ಕೋಲಾರ, ಡಿ.17: ಜಿಲ್ಲೆಯ (Kolar) ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಿದ ಪ್ರಕರಣ ಸಂಬಂಧ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಬಗ್ಗೆ ಟಿವಿ9 ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರು ಕಳೆದ ಹಲವು ದಿನಗಳಿಂದ ಮಕ್ಕಳಿಗೆ ಹೊಡೆಯುವುದು, ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ನೀಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಇದರ ಬೆನ್ನಲ್ಲೇ ಮಕ್ಕಳಿಂದ ಶೌಚಾಲಯದ ಹೊಂಡ ಸ್ವಚ್ಛಗೊಳಿಸಿದ ವಿಡಿಯೋ ಟಿವಿ9ಗೆ ಲಭ್ಯವಾಗಿತ್ತು. ಅದರಂತೆ ವರದಿ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ವಸತಿ ಶಾಲೆಗೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಪರಿಶೀಲನೆ ನಡೆಸಿದ್ದರು. ಬಳಿಕ ಮಾತನಾಡಿದ್ದ ಅವರು, ಶೌಚಾಲಯ ಕ್ಲೀನ್ ಮಾಡಿಸಿದವರನ್ನು ಅಮಾನತು ಮಾಡುತ್ತೇವೆ. ಶಿಕ್ಷಕ ಅಭಿಷೇಕ್ನನ್ನು ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಕೋಲಾರ ಮೊರಾರ್ಜಿ ವಸತಿ ಶಾಲೆಯಲ್ಲಿ ಇದೆಂತ ಕೃತ್ಯ; ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ
ಮಕ್ಕಳನ್ನ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿರುವ ಬಗ್ಗೆ ಮಾಹಿತಿ ಬಂದಿದೆ. ಪ್ರಾಂಶುಪಾಲರು, ವಾರ್ಡನ್, ಗ್ರೂಪ್ ಡಿ ಸೇರಿ ಎಲ್ಲರನ್ನೂ ಅಮಾನತು ಮಾಡಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾಗಿ ಇಲಾಖೆ ಸಚಿವ ಹೆಚ್ಸಿ ಮಹಾದೇವಪ್ಪ ಹೇಳಿದ್ದರು. ಅಲ್ಲದೆ, ಇಂತಹ ಕೆಲಸ ರಾಜ್ಯದಲ್ಲಿ ಮಾಡಿಸದಂತೆ ಸುತ್ತೋಲೆ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದ್ದರು.
ಸಚಿವರ ಸೂಚನೆ ಮೇರೆಗೆ ವಸತಿ ಶಾಲೆಯ ಪ್ರಾಂಶುಪಾಲೆ ಭಾರತಮ್ಮ, ಕ್ರಾಫ್ಟ್ ಶಿಕ್ಷಕ ಮುನಿಯಪ್ಪ, ಶಿಕ್ಷಕ ಅಭಿಷೇಕ್, ವಸತಿ ಶಾಲೆಯ ವಾರ್ಡನ್ ಮಂಜುನಾಥ್ ಎಂಬವರನ್ನು ಅಮಾನತು ಮಾಡಿ ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಆದೇಶ ಹೊರಡಿಸಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಆರೋಪ ವಿಚಾರವಾಗಿ ಮಾತನಾಡಿದ ಪೋಷಕರೊಬ್ಬರು, ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ಪೋಟೋ ತಗೆಯಲಾಗಿದೆ. ಇಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರಾ ಅಥವಾ ಬೇರೆ ಏನಾದರು ಮಾಡುತ್ತಾರಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ ವಿಚಾರವಾಗಿ ಆಕ್ರೋಶ ಹೊರಹಾಕಿರುವ ಪೋಷಕರು, ಹಲವು ದಿನಗಳಿಂದ ಪೊಷಕರ ಸಭೆ ಕರೆದಿಲ್ಲ. ಮಕ್ಕಳಿಗೆ ಚಿತ್ರ ಹಿಂಸೆ ನೀಡಿದ್ದಾರೆ. ಮಕ್ಕಳಿಗೆ ಹೆದರಿಸಿ ಪೊಷಕರಿಗೆ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ. ವಸತಿ ಶಾಲೆಯ ಎಲ್ಲ ಸಿಬ್ಬಂದಿಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಾಲೆಯಲ್ಲಿ ಗುಂಪುಗಾರಿಕೆಯಿಂದಲೇ ಇಷ್ಟೆಲ್ಲ ಆಗಲು ಕಾರಣ ಎಂದು ಪ್ರಾಂಶುಪಾಲೆ ಭಾರತಮ್ಮ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಶಿಕ್ಷಕರು ಪ್ರಮೋಷನ್ಗಾಗಿ, ವಾರ್ಡನ್ ಪ್ರಮೋಷನ್ಗಾಗಿ ಈರೀತಿಯ ಕೃತ್ಯ ಎಸಗಿದ್ದಾರೆ. ಕೆಲವರು ಇಲ್ಲಿಗೆ ಬಂದ ಮೇಲೆ ಇಷ್ಟೆಲ್ಲಾ ನಡೆಯುತ್ತಿರುವುದು. ಮಲದ ಗುಂಡಿಗೆ ಇಳಿಸಿದ್ದು, ಮಕ್ಕಳಿಗೆ ಕಿರುಕುಳ ಕೊಟ್ಟಿದ್ದು ನಿಜ. ಆದರೆ ಆ ಶಿಕ್ಷಕರಿಗೆ ನೋಟೀಸ್ ಕೊಟ್ಟಿದ್ದೇನೆ ಎಂದರು.
ಟಿವಿ9ನ ‘ಹೇಗಿದೆ ನಮ್ ಶಾಲೆ’ ಎಂಬ ಅಭಿಯಾನದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವಿಚಾರವನ್ನು ಪ್ರಕಟಿಸಲಾಗಿತ್ತು. ಇದನ್ನು ಗಮನಿಸಿದ ಜಡ್ಜ್ ನ್ಯಾ. ಸುನಿಲ್ ಕುಮಾರ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದರು. ಮಕ್ಕಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ನ್ಯಾ.ಸುನಿಲ್ ಕುಮಾರ್, ವಸತಿ ಶಾಲೆಯ ಅಡುಗೆ ಕೋಣೆ, ಮಕ್ಕಳ ವಾಸ್ತವ್ಯ ಕೊಠಡಿ ಸೇರಿದಂತೆ ಎಲ್ಲೆಡೆ ಪರಿಶೀಲಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Sun, 17 December 23