ವಕ್ಫ್ ಭೂಮಿ ವಿವಾದ: ಕರ್ನಾಟಕಕ್ಕೆ ಹೆಚ್ಚಿನ ಮಾಹಿತಿ ಕೇಳಿದ ಜಿಪಿಸಿ
ವಕ್ಫ್ ಬೋರ್ಡ್ ಆಸ್ತಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ (ಜಿಪಿಸಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಕರ್ನಾಟಕ ಒದಗಿಸಿದ ಮಾಹಿತಿ ಅಪೂರ್ಣವಾಗಿದೆ ಎಂದು ಜಿಪಿಸಿ ಅಭಿಪ್ರಾಯಪಟ್ಟಿದೆ.15 ದಿನಗಳೊಳಗೆ ವಿವರವಾದ ಮಾಹಿತಿ ನೀಡುವಂತೆ ಕರ್ನಾಟಕಕ್ಕೆ ತಾಕೀತು ಮಾಡಿದೆ.ವಕ್ಫ್ ಆಸ್ತಿಗಳ ಸಂಖ್ಯೆ ಮತ್ತು ಅವುಗಳ ಸ್ವಾಧೀನದ ವಿವರಗಳನ್ನು ಸಮರ್ಪಕವಾಗಿ ಸಲ್ಲಿಸಲು ಸೂಚಿಸಲಾಗಿದೆ.

ನವದೆಹಲಿ/ಬೆಂಗಳೂರು, ಡಿಸೆಂಬರ್ 27: ವಕ್ಫ್ ಬೋರ್ಡ್ (Waqf Board) ಆಸ್ತಿ ವಿವಾದ ಕರ್ನಾಟಕದಲ್ಲಿ ಸಾಕಷ್ಟು ಸದ್ದು ಮಾಡಿದೆ. ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಗೆ (GPC) ಕರ್ನಾಟಕದ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದರು. ಕರ್ನಾಟಕ ನೀಡಿದ ಮಾಹಿತಿಗೆ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, 15 ದಿನಗಳಲ್ಲಿ ವಿವರವಾದ ಉತ್ತರ ನೀಡುವಂತೆ ತಾಕೀತು ಮಾಡಿತು.
ವಕ್ಫ್ ಮಂಡಳಿಗಳು ಹಕ್ಕು ಸಾಧಿಸಿರುವ ಆಸ್ತಿಗಳು ಮತ್ತು ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳ ಅಧಿಕೃತ ಸ್ವಾಧೀನದಲ್ಲಿರುವ ವಕ್ಫ್ ಆಸ್ತಿಗಳ ವಿವರ ಸಲ್ಲಿಸುವಂತೆ ವಿವಿಧ ರಾಜ್ಯಗಳಿಗೆ ಜೆಪಿಸಿ ಸೂಚಿಸಿತ್ತು. ಜಿಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ನೇತೃತ್ವದ ಸಮಿತಿಯು ಕರ್ನಾಟಕದ ಅಭಿಪ್ರಾಯವನ್ನು ಆಲಿಸಿತು. ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲಾನಿ ನೇತೃತ್ವದ ಅಧಿಕಾರಿಗಳ ತಂಡವು ಮಾಹಿತಿ ನೀಡಿದರು.
ಆದರೆ, ಕರ್ನಾಟಕದ ನಿಯೋಗ ನೀಡಿದ ಮಾಹಿತಿ ತೃಪ್ತಿಕರವಾಗಿಲ್ಲ. ಪ್ರತಿಕ್ರಿಯೆಯನ್ನು ಒದಗಿಸಲು 15 ದಿನಗಳ ಕಾಲಾವಕಾಶ ನೀಡಿದ್ದೇವೆ ಮತ್ತು ಅಗತ್ಯವಿದ್ದರೆ ಮತ್ತೆ ಕರೆಯುತ್ತೇವೆ ಎಂದು ಜಗದಂಬಿಕಾ ಪಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವಕ್ಫ್ ವಿವಾದ: ಉಳಿಮೆ ಮಾಡುತ್ತಿದ್ದ ರೈತರ ವಿರುದ್ಧ ಕೇಸ್ ದಾಖಲು
ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ರಾಜ್ಯದಲ್ಲಿನ ವಕ್ಫ್ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದರು. 2004 ರಿಂದ ಇಲ್ಲಿಯವರೆಗೆ 9800 ಆಸ್ತಿ ವಕ್ಫ್ ಅಂತ ನಮೂದು ಆಗಿದೆ. 9,800 ವಕ್ಫ್ ಆಸ್ತಿಯಲ್ಲಿ 11,204 ರೈತರ ಭೂಮಿ ವಕ್ಫ್ ಅಂತ ಆಗಿದೆ. 11,204 ರಲ್ಲಿ 9,121 ಮುಸ್ಲಿಂ ರೈತರ ಭೂಮಿ ವಕ್ಫ್ ಅಂತ ನಮೂದು ಆಗಿದೆ. 2,080 ಹಿಂದೂ ಭೂಮಿ ವಕ್ಫ್ ಅಂತ ಆಗಿದೆ. ಶೇ85 ರಷ್ಟು ಮುಸ್ಲಿಂ ರೈತರ ಭೂಮಿ ವಕ್ಫ್ ಅಂತ ಆಗಿದೆ. ಶೇ15 ರಷ್ಟು ಮಾತ್ರ ಹಿಂದೂ ರೈತರ ಭೂಮಿ ವಕ್ಫ್ ಅಂತ ನಮೂದು ಆಗಿದೆ ಎಂದು ತಿಳಿಸಿದ್ದರು.
ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಆಸ್ತಿ ವಿವಾದ ಸೃಷ್ಟಿಯಾಗಿತ್ತು. ವಿಜಯಪುರ, ಬೀದರ್ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿನ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಅಂತ ನಮೂದು ಆಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ರೈತರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು. ಇನ್ನು, ರಾಜ್ಯ ಬಿಜೆಪಿ, ಕಾಂಗ್ರೆಸ್ ಸರ್ಕಾರ ರೈತರ ಭೂಮಿಯನ್ನು ನುಂಗಲು ಹೊರಟಿದೆ ಎಂದು ಆರೋಪ ಮಾಡಿತ್ತು. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್ ಬೋರ್ಡ್ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




