ಕೋಲಾರ: ಜಿಲ್ಲೆಯಲ್ಲಿ ರೈತನೋರ್ವ ಸರ್ಕಾರಿ ಅಧಿಕಾರಿಗಳ ವಿರುದ್ಧ ಏಕಾಂಗಿಯಾಗಿ ಹೋರಾಟಕ್ಕಿಳಿದಿದ್ದಾನೆ. ತನ್ನ ಕುಟುಂಬ ಜೀವನ ಸಾಗಿಸಲು ಇದ್ದ ಒಂದು ಆಧಾರವನ್ನು ಕಸಿದುಕೊಂಡು ಕಣ್ಣೀರು ಹಾಕಿಸುತ್ತಿದ್ದೀರಾ ಅಂತಾ ಸಿಡಿದೆದ್ದಿರುವ ರೈತ, ಸರ್ಕಾರಿ ಕಚೇರಿ ಎದುರು ಠಿಕಾಣಿ ಹೂಡಿದ್ದಾನೆ. ಚೆನ್ನೈ ಎಕ್ಸ್‌ಪ್ರೆಸ್ ಹೈವೆ.. ಕೋಲಾರ ತಾಲೂಕು, ಬಂಗಾರಪೇಟೆ ತಾಲೂಕು, ಕೆಜಿಎಫ್ ತಾಲೂಕು, ಮಾಲೂರು ತಾಲೂಕುಗಳಲ್ಲಿ ಹಾದು ಹೋಗ್ತಿರುವ ಈ ಹೆದ್ದಾರಿ ಅದೆಷ್ಟೋ ರೈತರ ಹೊಲ ಗದ್ದೆ, ಮನೆ ಮಠಗಳನ್ನ ಸ್ವಾಹ ಮಾಡಿದೆ. ಆದ್ರೆ ಹೆದ್ದಾರಿ ಪ್ರಾಧಿಕಾರ ಮಾತ್ರ ರೈತರಿಗೆ ಪರಿಹಾರ ನೀಡದೆ ಸತಾಯಿಸುತ್ತಿದೆ. ಹೀಗಾಗಿ ಏಕಾಂಗಿಯಾಗಿ ರೈತ ಮುನಿಯಪ್ಪ ಹೋರಾಟಕ್ಕಿಳಿದಿದ್ದಾರೆ.
ಭೂಸ್ವಾಧಿನ ಪ್ರಕ್ರಿಯೆ ನಡೆಸಿದ ಹೆದ್ದಾರಿ ಪ್ರಾಧಿಕಾರ ಇಲ್ಲಿನ ಬಹುತೇಕ ರೈತರಿಗೆ ಪಕ್ಷಪಾತ ಮಾಡಿದೆ. ಒದೊಂದು ತಾಲೂಕಿನಲ್ಲಿ ಭೂಮಿಗೆ ಒಂದೊಂದು ರೀತಿ ಬೆಲೆ ನಿಗದಿ ಮಾಡಿದೆ. ಅಲ್ಲದೆ ಭೂಸ್ವಾದೀನ ನಿಯಮ ಪಾಲನೆ ಮಾಡದೆ, ರೈತರನ್ನು ಬೀದಿಗೆ ತಳ್ಳಿದೆಯಂತೆ. ಅದರಲ್ಲೂ ಮಾಲೂರು ತಾಲೂಕಿನ ಲಕ್ಷೀಸಾಗರ ಗ್ರಾಮದ ಮುನಿಯಪ್ಪ ಎಂಬಾತನ ಜಮೀನಿನಲ್ಲಿ ಹೆದ್ದಾರಿ ಹೋಗುತ್ತಿದೆ. ಆದರೆ ಅಲ್ಲಿ ಇದ್ದ ಮರ, ಗಿಡ, ಮನೆಯನ್ನು ನೆಲಸಮ ಮಾಡಿದೆ. ಆದ್ರೆ ಅವುಗಳಿಗೆ ನೀಡಬೇಕಾದ ಲಕ್ಷಾಂತರ ರೂಪಾಯಿ ಪರಿಹಾರ ನೀಡದೆ ವಂಚಿಸಿದೆ. ಇದರಿಂದ ಸಿಡಿದೆದ್ದಿರುವ ರೈತ ಮುನಿಯಪ್ಪ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಏಕಾಂಗಿ ಹೋರಾಟಕ್ಕೆ ನಿಂತಿದ್ದಾನೆ. ಹೈವೆ ಭೂಸ್ವಾದೀನಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕೈಗೊಂಡಿದ್ದಾನೆ.
ಹೆದ್ದಾರಿ ಪ್ರಾಧಿಕಾರ ಹತ್ತಾರು ಗ್ರಾಮಗಳಲ್ಲಿ ರೈತರ ಜಮೀನುಗಳನ್ನು ವಶಕ್ಕೆ ಪಡೆದು ಮಾರುಕಟ್ಟೆ ಬೆಲೆ ನೀಡಿಲ್ಲ, ಜೊತೆಗೆ ಭೂ ಸ್ವಾಧೀನ ನಿಯಮದಂತೆ ಅಲ್ಲಿನ ಭೂಮಿಯ ಬೆಲೆಯ ಎರಡು ಪಟ್ಟು ಹೆಚ್ಚಿಗೆ ಹಣ ಪರಿಹಾರ ನೀಡಬೇಕು ಎನ್ನುವ ಯಾವುದೇ ನಿಯಮ ಪಾಲಿಸದೆ ರೈತರ ನೂರಾರು ಎಕರೆ ಭೂಮಿಯನ್ನು ಸ್ವಾದೀನಕ್ಕೆ ಪಡೆದು ವಂಚನೆ ಮಾಡಿದ್ದಾರೆ ಅಂತಾ ರೈತರು ಆರೋಪಿಸಿದ್ದಾರೆ. ಒಟ್ಟಾರೆ ಹೆದ್ದಾರಿ ಭೂ ಸ್ವಾಧೀನಾಧಿಕಾರಿಗಳ ದ್ವಂದ್ವ ನೀತಿ ಹಾಗೂ ಎಡವಟ್ಟಿನಿಂದ ಬಡ ರೈತರು ಇತ್ತ ಭೂಮಿಯೂ ಇಲ್ಲದೆ, ಅತ್ತ ಪರಿಹಾರವೂ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: Zodiac Signs: ನಿಮ್ಮ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುವ ಗಿಡ ಯಾವುದು? ಇಲ್ಲಿದೆ ಮಾಹಿತಿ