ಕೋಲಾರ, ಮೇ.31: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹೊಗಳಗೆರೆಯ ತೋಟಗಾರಿಕಾ ಇಲಾಖೆಯ ಮಾವು ಸಂಶೋಧನಾ ಕೇಂದ್ರದ ಮಾವಿನ ತೋಟದಲ್ಲಿ ಕೆಂಪಾದ ರಸಭರಿತವಾದ ಮಾವಿನ ಹಣ್ಣುಗಳು ಬಾಯಲ್ಲಿ ನೀರು ತರಿಸುವಂತಿವೆ. ವಿಶ್ವ ಪ್ರಸಿದ್ದ ಮಾವಿನ ನಗರಿ ಎಂದು ಹೇಳಲಾಗುವ ಶ್ರೀನಿವಾಸಪುರದಲ್ಲಿ (Srinivaspur) ಹಲವು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಅದರ ಜೊತೆಗೆ ಇಲ್ಲಿ ಹೊಸ ಹೊಸ ತಳಿಗಳನ್ನು ಸಂಶೋಧನೆ ಕೂಡಾ ನಡೆಸಲಾಗುತ್ತಿದೆ. ಸದ್ಯ ಶ್ರೀನಿವಾಸಪುರದ ಹೊಗಳಗೆರೆಯಲ್ಲಿ ಇಂಡೋ ಇಸ್ರೇಲ್ ಉತ್ಕೃಷ್ಟ ಕೇಂದ್ರ ನಿರ್ಮಾಣ ಮಾಡಲಾಗಿದೆ. ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಸುಮಾರು 226 ಎಕರೆ ಪ್ರದೇಶದಲ್ಲಿ ಮಾವು ಸಪೋಟಾ, ಹಲಸು, ನಿಂಬೆ, ಸೇರಿದಂತೆ ತೋಟಗಾರಿಕಾ ಹೊಸ ಹೊಸ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಇದೇ ಪ್ರದೇಶದಲ್ಲಿ ಇಂಡೋ ಇಸ್ರೇಲ್ ಮಾವು ಉತ್ಕೃಷ್ಟ ಕೇಂದ್ರವನ್ನು 40 ಎಕರೆ ಪ್ರದೇಶದಲ್ಲಿ ಇಂಡೋ ಇಸ್ರೇಸ್ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯ ಇಲ್ಲಿ ವಿದೇಶಿ ತಳಿಗಳನ್ನು ಪರಿಚಯ ಮಾಡಲಾಗಿದೆ. ಇಲ್ಲಿ ಟಾಮ್ಯಾಟಕಿಸ್, ಕೆಂಟ್, ಲಿಲ್ಲಿ, ಮಾಯಾ, ತಳಿಗಳನ್ನು ಹಾಕಲಾಗಿದ್ದು ಪ್ರಯೋಗ ಯಶಸ್ವಿಯಾಗಿದೆ. ಸದ್ಯದಲ್ಲೇ ಇಸ್ರೇಲ್ ಮತ್ತು ಅಮೇರಿಕಾ ತಳಿಗಳನ್ನು ಇಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ ಎಂದು ಮಾವು ಉತ್ಕೃಷ್ಟ ಕೇಂದ್ರದ ಉಪನಿರ್ದೇಶಕಿ ಲಾವಣ್ಯ ಅವರು ತಿಳಿಸಿದ್ದಾರೆ.
ಇನ್ನು ಅಧಿಕ ಮತ್ತು ಅತ್ಯಧಿಕ ಸಾಂದ್ರೆಯ ಬೇಸಾಯದ ಜೊತೆಗೆ ವಯಸ್ಸಾದ ಮಾವಿನ ಮರಗಳಿಗೆ ಮತ್ತೆ ಪುನರುಜ್ಜೀವನ ಕೊಡುವಂತ ಸಂಶೋಧನೆ ಕೂಡಾ ಇಲ್ಲಿ ಮಾಡಲಾಗುತ್ತಿದೆ. ಜೊತೆಗೆ ಸದ್ಯ ಸಂಶೋಧನೆ ಬಹುತೇಕ ಯಶಸ್ವಿಯಾಗಿರುವ ಅಮೇರಿಕಾ ಹಾಗೂ ಇಸ್ರೇಲ್ ತಳಿಗಳು ನಮ್ಮ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿದೆ. ಇದು ಕೂಡಾ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯ ತಳಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದು ತಜ್ಞರ ಅಭಿಪ್ರಾಯ. ವಿದೇಶ ತಳಿಗಳು ಉತ್ತಮ ರುಚಿ, ತೂಕ, ಹಾಗೂ ಹಣ್ಣುಗಳು ಒಳಗೆ ಮತ್ತು ಹೊರಗೆ ಆಕರ್ಷಕ ಬಣ್ಣದ ಹೊಂದಿದೆ. ಇದೆಲ್ಲದಕ್ಕೂ ಮಿಗಿಲಾಗಿ ಕಡಿಮೆ ಸಕ್ಕರೆ ಇರುವ ಮಾವಿನ ಹಣ್ಣುಗಳಾಗಿದ್ದು ಇದು ಎಲ್ಲಾ ವಯೋಮಾನದವರು ಇಷ್ಟ ಪಡುವಂತಹ ಹಣ್ಣುಗಳಾಗಿವೆ.
ಇದನ್ನೂ ಓದಿ: Karnataka Rains: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ, ಜೂನ್ 2ರಿಂದ ಮಳೆ ಜೋರು
ಈ ಹಣ್ಣುಗಳು ಹಣ್ಣಾದ ಮೇಲೆ ಕೆಡದಂತೆ ಸುಮಾರು ಹದಿನೈದು ದಿನಗಳ ಕಾಲ ಸಂರಕ್ಷಿಸಬಹುದಾಗಿದೆ. ಹಾಗಾಗಿ ವಿದೇಶಗಳಿಗೆ ರಪ್ತು ಮಾಡಲು ಕೂಡಾ ಸೂಕ್ತವಾದಂತ ಮಾವಿನ ಹಣ್ಣಿನ ತಳಿಗಳು ಎನ್ನಲಾಗಿದೆ. ಹಾಗಾಗಿ ಬಹುತೇಕ ಯಶಸ್ವಿಯಾಗಿರುವ ಹೊಸ ತಳಿಗಳು ಇನ್ನು ಮುಂದಿನ ದಿನಗಳಲ್ಲಿ ರೈತರ ತೋಟಗಳಲ್ಲೂ ಕೂಡಾ ಕಂಗೊಳಿಸಲಿವೆ. ಈ ಮೂಲಕ ಮಾವಿನ ನಗರಿಯಿಂದ ದೂರದ ದೇಶಗಳಿಗೂ ರಪ್ತು ಮಾಡುವಂತ ಮಾವಿನ ತಳಿಗಳು ಅಭಿವೃದ್ದಿಯಾಗುತ್ತಿರುವುದ ಸಂತೋಷದ ವಿಷಯ ಅನ್ನೋದು ರೈತರು ಹಾಗೂ ತಜ್ಞರ ಮಾತು.
ಒಟ್ಟಾರೆ ನಮ್ಮ ತಾತ ಹಾಕಿದ ಆಲದ ಮರದ ಪಾದವೇಗತಿ ಎಂದು ಸುಮ್ಮನಿರದೆ ಮಾವು ಉತ್ಪಾದನೆಯಲ್ಲೂ ಹೊಸ ಹೊಸ ಪ್ರಯೋಗ ಸಂಶೋಧನೆಗಳು ನಡೆಯುತ್ತಿದ್ದು ಈ ಮೂಲಕ ರೈತರ ಆದಾಯ ಹೆಚ್ಚಿಸುವ ಜೊತೆಗೆ ಹೊಸ ತಳಿಗಳ ಪರಿಚಯಿಸುವ ಕೆಲಸ ಆಗುತ್ತಿದೆ. ಇದು ಮಾವು ಉತ್ಪಾದನೆಯಲ್ಲಿ ಹೊಸ ಕ್ರಾಂತಿ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ