ಕೋಲಾರ: ನೀರಾವರಿ ಯೋಜನೆ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ, ಇವತ್ತು ಅದೇ ಪಕ್ಷದ ಶಾಸಕರೊಬ್ಬರ ರಾಜೀನಾಮೆಗೆ ಕಾರಣವಾಗಿ ನಿಂತಿದೆ. ನೀರಾವರಿ ಯೋಜನೆಯ ಕೀರ್ತಿ ಹಂಚಿಕೆ ವಿಚಾರದಲ್ಲಿ ಶುರುವಾದ ಮನಸ್ಥಾಪದಿಂದ, ಪಕ್ಷ ಶಾಸಕರನ್ನು ಉಚ್ಛಾಟನೆ ಮಾಡಲು ಸಿದ್ದತೆ ಮಾಡಿಕೊಂಡಿತ್ತು. ಆದರೆ ಪಕ್ಷ ಉಚ್ಛಾಟನೆಗೆ ಮುನ್ನವೇ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಶಾಸಕರಾದ ಶ್ರೀನಿವಾಸಗೌಡರು ರಾಜೀನಾಮೆ ನೀಡಿದ್ದಾರೆ.
ಹೆಚ್ಡಿಕೆ ಅದೊಂದು ಹೇಳಿಕೆ ಶ್ರೀನಿವಾಸಗೌಡರು ಪಕ್ಷ ತೊರೆಯುವಂತೆ ಮಾಡಿದೆ?
ಅದು ಎತ್ತಿನಹೊಳೆ ದುಡ್ಡು ಹೊಡೆಯುವ ಸ್ಕೀಮ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವು ಮುಖಂಡರುಗಳಿಂದ ನೀರು ಕೊಡುತ್ತೀನಿ ಎಂದು ಹೇಳಿ ಹಣ ಲೂಟಿ ಮಾಡಲು ಯೋಜನೆ ಮಾಡಿದ್ದರು. ಎತ್ತಿನಹೊಳೆ ತೋರಿಸಿ ನಿಮಗೆ ಬೆಂಗಳೂರು ಕೊಳಚೆ ನೀರು ತಂದು ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆ ಇವತ್ತು ಒಬ್ಬ ಜೆಡಿಎಸ್ ಶಾಸಕ ಪಕ್ಷ ತೊರೆಯಲು ಕಾರಣವಾಗಿದೆ.
ಏನಿದು ಕೆಸಿ ವ್ಯಾಲಿ ಯೋಜನೆ? ವಿವಾದಕ್ಕೆ ಕಾರಣವಾಗಿದ್ದು ಹೇಗೆ?
ಕೋಲಾರ ಅಂತರ್ಜಲ ವೃದ್ದಿಸುವ ಸಲುವಾಗಿ ಕೋಲಾರದ ಕೆರೆಗಳಿಗೆ ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಹರಿಸುವ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಲಾದ 1400 ಕೋಟಿ ರೂಪಾಯಿ ಯೋಜನೆ ಕೆಸಿ ವ್ಯಾಲಿ ಯೋಜನೆ. ಕೋಲಾರಕ್ಕೆ ಇದು ಉತ್ತಮ ಯೋಜನೆಯಾಗಿತ್ತು. ಇಂಥಾದೊಂದು ನೀರಾವರಿ ಯೋಜನೆ ಕೋಲಾರ ಜಿಲ್ಲೆಗೆ ತರುವುದರಲ್ಲಿ ಕಾಂಗ್ರೇಸ್ ಶಾಸಕ ರಮೇಶ್ ಕುಮಾರ್ ಹಾಗೂ ಕೃಷ್ಣಬೈರೇಗೌಡರ ಪಾತ್ರವೇ ಪ್ರಮುಖ ಕಾರಣ ಎಂದು ಜೆಡಿಎಸ್ ಶಾಸಕ ಶ್ರೀನಿವಾಸಗೌಡರು ಹಾಡಿ ಹೊಗಳಿದ್ದರು. ಅವರ ಈ ಹೇಳಿಕೆ ಆಲಿಸಿದ್ದ ಕುಮಾರಸ್ವಾಮಿ ಕೋಲಾರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಬಂದಾಗ ರಮೇಶ್ ಕುಮಾರ್ ವಿರುದ್ಧ ಕೆಂಡಮಂಡಲರಾಗಿದ್ದರು.
ಈ ವೇಳೆ ಕುಮಾರಸ್ವಾಮಿ ಎತ್ತಿನಹೊಳೆಯಿಂದ ನೀರು ಕೊಡುತ್ತೀನಿ ಎಂದು ಹೇಳಿ 12,500 ಕೋಟಿಗೆ ಶುರುಮಾಡಿದ ಯೋಜನೆ ಇಂದು 22000 ಕೋಟಿ ರೂ.ಗೆ ಹೋಗಿ ನಿಂತಿದೆ. ಮೂರು ವರ್ಷದಲ್ಲಿ ನೀರು ಕೊಡುತ್ತೀವಿ ಎಂದು ಹತ್ತು ವರ್ಷ ಕಳೆದರೂ ಒಂದು ಹನಿ ನೀರು ಬಂದಿಲ್ಲ. ಇದೊಂದು ಹಣ ಹೊಡೆಯುವ ಯೋಜನೆ, ಅದನ್ನು ಮರೆ ಮರೆಮಾಚಿ ಕೆಸಿ ವ್ಯಾಲಿ ನೀರಾವರಿ ಯೋಜನೆ ಮೂಲಕ ಬೆಂಗಳೂರು ಗಲೀಜು ನೀರು ಕೊಡುತ್ತಿದ್ದಾರೆ ಎನ್ನುವ ಮೂಲಕ ಹೆಚ್ಡಿಕೆ, ರಮೇಶ್ ಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕುಮಾರಸ್ವಾಮಿ ಈ ಹೇಳಿಕೆಗೆ ಬೇಸರಗೊಂಡ ಶ್ರೀನಿವಾಸಗೌಡ, ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ ಇದು ರೈತರನ್ನು ದಿಕ್ಕುತಪ್ಪಿಸುವ ಹೇಳಿಕೆ ಎಂದು ಜೆಡಿಎಸ್ ಶಾಸಕನಾಗಿ ಕುಮಾರಸ್ವಾಮಿ ವಿರುದ್ಧವೇ ಆಕ್ರೋಶ ಹೊರಹಾಕಿದ್ದರು.
ಪಕ್ಷದಿಂದ ಉಚ್ಛಾಟನೆ ವಿಚಾರ ತಿಳಿದು ರಾಜೀನಾಮೆ ನೀಡಲು ಮುಂದಾದ ಶಾಸಕ?
ಇನ್ನು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಕಾಂಗ್ರೇಸ್ ಶಾಸಕರನ್ನು ಹೊಗಳಿ ಅಟ್ಟಕ್ಕೇರಿಸಿದ್ದು, ಜೊತೆಗೆ ತಮ್ಮ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ವಿರೋಧಿಸಿ, ಬೇಸರ ವ್ಯಕ್ತಪಡಿಸಿದ ವಿಚಾರ ಜೆಡಿಎಸ್ ಹೈ ಕಮಾಂಡ್ ಬಾಗಿಲು ತಟ್ಟಿತ್ತು. ಈ ವಿಚಾರವಾಗಿ ಪಕ್ಷದ ಮಟ್ಟದಲ್ಲಿ ಶ್ರೀನಿವಾಸಗೌಡರನ್ನು ಉಚ್ಛಾಟನೆ ಮಾಡಲಾಗುತ್ತದೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಶ್ರೀನಿವಾಸಗೌಡರು ಒಂದು ಹೆಜ್ಜೆ ಮುಂದೆ ಹೋಗಿ, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಎನ್ನುವಂತೆ ಮುಂದಿನ ಸಮಯ ನೋಡಿಕೊಂಡು ತಾವು ಕಾಂಗ್ರೇಸ್ ಸೇರಿಕೊಳ್ಳವ ಜೊತೆಗೆ ತಮ್ಮ ಮಗನಿಗೆ ಜಿಲ್ಲಾಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮಾಡಿ ಟಿಕೆಟ್ ಕೊಡುವಂತೆಯೂ ಮಾತನಾಡಿಕೊಂಡು ಬಂದಿದ್ದು, ತಾನೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ದೇವೇಗೌಡರ ಕುಟುಂಬದ ಬಗ್ಗೆಯೂ ಬೇಸರ ಹೊರ ಹಾಕಿದ ಶ್ರೀನಿವಾಸಗೌಡರು
ಇದೇ ವೇಳೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಶ್ರೀನಿವಾಸಗೌಡರು ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆಯೂ ತಮ್ಮ ಬೇಸರ ಹೊರಹಾಕಿದ್ದಾರೆ. ಅಧಿಕಾರ ಸಿಕ್ಕಾಗ ದೇವೇಗೌಡರ ಕುಟುಂಬದವರೇ ಸಚಿವರಾಗಬೇಕು. ಎಲ್ಲಾ ಅಧಿಕಾರವೂ ಇವರ ಕುಟುಂಬಕ್ಕೇ ಬೇಕು. ಎಲ್ಲವೂ ತಂದೆ ಮಕ್ಕಳು ಹೇಳಿದಂತೆ ನಡೆಯಬೇಕು. ನಾನು ಧರ್ಮಸಿಂಗ್ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ನಮಗೂ ಆಸೆ ಆಕಾಂಕ್ಷೆಗಳಿವೆ. ಎಲ್ಲವೂ ಇವರ ಕುಟುಂಬಕ್ಕೆ ಬೇಕಾ ಎನ್ನುವ ಮೂಲಕ ದೇವೇಗೌಡರ ಕುಟುಂಬದ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.
ಕೆ.ಸಿ. ವ್ಯಾಲಿ ಯೋಜನೆ ನೀರನ್ನು ಕೊಳಚೆ ನೀರು ಎಂದ ಕುಮಾರಸ್ವಾಮಿ ಮಾತಿಗೆ ವಿರೋಧ ಮಾಡಿದ್ದಕ್ಕೆ ನನ್ನ ಮೇಲೆ ಕ್ರಮ. ಹಾಗಾಗಿ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಮಾಡಿದ್ದಾನೆ. ಈಗಾಗಲೇ ಡಿ.ಕೆ. ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿ ಬಂದಿದ್ದೇನೆ ಮುಂದೆ ನೋಡೋಣ ಎನ್ನುವ ಮೂಲಕ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಒಟ್ಟಾರೆ ಕೋಲಾರ ಜಿಲ್ಲೆಯ ಮಟ್ಟಿಗೆ ಶ್ರೀನಿವಾಸಗೌಡರ ನಡೆ ಇನ್ನಷ್ಟು ರಾಜಕೀಯ ಬದಲಾವಣೆಗೆ ಕಾರಣವಾಗಬಹುದು. ಜೊತೆಗೆ ರಾಜ್ಯದಲ್ಲಿ ಮುಂದೆ ನಮ್ಮ ಪಕ್ಷವನ್ನು ಬಿಟ್ಟು ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಜೆಡಿಎಸ್ಗೆ ಈಗ ಮತ್ತೊಬ್ಬ ಶಾಸಕರ ರಾಜೀನಾಮೆ ನುಂಗಲಾರದ ತುತ್ತಾಗಿರುವುದು ಮಾತ್ರ ಸುಳ್ಳಲ್ಲ.
ವರದಿ : ರಾಜೇಂದ್ರ ಸಿಂಹ
ಇದನ್ನೂ ಓದಿ:
ಅಂತರ್ಜಲ ವೃದ್ದಿಸುವ ಕೆಸಿ ವ್ಯಾಲಿ ಯೋಜನೆಯಿಂದ 84 ಕೆರೆಗಳು ಭರ್ತಿ; ನೀರಿನ ಮಟ್ಟ ಹೆಚ್ಚಾಗಲು ಮಳೆರಾಯನ ಸಾಥ್