Tv9 Kannada Digital Special: ಜೀವ ಹೋದರೂ ಸರಿ, ಗಣಿಗಾರಿಕೆ ನಡೆಸಲು ಬಿಡೆವು‘ ಎಂದ ಗ್ರಾಮಸ್ಥರಿಗೆ ಸಿಕ್ಕಿತು ಜಯ
ಗಣಿಗಾರಿಕೆ ನಡೆಯುತ್ತಿರುವ ಗುಡ್ಡದಲ್ಲಿ ಆಂಜನೇಯ ಸ್ವಾಮಿ, ಈರಣ್ಣ ಸ್ವಾಮಿ, ಪಟಾಲಮ್ಮ ದೇವಿ, ಗಂಗಮ್ಮದೇವಿ ದೇಗುಲವಿದೆ.
ಕೋಲಾರ: ಪುರಾತನ ಇತಿಹಾಸ ಹೊಂದಿರುವ ಹತ್ತಾರು ಗ್ರಾಮಗಳ ಸಾವಿರಾರು ಜನರ ಆರಾಧ್ಯ ದೈವವಾಗಿರುವ ಆ ಬೆಟ್ಟಕ್ಕೆ ಕಂಟಕ ಎದುರಾಗಿದೆ. ಸ್ಥಳೀಯ ಜನರ ಒಪ್ಪಿಗೆ ಪಡೆಯದೇ ರಾಜ್ಯ ರಾಜಧಾನಿಯಲ್ಲಿ ಕುಳಿತು ಸರ್ಕಾರ ಮಾಡಿರುವ ಆದೇಶ ಸದ್ಯ ಹತ್ತಾರು ಗ್ರಾಮಗಳ ಜನರ ಧಾರ್ಮಿಕ ಭಾವನೆಗಳಿಗೆ ಹಾಗೂ ಜೀವನಕ್ಕೆ ಆತಂಕ ತಂದೊಡ್ಡಿತ್ತು. ಆದರೆ ಹೈಕೋರ್ಟ್ ನೀಡಿದ ಒಂದು ತೀರ್ಪಿನಿಂದ ಇಲ್ಲಿಯ ಗ್ರಾಮಸ್ಥರು ನಿರಾಳವಾಗಿ ಉಸಿರಾಡುವಂತಾಗಿದೆ. ಯಾವ ಊರಿನ ಯಾವ ಬೆಟ್ಟ? ಇದೇನಿದು ಮತ್ತೆ ಮುನ್ನೆಲೆಗೆ ಬಂದ ಗಣಿಗಾರಿಕೆ ಎಂದು ಕುತೂಹಲ ಉಂಟಾಯಿತಾ? ಟಿವಿ9 ಕನ್ನಡದ ಕೋಲಾರ ಪ್ರತಿನಿಧಿ ರಾಜೇಂದ್ರ ಸಿಂಹ ಬರೆದಿದ್ದಾರೆ, ಓದಿ.
ನೋಡಲು ಬೃಹತ್ತಾದ ಬೆಟ್ಟ, ಬೆಟ್ಟದ ಮೇಲೆ ಪೌರಾಣಿಕ ನಂಬಿಕೆಯ ಹತ್ತಾರು ಕುರುಹುಗಳು. ಅವುಗಳನ್ನು ವೀಕ್ಷಣೆ ಮಾಡುತ್ತಿರುವ ಸಂಸದ ಮುನಿಸ್ವಾಮಿ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಇವೆಲ್ಲಾ ಕಂಡು ಬಂದಿದ್ದು ಕೋಲಾರ ತಾಲ್ಲೂಕು ದೊಡ್ಡಅಯ್ಯೂರು ಗ್ರಾಮದ ಅಂಜನಾದ್ರಿ ಬೆಟ್ಟದಲ್ಲಿ. ಈ ಗ್ರಾಮದ ಬಳಿ ಇರುವ ಬೆಟ್ಟಕ್ಕೆ ನೂರಾರು ವರ್ಷಗಳಿಂದ ಗ್ರಾಮಗಳ ಜನರಿಗೆ ತಮ್ಮದೇ ಆದ ಪುರಾತನ ನಂಬಿಕೆ ಇದೆ, ದೀಪದ ಬೆಟ್ಟ ಹಾಗೂ ಅಂಜನಾದ್ರಿ ಬೆಟ್ಟ ಎಂದು ಕರೆಯಲಾಗುವ ಈ ಬೆಟ್ಟಗಳಲ್ಲಿ ಜನರು ಯುಗಾದಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಬೆಟ್ಟದಲ್ಲಿ ದೀಪ ಹಚ್ಚಿ ಬೆಟ್ಟದ ಮೇಲಿನ ಗಣೇಶ ಹಾಗೂ ಆಂಜನೇಯ ದೇವಾಲಯಗಳಿಗೆ ಪೂಜೆ ಮಾಡಿ ನಮಗೆ ಬರಗಾಲ ಬರದಂತೆ ಗ್ರಾಮದ ಜನ ಜಾನುವಾರುಗಳನ್ನು ಕಾಪಾಡು ದೇವರೇ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದ ಬೆಟ್ಟಗಳು ಇವು.
ಬೆಟ್ಟದೊಂದಿಗೆ ಜನ ಹಾಗೂ ಜಾನುವಾರುಗಳಿಗೆ ಇದೆ ಭಾವನಾತ್ಮಕ ಸಂಬಂಧ ಈ ಬೆಟ್ಟದ ಸುತ್ತಲೂ ಅರಾಭಿಕೊತ್ತನೂರು, ದೊಡ್ಡಅಯ್ಯೂರು, ಚಿಕ್ಕಅಯ್ಯೂರು, ವೆಂಕಟಾಪುರ ಕೆಂದಟ್ಟಿ, ಸೇರಿದಂತೆ ಹತ್ತಾರು ಗ್ರಾಮಗಳಿವೆ ಈ ಗ್ರಾಮದ ಜನರು ತಮ್ಮ ಕುರಿ,ಮೇಕೆ, ಹಸು, ಎಮ್ಮೆಗಳನ್ನು ಮೇಯಿಸಲು ಈ ಬೆಟ್ಟಕ್ಕೆ ಬರುತ್ತಿದ್ದರು. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಅವಿನಾಭಾವ ಸಂಬಂಧ ಹೊಂದಿರುವ ತಮ್ಮ ಧಾರ್ಮಿಕ ಭಾವನೆಯ ಸಂಕೇತವಾಗಿರುವ ಈ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಸ್ಥಳಿಯರ ಗಮನಕ್ಕೆ ಬಾರದೇ ಸರ್ಕಾರದ ಮಟ್ಟದಲ್ಲಿ ಈ ಬೆಟ್ಟದಲ್ಲಿ ಎಂ.ಸ್ಯಾಂಡ್, ಅಂದರೆ ಕೃತಕ ಮರಳು ಘಟಕ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಇಲ್ಲಿ ಕೃತಕ ಮರಳು ಘಟಕ ನಿರ್ಮಣ ಮಾಡಿದ್ದೇ ಆದರೆ ಇಲ್ಲಿ ಗಣಿಗಾರಿಕೆ ಆರಂಭವಾದರೆ ನಮ್ಮ ಪಾಡೇನು ಎಂಬ ಆತಂಕ ಶುರುವಾಗಿತ್ತು. ‘ನಮ್ಮ ಜೀವ ಹೋದರೂ ಸರಿ, ಇಲ್ಲಿ ಗಣಿಗಾರಿಕೆ ಮಾಡೋದಕ್ಕೆ ಮಾತ್ರ ಅವಕಾಶ ನೀಡೋದಿಲ್ಲ’ ಎನ್ನುತ್ತಾರೆ ಗ್ರಾಮದ ಮುಖಂಡ ನಂಜುಂಡೇಗೌಡ.
ಸ್ಥಳೀಯ ಆಡಳಿತಕ್ಕೆ ಗೊತ್ತೇ ಇಲ್ಲ! ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆರ್.ಕೆ. ಸ್ಟೋನ್ ಕ್ರಶರ್ಸ್ ಕಂಪನಿಗೆ ಈ ಬೆಟ್ಟದ ಮೇಲೆ ಇಪ್ಪತ್ತು ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿತ್ತು. ಹೀಗಾಗಿ ಬೆಟ್ಟದ ಮೇಲಿನವರಿಗೂ ರಸ್ತೆ ನಿರ್ಮಾಣ ಮಾಡಲಾಗಿದೆ. ಇದನ್ನು ಕಂಡ ಗ್ರಾಮಸ್ಥರು ವಿಚಾರಿಸಿದಾಗ ಇಲ್ಲಿ ಕೃತಕ ಮರಳು ಘಟಕ ನಿರ್ಮಾಣ ವಿಚಾರ ಬಯಲಾಗಿದೆ. ಇನ್ನು ಸ್ಥಳೀಯ ಸಂಸ್ಥೆಗಳ ಅನುಮತಿ, ಒಪ್ಪಿಗೆ ಪಡೆಯದೆ ಗಣಿಗಾರಿಕೆಗೆ ಮುಂದಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇಂಥಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ಥಳೀಯ ಜನರ, ಜೀವನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಇದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸರ್ಕಾರ ಮಾಡಿರುವ ಆದೇಶ ಜನ ವಿರೋಧಿ ಎಂಬುದು ಗ್ರಾಮಸ್ಥರ ಮಾತು.
ಕೋರ್ಟ್ ನೀಡಿದ ಆದೇಶವೇನು? ಗಣಿಗಾರಿಕೆಯಿಂದ ಕೋಲಾರದ ಬೆಟ್ಟಗಳ ನಾಶವಾಗುತ್ತಿರುವದಕ್ಕೆ ಆಗಸ್ಟ್ 31ರಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದ್ದು, ದೊಡ್ಡ ದೊಡ್ಡ ಅಯ್ಯೂರುನಲ್ಲಿನ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ತಡೆ ಒಡ್ಡಿದೆ. ಕೋಲಾರದ ಗುಡ್ಡಗಳು ವಿಶಿಷ್ಟ ಸೌಂದರ್ಯ ಹೊಂದಿವೆ. ಇಂತಹ ಗುಡ್ಡಗಳನ್ನು ಬೇರೆಲ್ಲೂ ಕಂಡಿಲ್ಲ. ಗುಡ್ಡ ನಾಶಪಡಿಸಿದರೆ ಮುಂದಿನ ಜನಾಂಗಕ್ಕೆ ಉಳಿಸುವುದೇನು? ಅರಣ್ಯ, ಗುಡ್ಡಗಳು ಪ್ರಾಣಿಗಳು ಉಳಿಯುವುದು ಬೇಡವೇ? ಎಂದು ಹೈಕೋರ್ಟ್ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈಕುರಿತು ರಾಜ್ಯ ಸರ್ಕಾರದ ಪ್ರತಿಕ್ರಿಯಿಸಲು ಹೈಕೋರ್ಟ್ ತಿಳಿಸಿದೆ.
ಗಣಿಗಾರಿಕೆಯನ್ನು ನಿಲ್ಲಿಸುವಂತೆ ದೊಡ್ಡ ಅಯ್ಯೂರು ಸುತ್ತಮುತ್ತಲಿನ ಗ್ರಾಮಸ್ಥರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗಣಿಗಾರಿಕೆ ನಡೆಯುತ್ತಿರುವ ಗುಡ್ಡದಲ್ಲಿ ಆಂಜನೇಯ ಸ್ವಾಮಿ, ಈರಣ್ಣ ಸ್ವಾಮಿ, ಪಟಾಲಮ್ಮ ದೇವಿ, ಗಂಗಮ್ಮದೇವಿ ದೇಗುಲವಿದೆ. ಅಲ್ಲಿ ಗಣಿಗಾರಿಕೆ ನಡೆಸುವದರಿಂದ ಕಾಡು ಹಾಗೂ ನೀರಿನ ಮೂಲ ನಾಶವಾಗುತ್ತದೆ ಎಂದು ಗ್ರಾಮಸ್ಥರ ಪರವಾಗಿ ವಕೀಲ ಶಿವಪ್ರಕಾಶ್ ವಾದ ಮಂಡಿಸಿದ್ದರು.
ಜನರ ಪರ ಧ್ವನಿ ಎತ್ತಿದ ಜನ ಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಗ್ರಾಮಸ್ಥರ ಪರವಾಗಿ ನಿಂತಿರುವ ಜನ ಪ್ರತಿನಿಧಿಗಳು ನೈಸರ್ಗಿಕ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ನಾವು ಜನರ ಪರವಾಗಿ ನಿಲ್ಲುತ್ತೇವೆ ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆ ಮಾಡಲು ಅವಕಾಶ ನೀಡೋದಿಲ್ಲ ಎಂದು ಸಂಸದ ಮುನಿಸ್ವಾಮಿ ಹಾಗೂ ಶಾಸಕ ಕೆ.ಶ್ರೀನಿವಾಸಗೌಡ ಬೆಟ್ಟಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳುವ ಜೊತೆಗೆ ನಿಮ್ಮ ಜೊತೆಗೆ ನಿಲ್ಲುವ ಭರವಸೆ ನೀಡಿದ್ದಾರೆ.
ಒಟ್ಟಾರೆ ಸರ್ಕಾರಗಳು ಸ್ಥಳೀಯ ಜನರ ಭಾವನೆಗಳಿಗೆ ಬೆಲೆ ನೀಡದೇ, ಸ್ಥಳೀಯ ಸಂಸ್ಥೆಗಳ ಒಪ್ಪಿಗೆ ಪಡೆಯದೇ ಹೀಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಜನರ ಪುರಾತನ ನಂಬಿಕೆಯ ಕೇಂದ್ರಗಳನ್ನು ಹಾಳು ಮಾಡುವ ಕೆಲಸಕ್ಕೆ ಮುಂದಾಗಿರೋದು ಗ್ರಾಮಸ್ಥರ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈಗ ಹೈಕೋರ್ಟ್ ಕೂಡಾ ಗ್ರಾಮದ ಜನರ ಧಾರ್ಮಿಕ ಹಾಗೂ ಭಾವನಾತ್ಮಕ ಸಂಬಂಧಕ್ಕೆ ಬೆಲೆ ಕೊಟ್ಟು ಕಲ್ಲು ಗಣಿಗಾರಿಕೆ ತಡೆಯಾಜ್ಞೆ ನೀಡಿರುವುದು ಗ್ರಾಮಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ.
ವಿಶೇಷ ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ:
ಕೋಲಾರದ ದೊಡ್ಡ ಅಯ್ಯೂರು ಗುಡ್ಡಗಳಲ್ಲಿ ಗಣಿಗಾರಿಕೆ ನಡೆಸಲು ಹೈಕೋರ್ಟ್ ತಡೆ; ಗ್ರಾಮಸ್ಥರಿಗೆ ಜಯ
ನಂದಿಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ: ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು
(Kolar villages win in the dodda ayyur hill mining case in Karnataka High Court)
Published On - 9:34 am, Fri, 3 September 21