ಕೋಲಾರದಲ್ಲಿ ಮಳೆ ಆರ್ಭಟ: ನೀರಲ್ಲಿ ತೇಲುತ್ತಿದೆ ಸರ್ಕಾರಿ ಶಾಲೆ, ಆತಂಕದಲ್ಲೇ ಪಾಠ ಕೇಳುವ ಸ್ಥಿತಿ

| Updated By: ಆಯೇಷಾ ಬಾನು

Updated on: Aug 02, 2022 | 4:43 PM

ಕಳೆದ‌ ಎರಡು ದಿನಗಳಿಂದ‌ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಇಂಥಾದೊಂದು ದುಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನೀರು ತುಂಬಿ ಶಾಲೆಯೊಳಗೆ ಹರಿಯುತ್ತಿದೆ.

ಕೋಲಾರದಲ್ಲಿ ಮಳೆ ಆರ್ಭಟ: ನೀರಲ್ಲಿ ತೇಲುತ್ತಿದೆ ಸರ್ಕಾರಿ ಶಾಲೆ, ಆತಂಕದಲ್ಲೇ ಪಾಠ ಕೇಳುವ ಸ್ಥಿತಿ
ಸರ್ಕಾರಿ ಶಾಲೆಯ ಕೊಠಡಿಯೊಳಗೆ ನುಗ್ಗಿದ ನೀರು
Follow us on

ಕೋಲಾರ : ಕೋಲಾರ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯ(Kolar Rain) ಪರಿಣಾಮ ಶಾಲೆಯೊಳಗೆ ನೀರು ತುಂಬಿದೆ. ಮಕ್ಕಳು ನೀರಿನಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ ಎದುರಾಗಿದೆ. ಇಂಥಾದೊಂದು ದುಸ್ಥಿತಿ ಎದುರಾಗಿರೋದು ಕೋಲಾರ ನಗರದ ಕುರುಬರಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ಕಳೆದ‌ ಎರಡು ದಿನಗಳಿಂದ‌ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಇಂಥಾದೊಂದು ದುಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನೀರು ತುಂಬಿ ಶಾಲೆಯೊಳಗೆ ಹರಿಯುತ್ತಿದೆ. ಈ ಪರಿಣಾಮ ಶಾಲೆಯಲ್ಲಿದ್ದ ಪಠ್ಯಪುಸ್ತಕಗಳು ಎಲ್ಲವೂ ನೀರಿನಲ್ಲಿ ನೆನೆದು ಹೋಗಿದೆ. ಅಲ್ಲದೆ ಶಾಲೆಯ ಕಟ್ಟಡ ಹಳೆಯದಾಗಿರುವುದರಿಂದ ಶಾಲೆಯ ಮೇಲ್ಚಾವಣಿ ಕೂಡಾ ಕುಸಿಯುತ್ತಿದೆ. ಹಾಗಾಗಿ ಮಕ್ಕಳು ಆತಂಕದಲ್ಲಿ ಪಾಠ ಕೇಳುವ ಸ್ಥಿತಿ ಇದೆ.

ಇನ್ನು ಶಾಲೆಯಲ್ಲಿ ಒಟ್ಟು 67 ಜನ ಮಕ್ಕಳಿದ್ದು ಆರು ಕೊಠಡಿಗಳಲ್ಲಿ ಸದ್ಯ ಕೇವಲ ಎರಡು ಕೊಠಡಿಗಳು ಮಾತ್ರ ಚೆನ್ನಾಗಿವೆ. ಉಳಿದ ಕೊಠಡಿಗಳೆಲ್ಲಾ ಮಳೆಯ ಹೊಡೆತಕ್ಕೆ ಕುಸಿಯುವ ಸ್ಥಿತಿಗೆ ತಲುಪಿದೆ. ಸದ್ಯ ಶಾಲೆಯ ಮಕ್ಕಳು ಆತಂಕದಲ್ಲಿ ಪಾಠ ಕೇಳುವ ಸ್ಥಿತಿ ತಲುಪಿದ್ದು ಕೂಡಲೇ ಸಂಬಂಧಪಟ್ಟವರು ಶಾಲೆಯ ಕಾಯಕಲ್ಪ ಒದಗಿಸಬೇಕು ಎಂದು ಸ್ಥಳೀಯರು, ಪೋಷಕರು ಆಗ್ರಹಿಸಿದ್ದಾರೆ. ಸರ್ಕಾರಿ ಶಾಲೆಯನ್ನು ಉಳಿಸಬೇಕು ಎಂದು ಅಭಿಯಾನಗಳನ್ನು ಮಾಡುವ ಸರ್ಕಾರ ಒಮ್ಮೆ ಇತ್ತ ನೋಡಬೇಕು. ಸರ್ಕಾರಿ ಶಾಲೆಯ ಸ್ಥಿತಿ ಮುಳುಗಿದ ದೋಣಿಯಂತಾದರೂ ಯಾವ ಕ್ರಮಕ್ಕೂ ಮುಂದೆ ಬಂದಿಲ್ಲ. ಕಳೆದ ಕೆಲ ದಿನಗಳಿಂದ ಮಕ್ಕಳು ನೀರಿನಲ್ಲೇ ಕುಳಿತು ಪಾಠ ಕೇಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

Published On - 4:43 pm, Tue, 2 August 22