ಉಚಿತ ವಿದ್ಯುತ್​ಗೆ ಹಣ ನೀಡುವ ಬದಲು, ಮಾಲೂರಿನ ಈ ಕಾಲೇಜಿನಂತೆ ಸ್ವಾವಲಂಬನೆಗೆ ಒತ್ತು ನೀಡಿದ್ರೆ ಸೂರ್ಯ ಇರುವವರೆಗೆ ವಿದ್ಯುತ್ ಫ್ರೀ!

| Updated By: ಸಾಧು ಶ್ರೀನಾಥ್​

Updated on: Aug 26, 2023 | 12:54 PM

ಒಂದೆಡೆ ಸರ್ಕಾರ ಉಚಿತ ವಿದ್ಯುತ್​ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಇದ್ದರೆ, ಇಲ್ಲಿ ಸರ್ಕಾರಿ ಕಾಲೇಜು ವಿದ್ಯುತ್​ ಸ್ವಾವಲಂಬನೆಯ ಮೂಲಕ ಆರ್ಥಿಕ ಸಂತೃಷ್ಟಿಯನ್ನು ಅನುಭವಿಸುತ್ತಿದೆ, ಸದ್ಯ ಸರ್ಕಾರ ಉಚಿತ ವಿದ್ಯುತ್​ಗೆ ಕೋಟಿ ಕೋಟಿ ಹಣ ನೀಡುವ ಬದಲು ಈ ಕಾಲೇಜಿನಂತೆ ವಿದ್ಯುತ್​ ಸ್ವಾವಲಂಬನೆಗೆ ಒತ್ತು ನೀಡಿದ್ರೆ ಸೂರ್ಯನಿರುವವರೆಗೆ ವಿದ್ಯುತ್​ ಉಚಿತವಾಗಿ ಸಿಗೋದರಲ್ಲಿ ಅನುಮಾನವಿಲ್ಲ!

ಉಚಿತ ವಿದ್ಯುತ್​ಗೆ ಹಣ ನೀಡುವ ಬದಲು, ಮಾಲೂರಿನ ಈ ಕಾಲೇಜಿನಂತೆ ಸ್ವಾವಲಂಬನೆಗೆ ಒತ್ತು ನೀಡಿದ್ರೆ ಸೂರ್ಯ ಇರುವವರೆಗೆ ವಿದ್ಯುತ್ ಫ್ರೀ!
ಮಾಲೂರಿನ ಈ ಕಾಲೇಜಿನಂತೆ ಸ್ವಾವಲಂಬನೆಗೆ ಒತ್ತು ನೀಡಿದ್ರೆ ವಿದ್ಯುತ್​ ಉಚಿತವಾಗಿ ಸಿಗುತ್ತೆ!
Follow us on

ರಾಜ್ಯದಲ್ಲಿ ಗೃಹಜ್ಯೋತಿ ಅನ್ನೋ ಯೋಜನೆ ಮೂಲಕ ಮನೆ ಮನೆಗೂ ಸರ್ಕಾರ ಉಚಿತ ವಿದ್ಯುತ್ (free electricity)​ ನೀಡುತ್ತಿದೆ, ಈ ನಡುವೆ ಉಚಿತ ವಿದ್ಯುತ್​ ನೀಡಿ ಅದರ ಹೊರೆಯನ್ನು ಹೇಗೆ ನಿಭಾಯಿಸೋದು ಎಂದು ಸರ್ಕಾರ ಯೋಚಿಸುವ ಸ್ಥಿತಿ ಇದೆ, ಆದರೆ ಇಲ್ಲೊಂದು ಸರ್ಕಾರಿ ಕಾಲೇಜು ಆ ರೀತಿಯ ಆಲೋಚನೆಯಿಂದ ಹೊರತಾಗಿದೆ, ವಿದ್ಯುತ್​ ಸ್ವಾವಲಂಬನೆ ಮೂಲಕ ಸದಾ ವಿದ್ಯುತ್​ ಬೆಳಗುತ್ತಲೇ ಇದೆ. ಸರ್ಕಾರಿ ಕಾಲೇಜು ಕಟ್ಟಡದ ಮೇಲೆ ಅಳವಡಿಸಲಾಗಿರುವ ವಿದ್ಯುತ್​ ಪ್ಯಾನಲ್​ಗಳು, ಕಾಲೇಜಿನಲ್ಲಿ ನಿರಂತವಾಗಿ ಸರಬರಾಜಾಗುತ್ತಿರುವ ವಿದ್ಯುತ್​, ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಪ್ಯಾನ್​ ಹಾಗೂ ಕಂಪ್ಯೂಟರ್​ಗಳು, ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ಸರ್ಕಾರಿ ಪಿ.ಯು. ಕಾಲೇಜಿನಲ್ಲಿ. ಹೌದು ಮಾಲೂರು ಪಟ್ಟಣದ ಸರ್ಕಾರಿ ಪಿಯು ಕಾಲೇಜು (Malur college) ಕಳೆದ ಹಲವು ವರ್ಷಗಳಿಂದ ವಿದ್ಯುತ್​ ಸ್ವಾವಲಂಬನೆಯನ್ನು (self reliance) ಸಾಧನೆ ಮಾಡುವ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದೆ (Solar Energy).

ಸರ್ಕಾರಿ ಪಿಯು ಕಾಲೇಜಿಗೆ ಬೇಕಾದ ಅಷ್ಟೂ ವಿದ್ಯುತ್​ನ್ನು ಇದೇ ಕಾಲೇಜಿನಲ್ಲೇ ಉತ್ಪಾದನೆ ಮಾಡಿಕೊಳ್ಳ ಲಾಗುತ್ತದೆ, ತಿಂಗಳ ತಿಂಗಳು ಬಿಲ್​ ಕಟ್ಟಬೇಕು ಎನ್ನುವ ಆತಂಕವಿಲ್ಲ, ಯಾವಾಗ ವಿದ್ಯುತ್​ ಸಂಪರ್ಕ ಕಡಿತವಾಗುತ್ತದೋ ಅನ್ನೋ ಭಯವೂ ಇಲ್ಲ, ನಿರಂತರವಾಗಿ ಈ ಕಾಲೇಜಿನಲ್ಲಿ ವಿದ್ಯುತ್​ ಸರಬರಾಜಾಗುತ್ತದೆ. ಇನ್ನು ಶಾಲೆಯಲ್ಲಿ ಮಕ್ಕಳೂ ಅಷ್ಟೇ ಕ್ಲಾಸ್​ ನಡೆಯುವ ವೇಳೆಯಲ್ಲಿ ಸೆಖೆಯಾದರೆ ಫ್ಯಾನ್ ಹಾಕಿ ಕೊಂಡು ಕ್ಲಾಸ್​ ಕೇಳುತ್ತಾರೆ, ಇನ್ನು ಯಾವಾಗ ಬೇಕಾದರೂ ಕಂಪ್ಯೂಟರ್ ಲ್ಯಾಬ್​ನಲ್ಲಿ ಕಂಪ್ಯೂಟರ್ ಬಳಸುತ್ತಾರೆ, ಅಲ್ಲದೆ ಇಡೀ ಕಾಲೇಜು ಕಟ್ಟಡಕ್ಕೆ ಬೇಕಾಗುವ ವಿದ್ಯುತ್​ ಇದೇ ಕಾಲೇಜಿನಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಈ ಮೂಲಕ ಕೋಲಾರ ಜಿಲ್ಲೆಗೆ ಮಾಲೂರು ಸರ್ಕಾರಿ ಪಿಯು ಕಾಲೇಜು ವಿದ್ಯುತ್​ ಸ್ವಾವಲಂಬನೆಗೆ ಮಾದರಿಯಾಗಿದೆ ಎನ್ನುತ್ತಾರೆ ಉಪನ್ಯಾಸಕರಾದ ಚಂದ್ರಪ್ಪ.

ಇನ್ನು ಮಾಲೂರಿನ ಈ ಸರ್ಕಾರಿ ಪಿಯು ಕಾಲೇಜಿನಲ್ಲಿ ಈ ರೀತಿಯ ವಿದ್ಯುತ್​ ಸ್ವಾವಲಂಬನೆ ಸಾಧ್ಯವಾಗಿದ್ದು ಹೇಗೆ ಅಂತ ನೋಡೋದಾದ್ರೆ, ಮಾಲೂರಿನ ಇದೇ ಮಾಲೂರಿನ ಕಾಲೇಜಿನಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾದ ದಿವಾಕರ್​ ಎಂಬುವರ ಸ್ನೇಹಿತರೊಬ್ಬರು ಟೆರಿ ಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅವರನ್ನು ನಮ್ಮ ಕಾಲೇಜಿಗೆ ಸೋಲಾರ್​ ವಿದ್ಯುತ್​ ದಾನವಾಗಿ ನೀಡುವಂತೆ ಕೇಳಿದಾಗ ಅವರು 2016 ಮತ್ತು 2017 ರಲ್ಲಿ ಮೊದಲು ಎರಡು ಪ್ಯಾನಲ್​ ಸೋಲಾರ್ ನೀಡಿ, ಸ್ವಲ್ಪಮಟ್ಟಿಗೆ ಸಹಾಯ ಮಾಡಿದ್ದರಂತೆ.

ನಂತರದಲ್ಲಿ ಹಲವು ಜನ ದಾನಿಗಳ ನೆರವಿನಿಂದ ಇವತ್ತು ಮಾಲೂರು ಸರ್ಕಾರಿ ಪಿಯು ಕಾಲೇಜು ತಮ್ಮ ಕಾಲೇಜಿಗೆ ಅಗತ್ಯವಾದ ವಿದ್ಯುತ್​ನ್ನು ತಾವೇ ಉತ್ಪಾದನೆ ಮಾಡಿಕೊಂಡು ಇನ್ನಷ್ಟು ವಿದ್ಯುತ್​ನ್ನು ಬೆಸ್ಕಾಂಗೆ ನೀಡುವಷ್ಟು ಸ್ವಾವಲಂಬಿಯಾಗಿದೆ. ಸದ್ಯ ಈ ಕಾಲೇಜಿನ​ ವಿದ್ಯುತ್ ಸ್ವಾವಲಂಬನೆಯ ಯಶೋಗಾಥೆಯನ್ನು ಕಂಡ ನಂತರ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಪಿಯು ಕಾಲೇಜುಗಳು ಕೂಡಾ ದಾನಿಗಳ ನೆರವಿನಿಂದ ಸೌರವಿದ್ಯುತ್​​ನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿತ್ತು. ಆದರೆ ಈವರೆಗೆ ಜಿಲ್ಲೆಯ ಹಲವು ಕಾಲೇಜುಗಳಿಗೆ ಸೌರ ವಿದ್ಯುತ್​ ಅಳವಡಿಸಿಕೊಡುವಂತೆ ಹಲವಾರು ದಾನಿಗಳನ್ನು ಮನವಿ ಮಾಡಲಾಗಿದೆಯಾದರೂ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಾಲೇಜುಗಳಲ್ಲಿ ಸೌರವಿದ್ಯುತ್ ಅಳವಡಿಸಲು ಸಾಧ್ಯವಾಗಿಲ್ಲ​, ಆದರೆ ಜಿಲ್ಲೆಯಲ್ಲಿ ಹಲವು ದಾನಿಗಳನ್ನು ನಿರಂತವಾಗಿ ಸಂಪರ್ಕ ಮಾಡಲಾಗುತ್ತಿದೆ ಅನ್ನೋದು ಪಿಯು ಉಪನಿರ್ದೇಶಕರಾದ ರಾಮಚಂದ್ರಪ್ಪ ಅವರ ಮಾತು.

ಒಟ್ಟಾರೆ ಒಂದೆಡೆ ಸರ್ಕಾರ ಉಚಿತ ವಿದ್ಯುತ್​ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಇದ್ದರೆ, ಇಲ್ಲಿ ಸರ್ಕಾರಿ ಕಾಲೇಜು ವಿದ್ಯುತ್​ ಸ್ವಾವಲಂಬನೆಯ ಮೂಲಕ ಆರ್ಥಿಕ ಸಂತೃಷ್ಟಿಯನ್ನು ಅನುಭವಿಸುತ್ತಿದೆ, ಸದ್ಯ ಸರ್ಕಾರ ಉಚಿತ ವಿದ್ಯುತ್​ಗೆ ಕೋಟಿ ಕೋಟಿ ಹಣ ನೀಡುವ ಬದಲು ಈ ಕಾಲೇಜಿನಂತೆ ವಿದ್ಯುತ್​ ಸ್ವಾವಲಂಬನೆಗೆ ಒತ್ತು ನೀಡಿದ್ರೆ ಸೂರ್ಯನಿರುವವರೆಗೆ ವಿದ್ಯುತ್​ ಉಚಿತವಾಗಿ ಸಿಗೋದರಲ್ಲಿ ಅನುಮಾನವಿಲ್ಲ!