ಕೋಲಾರ: ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಗೌರಿಪೇಟೆಯಲ್ಲಿ ನಡೆದಿದೆ. ಕೋಲಾರದ ಯುವತಿ ಕರಾವಳಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಳು. ತಾನು ಅಂದುಕೊಂಡಂತೆ ಇಂಜಿನಿಯರಿಂಗ್ ಪರೀಕ್ಷೆ ಪಾಸಾಗಿಲ್ಲ ಎಂದು ದುಡುಕಿ ನಿರ್ಧಾರ ತೆಗೆದುಕೊಂಡ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪರೀಕ್ಷೆಯ ಫಲಿತಾಂಶ ಬಂದಾಗಿನಿಂದ ಬೇಸರವಾಗಿದ್ದ ಯುವತಿ
ಕೋಲಾರ ನಗರದ ಗೌರಿಪೇಟೆ 3ನೇ ಕ್ರಾಸ್ನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಶ್ರೀ ದುಡುಕು ನಿರ್ಧಾರ ಮಾಡಿ ತನ್ನ ಬದುಕಿಗೆ ಅಂತ್ಯ ಹಾಡಿದ್ದಾಳೆ. ಗೌರಿಪೇಟೆ ನಿವಾಸಿ ಉಪನ್ಯಾಸಕ ಗೋಪಿಕೃಷ್ಣ ಅವರಿಗೆ ಇಬ್ಬರು ಮಕ್ಕಳು, ಮೊದಲ ಮಗಳು ಅನುಶ್ರೀ ಉಜಿರೆಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೊನೆ ಸೆಮಿಸ್ಟರ್ ಇಂಜಿನಿಯರಿಂಗ್ ಪರೀಕ್ಷೆ ಬರೆದಿದ್ದಳು. ಎರಡು ದಿನಗಳ ಹಿಂದಷ್ಟೇ ಇಂಜಿನಿಯರಿಂಗ್ ಕೊನೆ ಸೆಮಿಸ್ಟರ್ನ ರಿಸೆಲ್ಟ್ ಬಂದಿತ್ತು. ಅದರಲ್ಲಿ ಮೂರು ವಿಷಯದಲ್ಲಿ ಯುವತಿ ಫೇಲ್ ಆಗಿದ್ದಳು. ಇದನ್ನು ಸಹಿಸದ ಅನುಶ್ರೀ ರಿಸಲ್ಟ್ ಬಂದಾಗಿನಿಂದ ಸಾಕಷ್ಟು ಬೇಸರಗೊಂಡಿದ್ದಳು, ಇದನ್ನು ಗಮನಿಸಿದ ತಂದೆ ಅನುಶ್ರೀಗೆ ಸಾಕಷ್ಟು ಧೈರ್ಯ ಕೂಡ ಹೇಳಿದ್ದರು.
ತಾನು ಅನುತ್ತೀರ್ಣರಾಗಿರುವ ವಿಚಾರವಾಗಿ ತಲೆಕೆಡಿಸಿಕೊಂಡಿದ್ದ ಮಗಳಿಗೆ ತಂದೆ ಆಗಿದ್ದಾಯ್ತು ಬಿಡು ಓದು ಮುಗಿಸು ಮದುವೆ ಮಾಡೋಣ ಎಂದು ಹೇಳಿದ್ದರಂತೆ. ಅದಕ್ಕೆ ಮಗಳು ಡಿಸೆಂಬರ್ ನಂತರದಲ್ಲಿ ನೋಡಿ ಎಂದಿದ್ದಳಂತೆ. ಅದಾದ ನಂತರವೂ ಅನುಶ್ರೀ ಸಾಕಷ್ಟು ಬೇಸರದಿಂದಲೇ ಇದ್ದಳಂತೆ. ಇಂದು ಎಂದಿನಂತೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆಂದು ಹೊರ ಹೋಗಿದ್ದು, ಮನೆಯಲ್ಲಿ ತನ್ನ ತಾಯಿ, ಅಜ್ಜಿ ಹಾಗೂ ಅನಶ್ರೀ ಇದ್ದರು. ಅಜ್ಜಿ ಅನುಶ್ರೀಗೆ ಕಾಫಿ ತಂದು ಕೊಟ್ಟು ಅಡುಗೆ ಮನೆಗೆ ಹೋಗಿದ್ದಾರೆ. ತಾಯಿ ಸ್ನಾನ ಮಾಡಲು ಹೋಗಿದ್ದಾರೆ. ಅಷ್ಟೇ, ಎರಡೇ ನಿಮಿಷದಲ್ಲಿ ಅನುಶ್ರೀ ಅಲ್ಲೇ ರೂಂನಲ್ಲಿದ್ದ ಪ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಾಯಿ ಸ್ನಾನ ಮುಗಿಸಿ ಬರುವಷ್ಟರಲ್ಲೇ ನೇಣಿಗೆ ಶರಣಾಗಿದ್ದ ಯುವತಿ
ಸ್ನಾನ ಮುಗಿಸಿ ವಾಪಸ್ಸು ಬಂದ ತಾಯಿ ನೋಡುವಷ್ಟರಲ್ಲಿ ಅಲ್ಲೇ ರೂಂನಲ್ಲಿ ಅನುಶ್ರೀ ಶವ ಪ್ಯಾನ್ಗೆ ನೇತಾಡುತ್ತಿತ್ತು ತಕ್ಷಣ ಆಕೆಯ ಶವವನ್ನು ಇಳಿಸಿಕೊಂಡು ಪಕ್ಕದಲ್ಲೇ ಇದ್ದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೆ ಅನುಶ್ರೀ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಪುಟ್ಟ ಸಂಸಾರಕ್ಕೆ ಅನುಶ್ರೀ ನಿರ್ಧಾರ ಆಘಾತ
ಪುಟ್ಟ ಸಂಸಾರದ ನಂದಾದೀಪದಂತಿದ್ದ ಅನುಶ್ರೀ ಸಾವಿನಿಂದ ಇಡೀ ಕುಟುಂಬ ಕಂಗಾಲಾಗಿ ಹೋಗಿದೆ. ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ವಿಷಯವನ್ನೇ ಅಷ್ಟೊಂದು ದೊಡ್ಡದಾಗಿ ಯೋಚಿಸಿ ಜೀವನದ ಪರೀಕ್ಷೆಯಲ್ಲೇ ಫೇಲ್ ಆದ ಮಗಳ ದುಡುಕು ನಿರ್ಧಾರ ಪೋಷಕರಲ್ಲಿ ನಿಜಕ್ಕೂ ಆತಂಕ ಹುಟ್ಟಿಸಿದೆ ಎಂದು ಅನುಶ್ರೀ ತಂದೆ ಉಪನ್ಯಾಸಕ ಗೋಪಿಕೃಷ್ಣ ಹಾಗೂ ಅವರ ಉಪನ್ಯಾಸಕ ಸ್ನೇಹಿತರಾದ ಉದಯ್ ಕುಮಾರ್, ಮತ್ತು ನಾಗಾನಂದ್ ತಿಳಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವಾಲಿನ ಜೀವದಲ್ಲಿ ಪರೀಕ್ಷೆಯೇ ಕೊನೆಯಲ್ಲ. ಜೀವನದಲ್ಲಿ ಮುಂದೆ ಸಾಕಷ್ಟು ಅವಕಾಶಗಳಿರುತ್ತವೆ. ಇಂಥ ದುಡುಕು ನಿರ್ಧಾರಕ್ಕೆ ಕೈ ಹಾಕಿ, ಜೀವನದಲ್ಲಿ ಬರುವ ಹತ್ತಾರು ಅವಕಾಶಗಳನ್ನು ಕೈಚೆಲ್ಲಿ ಕುಳಿತುಕೊಳ್ಳುವ ಮುನ್ನ ಕುಟುಂಬದ ಬಗ್ಗೆ ಒಮ್ಮೆ ಯೋಚಿಸುವುದು ಸೂಕ್ತ.
ವರದಿ : ರಾಜೇಂದ್ರಸಿಂಹ
ಇದನ್ನೂ ಓದಿ:
Maharashtra: ಪತಿ ಆಫೀಸಿನಿಂದ ಬರುವಾಗ ಪಾನಿಪುರಿ ತಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ