ಹಾಲು ಉತ್ಪಾದಕರ ಪ್ರೋತ್ಸಾಹಧನ ಬಾಕಿ
ಕೋಲಾರ, ಮೇ.10: ಹಾಲು ಉತ್ಪಾದನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಈ ಅವಿಭಜಿತ ಜಿಲ್ಲೆಗಳಲ್ಲಿ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಜನ ಹಾಲು ಉತ್ಪಾದಕರಿದ್ದಾರೆ. ಜೊತೆಗೆ ಕಳೆದ ವರ್ಷ ರಾಜ್ಯ ಸೇರಿದಂತೆ ಕೋಲಾರ-ಚಿಕ್ಕಬಳ್ಳಾಪುರ(
Kolar-Chikkaballapur) ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿವೆ. ಹೀಗಿರುವಾಗ, ರಾಜ್ಯದಲ್ಲಿ ರೈತರು ಹಾಗೂ
ಹಾಲು ಉತ್ಪಾದಕರಿಗೆ ನೆರವಿಗೆ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಸರ್ಕಾರ ಕಳೆದ ಏಳು ತಿಂಗಳಿಂದ ಹಾಲು ಉತ್ಪಾದಕರಿಗೆ ನೀಡಬೇಕಿದ್ದ ಪ್ರೋತ್ಸಾಹಧವನನ್ನು ನೀಡಿಲ್ಲ. ಕೋಲಾರ-ಚಿಕ್ಕಬಳ್ಳಾಪುರದಲ್ಲಿ 1800 ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿವೆ, ಜಿಲ್ಲೆಯಲ್ಲಿ ನಿತ್ಯ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಹೀಗಿರುವಾಗ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಇಂಥಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡಬೇಕಿದ್ದ ಪ್ರೋತ್ಸಾಹಧವನ್ನು ಕೂಡಲೇ ಬಿಡುಗಡೆ ಮಾಡಿ ರೈತರ ಹಾಗೂ ಹಾಲು ಉತ್ಪಾದಕರ ನೆರವಿಗೆ ನಿಲ್ಲಬೇಕಿತ್ತು,
ಆದರೆ, ಸರ್ಕಾರ ಆ ಕೆಲಸ ಮಾಡದೇ ಕಳೆದ ಏಳು ತಿಂಗಳಿಂದ ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ಐದು ರೂಪಾಯಿ ಪ್ರೋತ್ಸಾಹಧವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಅಲ್ಲದೆ ಭೀಕರ ಬರದ ಪರಿಸ್ಥಿತಿಯಲ್ಲಿ ಹಸುವಿನ ಮೇವು ಮತ್ತು ಪಶು ಆಹಾರದ ಬೆಲೆಗಳನ್ನು ಹೆಚ್ಚಿಸಲಾಗಿದೆ. ಇದೆಲ್ಲವೂ ಸರ್ಕಾರ ರೈತರನ್ನು ನಿರ್ಲ್ಯಕ್ಷ ಮಾಡಿರುವುದಕ್ಕೆ ಹಿಡಿದ ಕೈಗನ್ನಡಿ ಯಂತಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ತರಲು ಬೇರೆ ಎಲ್ಲಾ ಯೋಜನೆಗಳ ಅನುಧಾನಗಳನ್ನು ತೆಗೆದು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಕೋಟಿ ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡ ಸರ್ಕಾರ
ಇನ್ನು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸರಿಸುಮಾರು 1800ಕ್ಕೂ ಹೆಚ್ಚು ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿದ್ದು, ಲಕ್ಷಾಂತರ ಕುಟುಂಬಗಳು ಹೈನೋಧ್ಯಮದ ಮೇಲೆ ಅವಲಂಭಿತವಾಗಿವೆ. ಕಳೆದ ಒಂದು ವರ್ಷದಿಂದ ಮಳೆ ಇಲ್ಲದೆ ಬೆಳೆದ ಬೆಳೆಗಳೆಲ್ಲವೂ ಕೈಕೊಟ್ಟಿದೆ. ಬಿರು ಬಿಸಿಲಿನ ತಾಪ ಜನರ ನೆತ್ತಿ ಸುಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ನಿಂತಿಲ್ಲ. ಬದಲಾಗಿ ಹಾಲು ಉತ್ಪಾದಕರಿಗೆ ನೀಡಬೇಕಿದ್ದ ಕೋಟಿ ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಕಳೆದ ಏಳು ತಿಂಗಳಿಂದ ಹಾಲು ಉತ್ಪಾದಕರಿಗೆ ನೀಡಬೇಕಿದ್ದ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಸದ್ಯ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸುಮಾರು 77.27 ಕೋಟಿ ಹಣ ಬಾಕಿ ಇದೆ. ಈ ಪೈಕಿ ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ 7 ತಿಂಗಳ 74.41 ಕೋಟಿ ಬಾಕಿ ಇದ್ದರೆ, ಪರಿಶಿಷ್ಟ ಜಾತಿಗೆ ಸೇರಿದ ಹಾಲು ಉತ್ಪಾದಕರಿಗೆ ಎರಡು ತಿಂಗಳ 98 ಲಕ್ಷ, ಪರಿಶಿಷ್ಟ ಪಂಗಡಕ್ಕೆ ಸೇರಿದ ಹಾಲು ಉತ್ಪಾದಕರಿಗೆ ನಾಲ್ಕು ತಿಂಗಳಿಂದ ಒಟ್ಟು 1.93 ಲಕ್ಷ ಹಣ ಬಾಕಿ ಇದೆ.
ಹಾಗಾಗಿ, ಈ ಕೂಡಲೇ ಸರ್ಕಾರ ಹಾಲು ಉತ್ಪಾದಕರಿಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರು ಮಾತನಾಡಿ, ‘ಆದಷ್ಟು ಬೇಗ ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸದ್ಯ ಹಲವು ವರ್ಗಗಳ ಅನುದಾನಗಳನ್ನು ನುಂಗಿ ಹಾಕಿದೆ ಎನ್ನುವ ಮಾತು ಕೇಳಿಬಂದಿತ್ತು. ಈಗ ಆ ಪಟ್ಟಿಗೆ ಹೈನುಗಾರಿಕೆಯೂ ಸೇರಿದ್ದು, ಸರ್ಕಾರ ನಿಜಕ್ಕೂ ಗ್ಯಾರಂಟಿಗಳಿಂದ ಆರ್ಥಿಕ ಸಮಸ್ಯೆ ಎದುರಾಗಿಲ್ಲ ಎನ್ನುವುದಾದರೆ ಕೂಡಲೇ ರೈತರ ಹಣವನ್ನು ಬಿಡುಗಡೆ ಮಾಡಬೇಕಿದೆ.