾರ ಮಾಡುತ್ತದೋ ಅಥವಾ ಕೆಹೆಚ್ ಮುನಿಯಪ್ಪ ಅಥವಾ ಅವರ ಕುಟುಂಬದವರಿಗೆ ಮಣೆ ಹಾಕುತ್ತದೋ ಅನ್ನೋದು ಕಾದು ನೋಡಬೇಕಿದೆ.

ಸದ್ಯ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿಯಿದ್ದು, ಟಿಕೆಟ್​ಗಾಗಿ 12 ಅರ್ಜಿಗಳು ಬಂದಿದ್ದು ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್​ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Sun, 28 January 24