ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು ಇಂದು ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಕೆಜಿಎಫ್ ಶಾಸಕ ರೂಪಕಲಾ ಶಶಿಧರ್ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೆ ಖಡಕ್ಕಾಗಿ ಒಂದು ಪ್ರಶ್ನೆಯನ್ನು ಕೇಳಿದರು. ಒಂದು ಕ್ಷಣ ತಬ್ಬಿಬ್ಬಾದ ಮುರುಗೇಶ್ ನಿರಾಣಿಯವರು ಶಾಸಕಿಯ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿಲ್ಲ, ಅಷ್ಟಕ್ಕೆ ಸುಮ್ಮನಾಗದೆ ಶಾಸಕಿಯ ಪರವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡಾ ನಿರಾಣಿ ಅವರನ್ನು ಅವರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಿ ಯಾವಾಗ ಮಾಡಿಕೊಡ್ತೀರಾ ಎಂದು ಕೇಳಿದರು.ಈ ವೇಳೆ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಕೂಡಾ ದನಿಗೂಡಿಸಿದರು.
ಅಷ್ಟಕ್ಕೂ ಕೆಜಿಎಫ್ ಶಾಸಕಿ ಕೇಳಿದ ಪ್ರಶ್ನೆಯಾದರೂ ಏನು ಎಂದರೆ ಚಿನ್ನದ ಗಣಿ ಮುಚ್ಚಿದ ಮೇಲೆ ನಿರುದ್ಯೋಗದಿಂದ ತಾಂಡವಾಡುತ್ತಿರು ಕೆಜಿಎಫ್ನಲ್ಲಿ ಸರ್ಕಾರಕ್ಕೆ ಸೇರಿದ 975 ಎಕರೆ ಜಾಗವನ್ನು ಹುಡುಕಿಕೊಟ್ಟಿದ್ದೇವೆ, ಅಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಬೇಕು ಎಂದು ಮನವಿ ಕೊಟ್ಟಿದ್ದೇವೆ, 2021 ರಲ್ಲಿ ಈಗಾಗಲೇ ಕೈಗಾರಿಕಾ ಸಚಿವರು ಸ್ಥಳ ಪರಿಶೀಲನೆ ಮಾಡಿದ್ದಾರೆ, ಅದಕ್ಕೆ ಸಂಬಂಧಿಸಿದಂತೆ ಸಭೆ ಮಾಡಿ ಕೈಗಾರಿಕಾ ಟೌನ್ಶಿಪ್ ಸ್ಥಾಪನೆ ಮಾಡಲು ಒಪ್ಪಿಗೆ ನೀಡಲಾಗಿದೆ, ಆದರೆ ಕೈಗಾರಿಕಾ ಟೌನ್ಶಿಪ್ ಸ್ಥಾಪನೆ ಮಾಡಲು ಸರ್ಕಾರ ಹಿಂದೇಟುಹಾಕುತ್ತಿದೆ ಅದಕ್ಕೆ ಕಾರಣ ಹೇಳಿ ಎಂದರು.
(ರಾಜೇಂದ್ರಸಿಂಹ – ಟಿವಿ9 ವಿಶೇಷ ವರದಿಗಾರ)
ಈ ವೇಳೆ ಉತ್ತರಿಸಿದ ಮುರುಗೇಶ್ ನಿರಾಣಿ ಅವರು ಕಂದಾಯ ಇಲಾಖೆಗೆ ಸೇರಿದ 975 ಎಕರೆ ಭೂಮಿ ಇದೆ ಅದನ್ನು ಕೆಐಎಡಿಬಿ ಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯಲ್ಲಿದೆ ಕಂದಾಯ ಇಲಾಖೆಯಿಂದ ಹಸ್ತಾಂತರವಾದ ಕೂಡಲೇ ಕೆಲಸ ಆರಂಭಿಸುತ್ತೇವೆ ಎಂದರು. ಈವೇಳೆ ಶಾಸಕಿ ಪರ ಬ್ಯಾಟಿಂಗ್ ಮಾಡಿ ಆರ್.ವಿ.ದೇಶಪಾಂಡೆ ಬೆಂಗಳೂರಿಗೆ ಹತ್ತಿರುವಿರುವ ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಟೌನ್ಶಿಪ್ ಮಾಡೋದರಿಂದ ಉದ್ಯೋಗ ಸೃಷ್ಟಿಯ ಜೊತೆಗೆ ಕೈಗಾರಿಕೆಗಳ ಸ್ಥಾಪನೆಗೂ ಅನುಕೂಲವಾಗುತ್ತದೆ ಎಂದರು.
ಚಿನ್ನದ ಗಣಿ ಕಾರ್ಮಿಕರ ಹಿತದೃಷ್ಟಿಯಿಂದ ಕೈಗಾರಿಕೆ ಬೇಕು..!
2000 ಮಾರ್ಚ್-1 ರಂದು ಚಿನ್ನದ ಗಣಿಗೆ ಕೇಂದ್ರ ಸರ್ಕಾರ ಬೀಗ ಹಾಕಿದ ನಂತರ ಚಿನ್ನದ ಗಣಿ ಕಾರ್ಮಿಕರು ಬೀದಿಗೆ ಬಿದ್ದರು, ಗಣಿ ಕಾರ್ಮಿಕರಿಗೆ ಚಿನ್ನದ ಗಣಿ ಮುಚ್ಚಿದ ನಂತರ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗಾಗಿ ಸರ್ಕಾರ ಈವರೆಗೆ ಯಾವುದೇ ಪರ್ಯಾಯವಾಗಿ ಜೀವನಕ್ಕೆ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿಲ್ಲ, ಪರಿಣಾಮ ಕೆಜಿಎಫ್ ಭಾಗದ ಜನರು ನಿತ್ಯ ಸುಮಾರು 20 ಸಾವಿರ ಜನರು ಉದ್ಯೋಗ ಅರಸಿಕೊಂಡು ಬೆಂಗಳೂರು ಸೇರಿದಂತೆ ಹಲವು ನಗರ ಪ್ರದೇಶಗಳಿಗೆ ರೈಲು, ಬಸ್ ಮೂಲಕ ಪ್ರತಿನಿತ್ಯ ಸಂಚಾರ ಮಾಡುತ್ತಾರೆ ಅವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಇಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಅನಿವಾರ್ಯವಾಗಿದೆ.
ಕೈಗಾರಿಕಾ ವಲಯ ಸ್ಥಾಪನೆಗೆ ಸರ್ಕಾರದ್ದೇ ಒಂದು ಸಾವಿರ ಎಕರೆ ಭೂಮಿ ಸಿದ್ದವಿದೆ..!
ಈ ಹಿಂದೆ ಸರ್ಕಾರ ಬಿಇಎಂಎಲ್ ಕಂಪನಿಗೆ ನೀಡಿದ್ದ ಸುಮಾರು ಒಂದು ಸಾವಿರ ಎಕರೆ ಜಾಗವನ್ನು ವಾಪಸ್ ಪಡೆದಿದ್ದು. ಆ ಸ್ಥಳದಲ್ಲಿ ಕೈಗಾರಿಕಾ ವಲಯ ನಿರ್ಮಾಣ ಮಾಡುವುದಾಗಿ ಬಿಜೆಪಿ ಸರ್ಕಾರದಲ್ಲಿ ಹೇಳಲಾಗಿತ್ತು. ಆದರೆ ಈವರೆಗೆ ಆ ಪ್ರಸ್ತಾಪ ಈಡೇರಿಲ್ಲ, ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿಯವರು ಇಲ್ಲಿಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕೈಗಾರಿಕಾ ವಲಯ ಸ್ಥಾಪನೆಯ ಭರವಸೆ ನೀಡಿದ್ದರು ಆದರೆ ಚುನಾವಣೆ ಹತ್ತಿರವಾಗುತ್ತಿದೆ ಆದರೂ ಕೈಗಾರಿಕಾ ವಲಯದ ಪ್ರಸ್ತಾಪವೇ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕೈಗಾರಿಕಾ ಟೌನ್ಶಿಪ್ ಸ್ಥಾಪನೆ ವಿಚಾರದಲ್ಲೂ ರಾಜಕೀಯ ಷಡ್ಯಂತ್ರ..!
ಕೆಜಿಎಫ್ನಲ್ಲಿ 975 ಎಕರೆ ಸರ್ಕಾರಿ ಭೂಮಿ ಕೈಗಾರಿಕೆಗಾಗಿ ಮೀಸಲಿರಿಸಿದೆ, ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರದ್ದೇ ಭೂಮಿ ಇದ್ದರೂ ಕೈಗಾರಿಕಾ ವಲಯ ಸ್ಥಾಪನೆಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ, ಇದರ ಹಿಂದೆ ಕೆಲವು ಷಡ್ಯಂತ್ರ ಇದೆ, ಕೆಜಿಎಫ್ನಲ್ಲಿ ಕಾಂಗ್ರೇಸ್ ಪಕ್ಷದ ಶಾಸಕಿ ಇದ್ದಾರೆ ಅನ್ನೋ ಕಾರಣಕ್ಕೆ ಸರ್ಕಾರ ಈರೀತಿ ಧೋರಣೆ ಅನುಸರಿಸುತ್ತಿದೆ. ರಾಜಕೀಯ ಮಾಡುವುದನ್ನು ಬಿಟ್ಟು ಚಿನ್ನದ ಗಣಿ ಕಾರ್ಮಿಕರ ಮಕ್ಕಳು ಸಾವಿರಾರು ಜನ ವಿದ್ಯಾವಂತರಾಗಿ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ ಹಾಗಾಗಿ ಹೂಡಿಕೆದಾರರ ಸಮಾವೇಶ ಮಾಡುವ ಸರ್ಕಾರ ಕೈಗಾರಿಕೆಗಳನ್ನು ಕೆಜಿಎಫ್ನಲ್ಲಿ ಸ್ಥಾಪನೆ ಮಾಡಲು ಒತ್ತು ನೀಡಿಬೇಕು ಎಂದು ಆಗ್ರಹಿಸಿದ್ದಾರೆ.
Published On - 5:28 pm, Fri, 16 September 22