ಕೋಲಾರ: ಅದು ಕನ್ನಡದ ಭಗವದ್ಗೀತೆ ಎಂದೇ ಕರೆಯಲಾಗುವ ಮಂಕುತಿಮ್ಮನ ಕಗ್ಗ ಬರೆದ ಡಿವಿಜಿ (DV Gundappa) ಅವರ ನಿವಾಸ. ಆ ನಿವಾಸದ ಬಳಿ ಇವತ್ತು ದೊಡ್ಡದೊಂದು ಸಂಭ್ರಮವೇ ಮನೆ ಮಾಡಿತ್ತು. ಅಧಿಕಾರಿಗಳು ಜನಪ್ರತಿನಿಧಿಗಳು, ಸಿನಿಮಾ ನಟರು, ಹಾಸ್ಯ ನಟರು, ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲರ ಬಾಯಲ್ಲೂ ಬರೀ ಹೊಗಳಿಕೆಯ ಸುರಿಮಳೆ. ಅಲ್ಲಿ ಅಂತಾದೊಂದು ಅದ್ಬತ ಚಮತ್ಕಾರ ನಡೆದು ಹೋಗಿತ್ತು.
ಹೊರಗಿನಿಂದ ನೋಡಲು ಸುಂದರವಾದ ಕಟ್ಟಡ, ಯಾವುದೇ ಬಂಗಲೆಗೂ, ಇಲ್ಲಾ ಹೈಟೆಕ್ ಸರ್ಕಾರಿ ಶಾಲೆಗೂ ಕಡಿಮೆ ಇಲ್ಲದಂತೆ ಕಣ್ಣು ಕುಕ್ಕುವಂಥ ಕಟ್ಟಡದ ಹೊರನೋಟ, ಇನ್ನೊಂದೆಡೆ ಸಿನಿಮಾ ನಟರು, ಜನಪ್ರನಿಧಿಗಳು ಹಾಗೂ ಅಧಿಕಾರಿಗಳಿಂದ ಆ ಕಾರ್ಯಕ್ಕೆ ಪ್ರಶಂಸೆಗಳ ಮಹಾಪೂರ, ಇನ್ನು ಬಂದಿದ್ದ ಜನರಂತು ಅಲ್ಲಿ ನಿಂತು ಸೆಲ್ಪಿ ತೆಗೆದಿದ್ದೇ ತೆಗೆದಿದ್ದು. ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ. ಹೌದು ಕನ್ನಡದ ಮೇರುಕವಿ ಡಿವಿ ಗುಂಡಪ್ಪನವರ ಹುಟ್ಟೂರು ಮುಳಬಾಗಿಲು. ಅವರು ವಾಸವಿದ್ದ ನಿವಾಸವನ್ನು ಸರ್ಕಾರ ಶಾಲೆಯನ್ನಾಗಿ ಮಾಡಿತ್ತು. ಆದರೆ ಶಾಲೆ ಸಂಪೂರ್ಣವಾಗಿ ಶಿಥಿಲವಾಗಿದ್ದ ಪರಿಣಾಮ ಓಸ್ಯಾಟ್ ಅನ್ನೋ ಸಂಸ್ಥೆ ಕಳೆದ ಒಂದುವರೆ ವರ್ಷದ ಹಿಂದೆ ಡಿವಿಜಿ ಅವರ ಹೆಸರಿನ ಈ ಶಾಲೆಯನ್ನು ಹೊಸದಾಗಿ ನಿರ್ಮಾಣ ಮಾಡಲು ಮುಂದಾಗಿತ್ತು. ಪರಿಣಾಮ ಒಂದುವರೆ ವರ್ಷಗಳ ನಂತರ ಈ ಶಾಲೆಯನ್ನು ಸುಮಾರು 2.75 ಕೋಟಿ ರೂ. ವ್ಯಚ್ಚದಲ್ಲಿ ಹಲವು ದಾನಿಗಳ ನೆರವಿನಿಂದ ನಿರ್ಮಾಣ ಮಾಡಿ ಇಡೀ ರಾಜ್ಯದಲ್ಲೇ ಮಾದರಿಯಾದ ಶಾಲೆಯನ್ನಾಗಿ ನಿರ್ಮಾಣ ಮಾಡಿ ಕೊಟ್ಟಿದೆ. ಅಷ್ಟೇ ಅಲ್ಲದೆ ಇಂದು ಆ ನೂತನ ಶಾಲೆಯ ಕಟ್ಟಡವನ್ನು ಲೋಕಾರ್ಪಣೆ ಕೂಡಾ ಮಾಡಲಾಯಿತು.
ಹೊರಗಿನಿಂದ ಆ ಶಾಲೆ ಯಾವುದೇ ಸುಂದರ ಬಂಗಲೆ, ದೊಡ್ಡ ದೊಡ್ಡ ಸರ್ಕಾರಿ ಕಟ್ಟಡ ಅಥವಾ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ನಿರ್ಮಾಣ ಮಾಡಿ, ಇದು ನಿಜವಾಗಿಯೂ ಸರ್ಕಾರಿ ಶಾಲೆನಾ ಎಂದು ಎಲ್ಲರಿಗೂ ಹುಬ್ಬೇರಿಸುವಂತೆ ನಿರ್ಮಾಣ ಮಾಡಲಾಗಿದೆ. ಇವತ್ತಿನ ಕಾಲಕ್ಕೆ ಸರಿಹೊಂದುವ ರೀತಿಯಲ್ಲಿ ಅತ್ಯಾಧುನಿಕ ಪೀಠೋಪಕರಣಗಳು, ಸಿಸಿಟಿವಿ ಕ್ಯಾಮರಾ, ಉತ್ತಮ ಗಾಳಿ ಬೆಳಕು, ಮಕ್ಕಳಿಗೆ ಕಲಿಯುವ ವಾತಾವರಣ, ಸುಂದರ ಹಾಗೂ ಮನಸೂರೆಗೊಳ್ಳುವ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಲವು ಜನ ದಾನಿಗಳ ನೆರವಿನಿಂದ ಸುಮಾರು ಹತ್ತು ಕೊಠಡಿಗಳು, ಸುಸರ್ಜಿತ ಶೌಚಾಲಯ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಶಿಕ್ಷಕರ ಪ್ರತ್ಯೇಕ ಕೊಠಡಿ ಸೇರಿದಂತೆ ಎಲ್ಲವೂ ಈ ನೂತನ ಶಾಲೆಯಲ್ಲಿದೆ. ಓಸ್ಯಾಟ್ ಅನ್ನೋ ಸಂಸ್ಥೆಯಲ್ಲಿ ಸಾಮಾಜಿಕ ಕಾಳಜಿ ಇರುವ ನಿವೃತ್ತ ಯೋಧರು, ಅನಿವಾಸಿ ಭಾರತೀಯರು ಹಾಗೂ ಹಲವು ಉದ್ಯಮಿಗಳು ಸೇರಿ ಮಾಡಿರುವ ಸಂಸ್ಥೆ ಇದಾಗಿದ್ದು ಈವರೆಗೆ ಓಸ್ಯಾಟ್ ಸಂಸ್ಥೆ ರಾಜ್ಯದ ಹಲವೆಡೆ 78 ಶಾಲೆಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಿ ಕೊಟ್ಟಿದೆ.
ಒಂದೂವರೆ ವರ್ಷದ ಹಿಂದೆ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಇಂದಿಗೆ ಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ. ಇನ್ನು ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಸಿನಿಮಾ ನಟ ರಮೇಶ್ ಅವರವಿಂದ್, ಹಾಸ್ಯ ನಟರಾದ ಗಂಗಾವತಿ ಪ್ರಾಣೇಶ್, ಬಸವರಾಜ್ ಮಹಾಮನಿ, ಸೇರಿದಂತೆ ಕೋಲಾರ ಜಿಲ್ಲಾಧಿಕಾರಿ, ಜಿಲ್ಲಾರಕ್ಷಣಾಧಿಕಾರಿ ಹೀಗೆ ಹಲವು ಗಣ್ಯರ ದಂಡೇ ಇಲ್ಲಿಗೆ ಬಂದಿತ್ತು. ನೂತನ ಕಟ್ಟಡವನ್ನು ಕಂಡು ಮಕ್ಕಳಂತೂ ಹುಬ್ಬೇರಿಸಿದ್ದರು.
ಇದೇ ವೇಳೆ ಮಾತನಾಡಿದ ಶಾಸಕ ಸಮೃದ್ದಿ ಮಂಜುನಾಥ್ ಹಾಗೂ ನಟ ರಮೇಶ್ ಅರವಿಂದ್, ಹಾಸ್ಯನಟ ಗಂಗಾವತಿ ಪ್ರಾಣೇಶ್ ಸೇರಿದಂತೆ ಹಲವು ಗಣ್ಯರು ಸರ್ಕಾರಗಳು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಬೇಕು, ಈ ಮೂಲಕ ಖಾಸಗಿ ಶಾಲೆಗಳ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಒಟ್ಟಾರೆ ಸರ್ಕಾರಿ ಶಾಲೆಗಳನ್ನು ಹಲವು ಕಾರಣಗಳಿಂದು ಮುಚ್ಚುತ್ತಿರುವ ಈಕಾಲದಲ್ಲಿ, ಮಕ್ಕಳಿಲ್ಲದೆ ಶಾಲಾ ಕಟ್ಟಡಗಳು ಕುಸಿಯುತ್ತಿದೆ ಇಂಥ ಸಂದರ್ಭದಲ್ಲಿ ಇಡೀ ರಾಜ್ಯದಲ್ಲೇ ಮಾದರಿಯಾಗಬಲ್ಲ, ಕಟ್ಟಡವನ್ನು ಕಂಡವರು ಹುಬ್ಬೇರಿಸುವಂತ ಸರ್ಕಾರಿ ಶಾಲಾ ಕಟ್ಟಡ ರಾಜ್ಯದ ಮೂಡಣಬಾಗಿಲಿ ನಲ್ಲಿ ನಿರ್ಮಾಣವಾಗಿದ್ದು ಇದು ರಾಜ್ಯಾದ್ಯಂತ ಸರ್ಕಾರಿ ಶಾಲೆಯನ್ನು ಉಳಿಸುವಲ್ಲಿ ದೊಡ್ಡದೊಂದು ಸಂಚಲವನ್ನು ಮೂಡಿಸಲಿ ಅನ್ನೋದು ಎಲ್ಲಾ ಕನ್ನಡ ಮನಸ್ಸುಗಳ ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ