ನಮ್ಮೂರಿನ ಗೋಮಾಳ ನಮಗೇ ಮೀಸಲಿಡಿ -ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಕೊಡಬೇಡಿ: ಕೋಲಾರ ಡಿಸಿ ವಿರುದ್ಧ ಗಾಜಲದಿನ್ನೆ ಗ್ರಾಮಸ್ಥರು ಕಿಡಿ

| Updated By: ಸಾಧು ಶ್ರೀನಾಥ್​

Updated on: Mar 15, 2024 | 12:47 PM

ಜಿಲ್ಲಾಧಿಕಾರಿಯಾಗಿ ಒಂದು ಸಮುದಾಯದ ಪರವಾಗಿ ಕೆಲಸ ಮಾಡಬೇಡಿ - ನಮ್ಮೂರಿನ ಗೋಮಾಳ ನಮಗೇ ಮೀಸಲಿಡಿ -ಅಲ್ಪಸಂಖ್ಯಾತರ ವಸತಿ ನಿಲಯಕ್ಕಾಗಿ ಬರೆದುಕೊಡಬೇಡಿ ಎಂದು ಗಾಜಲದಿನ್ನೆ ಗ್ರಾಮಸ್ಥರು ಜೋರಾಗಿಯೇ ಕೇಳುತ್ತಿದ್ದಾರೆ. ಇನ್ನು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರ ಮೇಲೆ ಈಗಾಗಲೇ ಹಲವು ಆರೋಪಗಳು ಕೇಳಿಬಂದಿವೆ, ಜಿಲ್ಲಾಧಿಕಾರಿಯಾಗಿ ಕೇವಲ ಒಂದು ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಜಾಗಗಳನ್ನು ವಕ್ಫ ಬೋರ್ಡ್​ಗೆ ಮಂಜೂರು ಮಾಡಿ ದಾಖಲಾತಿಗಳನ್ನು ಮಾಡುತ್ತಿದ್ದಾರೆ ಅನ್ನೋ ಆರೋಪಗಳು ಡಿಸಿ ಅವರ ಮೇಲೆ ಕೇಳಿ ಬಂದಿದೆ.

ಆ ಗ್ರಾಮದ ಜನರು ಹಲವು ವರ್ಷಗಳಿಂದ ತಮ್ಮೂರಿನ ಸರ್ಕಾರಿ ಗೋಮಾಳ ಭೂಮಿಯನ್ನು ಶುಚಿಗೊಳಿಸಿ ಆಟದ ಮೈದಾನವನ್ನಾಗಿ ಮಾಡಿಕೊಂಡಿದ್ರು, ಅಲ್ಲಿ ನೂರಾರು ಹಾಸ್ಟೆಲ್​ ವಿದ್ಯಾರ್ಥಿಗಳು, ಗ್ರಾಮದ ಯುವಕರು ಕ್ರೀಡಾ ತರಬೇತಿ ಪಡೆಯುತ್ತಿದ್ದರು. ಆದರೆ ಸದ್ಯ ಅದ್ಯಾರ ಕುತಂತ್ರವೋ ಏನೋ ಆಟದ ಮೈದಾನಕ್ಕೆಂದು ಮೀಸಲಿಟ್ಟಿದ್ದ ಜಾಗದ ಮೇಲೂ ಕಣ್ಣಾಕುತ್ತಿದ್ದಾರೆ. ಪೊಲೀಸ್ ಬಂದೋಬಸ್ತ್​ ನಲ್ಲಿ ಆಟದ ಮೈದಾನದ ಜಾಗದಲ್ಲಿ ಜೆಸಿಬಿ ಮೂಲಕ ಗಡಿ ನಿಗದಿ ಮಾಡುತ್ತಿರುವ ಅಧಿಕಾರಿಗಳು, ಅದನ್ನು ಪ್ರಶ್ನೆ ಮಾಡಿ ವಿರೋಧ ಮಾಡುತ್ತಿರುವ ಗ್ರಾಮಸ್ಥರು ಹಾಗೂ ಯುವಕರು. ಈಗಾಗಲೇ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆಂದು (Gomala for minority hostel) ಎರಡು ಎಕರೆ ಭೂಮಿಯ ದಾಖಲಾತಿ ಮಾಡಿರುವ ಅಧಿಕಾರಿಗಳು ಇಂಥಾದೊಂದು ವಿದ್ಯಮಾನಗಳು ನಮಗೆ ಕಂಡು ಬಂದಿದ್ದು ಕೋಲಾರ (Kolar DC) ತಾಲ್ಲೂಕು ಗಾಜಲದಿನ್ನೆ ಗ್ರಾಮದಲ್ಲಿ ( Gajaladinne village).

ಅಷ್ಟಕ್ಕೂ ಈ ಗ್ರಾಮದಲ್ಲಿ ಆಗಿರೋದಾದ್ರು ಏನು ಅಂತ ನೋಡಿದ್ರೆ ಗಾಜಲದಿನ್ನೆ ಗ್ರಾಮದ ಬಳಿಯಲ್ಲಿ ಕಲ್ಲು ಬಂಡೆಗಳಿಂದ ಗಿಡಗಂಟೆಗಳಿಂದ ತುಂಬಿದ್ದ ಸುಮಾರು 5.20 ಎಕರೆ ಸರ್ಕಾರಿ ಗೋಮಾಳ ಜಾಗವಿತ್ತು, ಅದನ್ನು ಗ್ರಾಮದ ಯುವಕರು ಸೇರಿ ಕ್ಲೀನ್​ ಮಾಡಿಕೊಂಡು ಅದನ್ನು ಆಟದ ಮೈದಾನವನ್ನಾಗಿ ಮಾಡಿಕೊಂಡಿದ್ದರು. ಇದಾದ ನಂತರ ಅದೇ ಆಟದ ಮೈದಾನದ ಸುತ್ತಲೂ ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಎಪಿಜೆ ಅಬ್ದುಲ್​ ಕಲಾಂ ಹೆಸರಲ್ಲಿ ಅಲ್ಪಸಂಖ್ಯಾತ ಇಲಾಖೆ ವಸತಿ ನಿಲಯಗಳು ಕೂಡಾ ತಲೆ ಎತ್ತಿದವು.

ಇಲ್ಲಿ ಎಲ್ಲಾ ವಿದ್ಯಾರ್ಥಿಗಳು ಕೂಡಾ ಇದೇ ಜಾಗದಲ್ಲಿ ಆಟವಾಡುತ್ತಿದ್ದರು. ಹೀಗಿರುವಾಗಲೇ ಗ್ರಾಮದ ಯುವಕರು ಈ 5.20 ಗುಂಟೆ ಜಾಗವನ್ನು ಸರ್ಕಾರಿ ಆಟದ ಮೈದಾನಕ್ಕೆ ಈ ಜಾಗವನ್ನು ಮೀಸಲಿಡಬೇಕೆಂದು ಏಳೆಂಟು ವರ್ಷಗಳಿಂದ ಅಧಿಕಾರಿಗಳ ಬಳಿ ಮನವಿ ಮಾಡಿದ್ರು. ಅದರಂತೆ ಕೋಲಾರ ಹಿಂದಿನ ಜಿಲ್ಲಾಧಿಕಾರಿ ಸೆಲ್ಪಮಣಿಯವರು ಜಾಗವನ್ನು ಸರ್ಕಾರಿ ಆಟದ ಮೈದಾನಕ್ಕೆ ಮೀಸಲಿಡುವುದಾಗಿ ಸ್ಥಳ ಪರಿಶೀಲನೆ ನಡೆಸಿ ದಾಖಲಾತಿ ಮಾಡಿಕೊಡುವ ಭರವಸೆ ಕೂಡಾ ನೀಡಿದ್ರು. ಆದರೆ ದಾಖಲಾತಿ ಮಾತ್ರ ಆಗಿರಲಿಲ್ಲ, ಆದರೆ ಇತ್ತೀಚೆಗೆ ಕೋಲಾರಕ್ಕೆ ಬಂದಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಗಾಜಲದಿನ್ನೆ ಗ್ರಾಮದ ಸರ್ವೆ ನಂ 71 ರಲ್ಲಿನ ಆಟದ ಮೈದಾನದಲ್ಲಿ ಎರಡು ಎಕರೆ ಜಾಗವನ್ನು ಅಲ್ಪಸಂಖ್ಯಾತರ ವಸತಿ ನಿಲಯಕ್ಕಾಗಿ ಮಂಜೂರು ಮಾಡಿ ಪಹಣಿಯಲ್ಲೂ ದಾಖಲಿಸಿ ಇಂದು ಜಾಗವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಈ ವೇಳೆ ಗ್ರಾಮಸ್ಥರು ವಿರೋಧ ಮಾಡಿದ್ರು.

ಇನ್ನು ಈಗಾಗಲೇ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರ ಮೇಲೆ ಹಲವು ಆರೋಪಗಳು ಕೇಳಿಬಂದಿವೆ, ಜಿಲ್ಲಾಧಿಕಾರಿಯಾಗಿ ಕೇವಲ ಒಂದು ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಜಾಗಗಳನ್ನು ವಕ್ಫ ಬೋರ್ಡ್​ಗೆ ಮಂಜೂರು ಮಾಡಿ ದಾಖಲಾತಿಗಳನ್ನು ಮಾಡುತ್ತಿದ್ದಾರೆ ಅನ್ನೋ ಆರೋಪಗಳು ಡಿಸಿ ಅವರ ಮೇಲೆ ಕೇಳಿ ಬಂದಿದೆ. ಈ ಬೆನ್ನಲ್ಲೇ ಈಗಾಗಲೇ ಗಾಜಲದಿನ್ನೆ ಗ್ರಾಮದ ಬಳಿ ಈ ಆಟದ ಮೈದಾನದ ಪಕ್ಕದಲ್ಲೇ ಅಬ್ದುಲ್​ ಕಲಾಂ ಅವರ ಹೆಸರಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗಿದೆ. ಹೀಗಿದ್ದರೂ ಮತ್ತೆ ಅದಕ್ಕೆ ಜಾಗ ಮೀಸಲಿಟ್ಟಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪ.

Also read: ಬಂಗಾರಪೇಟೆಯಲ್ಲಿ ಮಹಾಶಿವರಾತ್ರಿಗೆ ನಾನ್​ ವೆಜ್​ ಪೂಜೆ! ಮೇಕೆ, ಕೋಳಿಯ ಕತ್ತನ್ನು ಕಚ್ಚಿ ಬಿಸಿ ರಕ್ತ ಸೇವಿಸುವ ತಮಿಳು ಸಂಸ್ಕೃತಿ

ಸದ್ಯ ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ಅಟದ ಮೈದಾನಕ್ಕಾಗಿ ಜಾಗವನ್ನು ಮೀಸಲಿಡಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿದ್ದರೂ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೊಶ ಹೊರಹಾಕಿದ್ದು, ನಮ್ಮೂರಿನ ಜಾಗ ನಮ್ಮೂರಿಗೆ ಮೀಸಲಿಡಿ ಎಂದು ಆಗ್ರಹಿಸಿದ್ದಾರೆ. ಅಷ್ಟೇ ಯಾಕೆ ಸದ್ಯ ಸರ್ಕಾರವೇ ಇತ್ತೀಚೆಗೆ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಂದ್ರ ಸರ್ಕಾರದ ಎದುರಲ್ಲಿ ವಾದ ಮಂಡಿಸುತ್ತಿದೆ. ಅದರಂತೆ ನಮ್ಮೂರಿನ ಗೋಮಾಳ ನಮಗೇ ಮೀಸಲಿಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಒಂದಡಿ ಸರ್ಕಾರಿ ಜಾಗ ಸಿಕ್ಕರೂ ಸಾಕು ಕಬಳಿಕೆ ಮಾಡುವ ಜನರೇ ಇರುವಾಗ ಗ್ರಾಮಸ್ಥರು ಗ್ರಾಮದ ಯುವಕರಿಗೆ ಹಾಗೂ ಕ್ರೀಡಾಪಟುಗಳಿಗಾಗಿ ಸರ್ಕಾರಿ ಜಾಗವನ್ನು ಮೀಸಲಿಡಿ ಎಂದು ಸರ್ಕಾರಿ ಕಚೇರಿಗಳಿಗೆ ಅಲೆದರೂ ಕೂಡಾ ಅಧಿಕಾರಿಗಳ ಈ ತಂತ್ರದ ಹಿಂದೆ ಏನು ಉದ್ದೇಶ ಅನ್ನೋದೆ ಪ್ರಶ್ನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Fri, 15 March 24