ನಷ್ಟದ ಸುಳಿಗೆ ಸಿಲುಕದೆ ಒಳ್ಳೆಯ ಆದಾಯ ಗಳಿಸುವುದು ಹೇಗೆ? ಕೃಷಿ ಪಾಠ ಮಾಡಿದ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ!

| Updated By: ಸಾಧು ಶ್ರೀನಾಥ್​

Updated on: Dec 07, 2022 | 5:06 PM

Kolar SP IPS D Devraj: ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಟೊಮ್ಯಾಟೊ, ಆಲೂಗಡ್ಡೆಯಂತಹ ಬೆಳೆಗಳಿಗೆ ಪರ್ಯಾಯವಾಗಿ ಹಣ್ಣು ತರಕಾರಿಗಳನ್ನ ಬೆಳೆದು ಅಧಿಕ ಲಾಭ ಪಡೆಯುವ ಕುರಿತು ರೈತರೊಂದಿಗೆ ಸಂವಾದ ನಡೆಸಲಾಯಿತು.

ನಷ್ಟದ ಸುಳಿಗೆ ಸಿಲುಕದೆ ಒಳ್ಳೆಯ ಆದಾಯ ಗಳಿಸುವುದು ಹೇಗೆ? ಕೃಷಿ ಪಾಠ ಮಾಡಿದ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ!
ಕೃಷಿ ಪಾಠ ಮಾಡಿದ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ!
Follow us on

ಅವರು ಸದಾ ಖಾಕಿ ಬಟ್ಟೆ ಹಾಕಿಕೊಂಡು (Kolar Police) ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಅಧಿಕಾರಿ, ಆದರೆ ಆ ಜಿಲ್ಲೆಯಲ್ಲಿ ಬದಲಾದ ವಾತಾವರಣ ಬದಲಾದ ಕೃಷಿ ಪದ್ದತಿಯಲ್ಲಿ ರೈತರು ಏನೆಲ್ಲಾ ಮಾಡಬಹುದು ಅನ್ನೋ ನಿಟ್ಟಿನಲ್ಲಿ ಹೊಸ ಕೃಷಿ ಪದ್ದತಿಯನ್ನು ಜಿಲ್ಲೆಯಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿ ಟೊಮ್ಯಾಟೋ ಬೆಳೆಯುತ್ತಿದ್ದ ರೈತರಲ್ಲಿ ಡ್ರಾಗನ್​ ಪ್ರೂಟ್​, ಸ್ಟ್ರಾಬೆರಿ, ಬಟರ್ ಪ್ರೂಟ್ ಅನ್ನೋ ಚರ್ಚೆ ಶುರುಮಾಡಿದ್ದಾರೆ.

ರೈತರು ಬೆಳೆದ ವಿವಿಧ ಹಣ್ಣು ತರಕಾರಿಗಳನ್ನ ವೀಕ್ಷಣೆ ಮಾಡುತ್ತಿರುವ ಅಧಿಕಾರಿಗಳು, ವಿವಿಧ ಸ್ಟಾಲ್‌ಗಳಲ್ಲಿರುವ ವಿವಿಧ ಹಣ್ಣು ತರಕಾರಿಗಳನ್ನ ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವ ರೈತರು, ಮತ್ತೊಂದೆಡೆ ಬದಲಿ ಕೃಷಿ ವಿಧಾನ ಮಾರುಕಟ್ಟೆ (Agriculture) ಬಗ್ಗೆ ರೈತರೊಂದಿಗೆ ಸಂವಾದ ನಡೆಸುತ್ತಿರುವ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್​ (Kolar District Police Superintendent IPS D Devraj)… ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ನಗರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ.

ಹೌದು ಜಿಲ್ಲಾ ಕೃಷಿಕ ಸಮಾಜ, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಮತ್ತು ತೋಟಗಾರಿಕೆ ಮಹಾವಿದ್ಯಾಲಯ, ಪೊಲೀಸ್ ಇಲಾಖೆ ವತಿಯಿಂದ ಕೋಲಾರ ನಗರದ ಟಿ. ಚನ್ನಯ್ಯ ರಂಗಮಂದರದಲ್ಲಿ ನಿನ್ನೆ ಮಂಗಳವಾರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಕುರಿತು ವಿಚಾರ ಸಂಕಿರಣ ಹಾಗೂ ರೈತರೊಂದಿಗೆ ಸಂವಾದ ಅನ್ನೋ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನ ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಉದ್ಘಾಟನೆ ಮಾಡಿದ್ರು.

ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಟೊಮ್ಯಾಟೊ, ಆಲೂಗಡ್ಡೆಯಂತಹ ಬೆಳೆಗಳಿಗೆ ಪರ್ಯಾಯವಾಗಿ ಹಣ್ಣು ತರಕಾರಿಗಳನ್ನ ಬೆಳೆದು ಅಧಿಕ ಲಾಭ ಪಡೆಯುವ ಕುರಿತು ರೈತರೊಂದಿಗೆ ಸಂವಾದ ನಡೆಸಲಾಯಿತು. ರೈತರು ಜನರ ಅಭಿರುಚಿಗೆ ತಕ್ಕಂತೆ ಹಾಗೂ ಮಾರುಕಟ್ಟೆ ಇರುವ ಹಾಗೂ ಪರ್ಯಾಯ ರೈತರಿಗೆ ಹೆಚ್ಚಿನ ಆದಾಯ ಕೊಡುವ ಡ್ರ್ಯಾಗನ್ ಫ್ರೂಟ್, ಬಟರ್ ಫ್ರೂಟ್, ಜಿಗನಿ, ಸ್ಟ್ರಾಬರಿಯಂತಹ ಬೆಳೆಗಳನ್ನ ಬೆಳೆಯುವಂತೆ ಸಲಹೆಗಳನ್ನ ನೀಡಲಾಯಿತು. ಇವುಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಜೊತೆಗೆ ಲಾಭದಾಯಕವೂ ಇರುತ್ತದೆ. ಹಾಗಾಗಿ ಇಂತಹ ನೂತನ ಕೃಷಿ ಪದ್ದತಿ ಮೂಲಕ ಬದಲಿ ಬೆಳೆಗಳನ್ನ ಬೆಳೆದು ಲಾಭ ಮಾಡುವ ಕುರಿತು ತಿಳಿಸಲಾಯಿತು.

ಕೋಲಾರ ಜಿಲ್ಲೆಯಲ್ಲಿ ಹಣ್ಣು ತರಕಾರಿಗಳನ್ನ ಬೆಳೆಯುವ ರೈತರಿಗೆ ಕೊರತೆಯೇನಿಲ್ಲ. ಆದ್ರೆ ಸೂಕ್ತ ಮಾರುಕಟ್ಟೆ ಇಲ್ಲದೆ ಸರಿಯಾದ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿ ಪರದಾಡುವುದು ಇಲ್ಲಿ ಕಾಮನ್. ಹಾಗಾಗಿ ರೈತರು ಬದಲಿ ಬೆಳೆಗಳನ್ನ ಬೆಳೆಯುವ ಮೂಲಕ ಹೆಚ್ಚೆಚ್ಚು ಆದಾಯ ಮಾಡುವುದು, ಭೂಮಿಯ ಫಲವತ್ತತೆ, ನೂತನ ಬೆಳೆ ಬೆಳೆಯುವ ಪದ್ದತಿ ಹೀಗೆ ಹಲವು ವಿಚಾರಗಳ ಕುರಿತು ಕಾರ್ಯಕ್ರಮದಲ್ಲಿ ರೈತರಿಗೆ ತಿಳಿಸಿಕೊಡಲಾಯಿತು. ಅಲ್ಲದೆ ಪರ್ಯಾಯ ಬೆಳೆಗಳು ಹಾಗೂ ಹೆಚ್ಚು ಆದಾಯ ಕೊಡುವ ಡ್ರ್ಯಾಗನ್ ಫ್ರೂಟ್, ಬಟರ್ ಫ್ರೂಟ್, ಜಿಗನಿ, ಸ್ಟ್ರಾಬರಿಯಂತಹ ಹಣ್ಣು ತರಕಾರಿಗಳನ್ನ ಬೆಳೆಯುವ ವಿಧಾನ ಹಾಗೂ ಮಾರುಕಟ್ಟೆ ಕುರಿತು ಕೋಲಾರ ಎಸ್ಪಿ ದೇವರಾಜ್​ ಸುದೀರ್ಘವಾಗಿ ರೈತರಿಗೆ ತಿಳಿಸಿಕೊಟ್ರು.

ದೇವರಾಜ್​ ಅವರಿಗೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇದ್ದು ಅವರು ಈಗಾಗಲೇ ಪೊಲೀಸ್ ಕೆಲಸದ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಂಡು ಅದರಲ್ಲಿ ತಾನು ಯಶಸ್ವಿಯಾಗಿದ್ದೇನೆ. ಹಾಗಾಗಿ ಅದೇ ಮಾದರಿಯಲ್ಲಿ ಹೊಸ ಕೃಷಿ ಪದ್ದತಿಗಳನ್ನ ಅಳವಡಿಸಿಕೊಳ್ಳುವುದು ಹಾಗೂ ಬೇಸಾಯದ ಪದ್ದತಿ ಸೇರಿದಂತೆ ಜಿಲ್ಲೆಯ ಹಲವು ರೈತರು ಬೆಳೆದ ಕೃಷಿ ಪದ್ದತಿಯ ಕುರಿತು ಪ್ರಾತ್ಯಕ್ಷಿಕೆಯನ್ನ ಸಹ ತೋರಿಸಲಾಯಿತು.

ಇದೆ ವೇಳೆ ಜಿಲ್ಲೆಯ ರೈತರೊಂದಿಗೆ ಬದಲಿ ಬೆಳೆಗಳ ಲಾಭ ನಷ್ಟ, ಮಾರುಕಟ್ಟೆ, ಬೇಸಾಯದ ಪದ್ದತಿ, ಮಾರುಕಟ್ಟೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂವಾದ ನಡೆಸಿದ ಎಸ್ಪಿ ದೇವರಾಜ್ ತಮ್ಮ ಕೃಷಿ ಅನುಭವವನ್ನ ಜಿಲ್ಲೆಯ ರೈತರೊಂದಿಗೆ ಹಂಚಿಕೊಂಡ್ರು. ಅಲ್ಲದೆ ಸಮಗ್ರ ಹಾಗೂ ಸಾವಯವ ಕೃಷಿ ಪದ್ದತಿ ಮೂಲಕ ಹೆಚ್ಚೆಚ್ಚು ಆದಾಯ ಮಾಡುವ ಕುರಿತು ಮನವರಿಕೆ ಮಾಡಿಕೊಡಲಾಯಿತು.

ಒಟ್ನಲ್ಲಿ ತಾನಾಯ್ತು, ತನ್ನ ಕೆಲಸವಾಯ್ತು ಎಂದು ಸುಮ್ಮನಾಗದ ಎಸ್ಪಿ ದೇವರಾಜ್​ ಜಿಲ್ಲೆಯ ರೈತರಿಗೆ ಹೊಸ ಕೃಷಿ ಪದ್ದತಿ ತಿಳಿಸಿಕೊಡುವ ಜೊತೆಗೆ ರೈತರು ನಷ್ಟದ ಸುಳಿಗೆ ಸಿಲುಕದೆ ಒಳ್ಳೆಯ ಆದಾಯ ಗಳಿಸುವಂತಾಗಲಿ ಅನ್ನೋ ನಿಟ್ಟಿನಲ್ಲಿ ಮಾಡಿದ ಈ ಪ್ರಯತ್ನ ಜಿಲ್ಲೆಯ ರೈತರಿಂದ ಪ್ರಶಂಸೆಗೆ ಪಾತ್ರವಾಯಿತು. (ವರದಿ: ರಾಜೇಂದ್ರಸಿಂಹ, ಟಿವಿ 9, ಕೋಲಾರ)

ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ