ಕೋಲಾರದಲ್ಲಿ ಹಳ್ಳ ಹಿಡಿದ ಜಲ ಜೀವನ್ ಮಿಷನ್
ಕೋಲಾರ, ಜೂ.26: ಕೇಂದ್ರ ಸರ್ಕಾರದ ‘ಜಲ ಜೀವನ್ ಮಿಷನ್’(
Jal Jeevan Mission) ಅಡಿಯಲ್ಲಿ ಕೋಲಾರ ಜಿಲ್ಲಾ ಪಂಚಾಯತಿ ವತಿಯಿಂದ
ಜಲಜೀವನ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಅದರಲ್ಲೂ ಕೋಲಾರ(
Kolar) ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗರುಡನಹಳ್ಳಿ ಗ್ರಾಮದಲ್ಲಿ ಈ ಯೋಜನೆ ಪ್ರಾಯೋಗಿವಾಗಿ ಮಾಡಲಾಯಿತು. ಆದರೆ, ಪ್ರಾಯೋಗಿಕ ಯೋಜನೆಯನ್ನೇ ಸರಿಯಾಗಿ ಮಾಡದೆ ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕವಾಗಿ ಕುಡಿಯುವ ನೀರಿನ ಪೈಪ್ಗಳನ್ನು ಅಳವಡಿಸಲಾಗಿದೆ. ಇದರಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮೊದಲ ಹಂತದಲ್ಲಿ ಹಳ್ಳ ಹಿಡಿದಿದೆ.
ಸುಮಾರು 200 ಮನೆಗಳಿರುವ ಗರುಡನಹಳ್ಳಿ ಗ್ರಾಮದಲ್ಲಿ ಸುಮಾರು 96 ಲಕ್ಷ ರೂ.ಗಳಲ್ಲಿ ಯೋಜನೆ ಕಾಮಗಾರಿ ಮಾಡಲಾಗಿದೆ. ಪೈಪ್ ಲೈನ್, ನಲ್ಲಿಗಳು, ಮೀಟರ್ ಅಳವಡಿಕೆಯನ್ನು ಮಾಡಲಾಗಿದೆ. ಆದ್ರೆ, ಕಳಪೆ ಕಾಮಗಾರಿಯಿಂದ ಯೋಜನೆ ಜನರಿಗೆ ತಲುಪುವ ಮೊದಲೇ ಹಾಳಾಗಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳಿದ್ದು, ಶೇ.40 ರಷ್ಟು ಮನೆಗೆ ಸಮಪರ್ಕವಾಗಿ ನೀರು ಹೋಗುತ್ತಿಲ್ಲ. ಜೊತೆಗೆ ಹಾಕಿರುವಂತಹ ಮೀಟರ್, ಪೈಪ್ನಲ್ಲಿ, ವಾಲ್ವ್, ಎಲ್ಲವೂ ಕಳಪೆಯಿಂದ ಕೂಡಿದ್ದರ ಪರಿಣಾಮ ಪೈಪ್ಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆಯಲ್ಲೇ ಸೋರಿಕೆಯಾಗುತ್ತಿದೆ. ಜೊತೆಗೆ ಅವೈಜ್ಞಾನಿಕ ಕಾಮಗಾರಿಯಿಂದ ಅರ್ಧ ಗ್ರಾಮದ ಮನೆಗಳಿಗೆ ನೀರೇ ಹೋಗುತ್ತಿಲ್ಲ.
ಇನ್ನು ಕೋಲಾರ ಜಿಲ್ಲೆಯಲ್ಲಿ ಸುಮಾರು 1813 ಗ್ರಾಮಗಳನ್ನು ಜಲಜೀವನ್ ಮಿಷನ್ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ. ಯೋಜನೆಗಾಗಿ ಕೋಟ್ಯಾಂತರ ರೂಪಾಯಿಯನ್ನು ಸರ್ಕಾರಗಳು ವ್ಯಯ ಮಾಡಲಾಗುತ್ತಿದೆ. ಪ್ರತಿಯೊಂದು ಮನೆಗೂ ನೀರು ಕೊಡಲು ನೀಡಲು ಸರ್ಕಾರ ಮಹತ್ವದ ಯೋಜನೆ ರೂಪಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ 1813 ಗ್ರಾಮಗಳ ಪೈಕಿ ಮೊದಲ ಹಂತದಲ್ಲಿ 813 ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು 280 ಹಳ್ಳಿಗಳ ಟಿಂಡರ್ ಪ್ರಕ್ರಿಯೆ ನಡೆದಿದ್ದು, ವರ್ಕ್ ಆಡರ್ ಕೊಡಲಾಗುತ್ತಿದೆ. 50 ಗ್ರಾಮಗಳ ಟೆಂಡರ್ ಕರೆಯಬೇಕಾಗಿದ್ದು, ಸದ್ಯದಲ್ಲಿ ಎಲ್ಲಾ ಕಾಮಗಾರಿಗಳು ಆರಂಭವಾಗಲಿದೆ.
ಇನ್ನು ಗರುಡನಹಳ್ಳಿಯಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಕೂಡಲೇ ಕಾಮಗಾರಿಯನ್ನು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಜೀವನ ಮಿಷನ್ ಯೋಜನೆಯ ಕಾಮಗಾರಿಯನ್ನು ಪ್ರತ್ಯಕ್ಷವಾಗಿ ನೋಡಿಕೊಳ್ಳಲು ವರ್ಲ್ಡ್ ಬ್ಯಾಂಕ್ನಿಂದ ಇಂಜಿನೀಯರ್ಗಳು ಬಂದಿದ್ದಾರೆ. ಅವರು ಸಹ ಯೋಜನೆಯನ್ನು ಪರಿಶೀಲನೆ ಮಾಡಿ ವರದಿಯನ್ನು ಕಳುಹಿಸಿಕೊಡುತ್ತಾರೆ. ಕಳಪೆ ಕಾಮಗಾರಿ ಕಂಡು ಬಂದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಪಂಚಾಯ್ತಿ ಸಿಇಓ ಹೇಳಿದ್ದಾರೆ.
ಒಟ್ಟಾರೆ ಎಲ್ಲಾ ಜನರಿಗೂ ನೀರು ಸಿಗಬೇಕು ಯಾರು ಸಹ ನೀರಿಗಾಗಿ ಪರದಾಡಬಾರದೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಜಲಜೀವನ‌್ ಮಿಷನ್ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮೊದಲ ಹಂತದಲ್ಲಿ ಕಳಪೆ ಕಾಮಗಾರಿ ಮುಖಾಂತರ ಕೋಟ್ಯಾಂತರ ರೂಪಾಯಿ ಯೋಜನೆ ಮೇಲೆ ಗ್ರಾಮದ ಜನರಿಗೆ ಬೇಸರ ಉಂಟುಮಾಡಿರುವುದಂತು ಸುಳ್ಳಲ್ಲ.