ಕೋಲಾರ: ಮಾಸ್ತಿ ಗ್ರಾಮದಲ್ಲಿ ಏಕಾಏಕಿ ನೂರಾರು ವಲಸಿಗರು! ಬಾಂಗ್ಲಾದಿಂದ ಬಂದವರೆಂಬ ಶಂಕೆ

ಕೋಲಾರದ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೂರಾರು ಸಂಖ್ಯೆಯಲ್ಲಿ ಇರುವ ಬಗ್ಗೆ ಗಂಭೀರ ಅನುಮಾನ ವ್ಯಕ್ತವಾಗಿದೆ. ಅಪರಿಚಿತರ ಸಂಖ್ಯೆ ಹೆಚ್ಚಿದ್ದು, ಮಾಸ್ತಿಯಲ್ಲಿ ಏಕಾಏಕಿ ಹೆಚ್ಚಿದ ಜನಸಂಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋಲಾರ: ಮಾಸ್ತಿ ಗ್ರಾಮದಲ್ಲಿ ಏಕಾಏಕಿ ನೂರಾರು ವಲಸಿಗರು! ಬಾಂಗ್ಲಾದಿಂದ ಬಂದವರೆಂಬ ಶಂಕೆ
ಮಾಸ್ತಿ ಗ್ರಾಮದಲ್ಲಿ ಏಕಾಏಕಿ ನೂರಾರು ವಲಸಿಗರು!
Edited By:

Updated on: Jan 23, 2026 | 2:06 PM

ಕೋಲಾರ, ಜನವರಿ 23: ಕೋಲಾರ (Kolar) ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು (Bangladesh Immigrants) ವಾಸಿಸುತ್ತಿರುವ ಬಗ್ಗೆ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನೂರಾರು ಅಪರಿಚಿತರು ಕಂಡುಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಮಾಸ್ತಿ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಈ ಜನರು, ತಾವು ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕೆಲವರು ನೇರವಾಗಿ ಬಾಂಗ್ಲಾದೇಶದಿಂದ ಬಂದಿರುವುದಾಗಿ ಹೇಳಿಕೊಂಡು ಓಡಾಡುತ್ತಿರುವುದರಿಂದ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ.

ಈ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಂದಿರುವ ಸಾಧ್ಯತೆ ಇದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಕೋಳಿ ಫಾರಂಗಳು, ಇಟ್ಟಿಗೆ ಕಾರ್ಖಾನೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಒಂದೇ ವಾರದಲ್ಲಿ 1000ಕ್ಕೂ ಹೆಚ್ಚು ಜನ ಗ್ರಾಮಕ್ಕೆ!

ಸ್ಥಳೀಯರ ಮಾಹಿತಿಯಂತೆ, ಕಳೆದ ಹದಿನೈದು ದಿನಗಳಲ್ಲಿ ಮಾತ್ರವೇ ಸುಮಾರು 100ಕ್ಕೂ ಹೆಚ್ಚು ಜನರು ಈ ಗ್ರಾಮಕ್ಕೆ ಬಂದಿರುವ ಅನುಮಾನವಿದೆ. ಅಚ್ಚರಿಯ ರೀತಿಯಲ್ಲಿ ಜನಸಂಚಾರ ಹೆಚ್ಚುತ್ತಿರುವುದು ಹಾಗೂ ಅವರ ಹಿನ್ನೆಲೆ ಸ್ಪಷ್ಟವಾಗದಿರುವುದು ಗ್ರಾಮಸ್ಥರಲ್ಲಿ ಭಯ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಅಕ್ರಮ ಬಾಂಗ್ಲಾ ವಲಸಿಗರಿರುವ ಶಂಕೆಯ ಹಿನ್ನೆಲೆ, ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಬಾಂಗ್ಲಾ ಅಕ್ರಮ ವಲಸಿಗರು

2026 ರ ಮೊದಲ ವಾರದಲ್ಲಿ ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಸುಮಾರು 71 ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಿದ್ದರು. ಜನವರಿ 12 ರಂದು ಜಹೀದುಲ್ ಇಸ್ಲಾಂ (35) ಮತ್ತು ಫಿರ್ದೌಸ್ (32) ಎಂಬಿಬ್ಬರನ್ನು ಬಂಧಿಸಲಾಗಿತ್ತು. ಇವರು ಕಳೆದ ಎರಡು ವರ್ಷಗಳಿಂದ ಜಿಗಣಿ ಸಮೀಪದ ಹುಲಿಮಂಗಲದಲ್ಲಿ ನಕಲಿ ದಾಖಲೆಗಳೊಂದಿಗೆ ಅಕ್ರಮವಾಗಿ ವಾಸಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿತ್ತು. ಇದೇ ಸಂದರ್ಭದಲ್ಲಿ ‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಆರೋಪದ ಮೇಲೆ ಸರ್ಬಾನು ಖಾತುನ್ ಎಂಬ ಮಹಿಳೆಯನ್ನು ಕೂಡ ಬಂಧಿಸಲಾಗಿತ್ತು.

ಇದನ್ನೂ ಓದಿ: ಜೈ ಬಾಂಗ್ಲಾ: ದೇಶ ವಿರೋಧಿ ಘೋಷಣೆ ಕೂಗಿದ ಆರೋಪ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮುಸ್ಲಿಂ ಮಹಿಳೆಯ ಬಂಧನ

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಕೋಲಾರದ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಆತಂಕದ ಸನ್ನಿವೇಶ ಸೃಷ್ಟಿಯಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇತ್ತ ಗಮನ ಹರಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ