ತೆರೆದ ಕೊಳವೆಬಾವಿ ಮುಚ್ಚಿದರೆ 500 ರೂಪಾಯಿ ಪ್ರೋತ್ಸಾಹಧನ- ರೈತನಿಂದ ವಿಶಿಷ್ಟ ಅಭಿಯಾನ
ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಸಾತ್ವಿಕ್ ಅನ್ನೋ ಎರಡು ವರ್ಷದ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ಬಾಲಕನನ್ನು ರಕ್ಷಿಸಲಾಗಿದೆ. ಇಂತಹ ಪ್ರಕರಣ ಮರುಕಳಿಸಬಾರದು ಮತ್ತು ತೆರೆದ ಕೊಳವೆ ಬಾವಿಗಳನ್ನು ಮುಚ್ಚಿದರೆ 500 ರೂ. ಪ್ರೋತ್ಸಾಹಧನ ನೀಡುವುದಾಗಿ ಕೊಪ್ಪಳದ ರೈತ ಘೋಷಿಸಿದ್ದಾರೆ.
ಕೊಪ್ಪಳ, ಏಪ್ರಿಲ್ 05: ರಾಜ್ಯದಲ್ಲಿ ತೆರೆದ ಕೊಳವೆ ಬಾವಿಗೆ (Borewell) ಮಕ್ಕಳು ಬೀಳುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ರಾಜ್ಯದಲ್ಲಿನ ಕೆಲ ದುರಂತ ಪ್ರಕರಣಗಳು ಮಾಸುವ ಮುನ್ನವೇ, ಗುರುವಾರ (ಏ.04) ರಂದು ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ತಾಲೂಕಿನ ಲಚ್ಯಾಣದಲ್ಲಿ ಸಾತ್ವಿಕ್ (Satwik) ಅನ್ನೋ ಎರಡು ವರ್ಷದ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿತ್ತು. ಮಗುವನ್ನು ಸುರಕ್ಷಿತವಾಗಿ ಹೊರತರುವಲ್ಲಿ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇನ್ನು ರಾಜ್ಯದಲ್ಲಿನ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಕೆಲ ಮಕ್ಕಳನ್ನು ಜೀವಂತವಾಗಿ ಹೊರತಗೆಯುವಲ್ಲಿ ಸಫಲವಾದರೆ, ಇನ್ನು ಕೆಲವಡೆ ಮಕ್ಕಳು ತೆರೆದ ಕೊಳವೆ ಬಾವಿಗೆ ಬಿದ್ದು ಪ್ರಾಣ ಬಿಟ್ಟಿವೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮಗಳು ಬಲಿಯಾಗುತ್ತಿವೆ. ಹೀಗಾಗಿ ತೆರದ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸವನ್ನು ಮಾಡುವ ಮೂಲಕ ಮಕ್ಕಳ ಜೀವ ಕಾಪಾಡುವ ಕೆಲಸ ಮಾಡಬೇಕಿದೆ. ಹೀಗಾಗಿ ಯಾರಾದರು ತೆರೆದ ಕೊಳವೆ ಬಾವಿ ಮುಚಿದರೆ ಅವರಿಗೆ 500 ರೂಪಾಯಿ ಪ್ರೋತ್ಸಾಹಧನ ನೀಡಲು ರೈತನೋರ್ವ ಮುಂದಾಗಿದ್ದಾರೆ.
ತೆರೆದ ಕೊಳವೆ ಬಾವಿ ಮುಚ್ಚಿ 500 ರೂಪಾಯಿ ಪಡೆಯಿರಿ
ಹೌದು ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ನಿವಾಸಿಯಾಗಿರುವ ರೈತ ಶಿವಣ್ಣ ಚಳ್ಳಕೇರಿ ಅನ್ನೋರು ರಾಜ್ಯದಲ್ಲಿ ಎಲ್ಲಿಯಾದರೂ ಕೂಡಾ ತೆರೆದ ಕೊಳವೆ ಬಾವಿಗಳು ಕಂಡರೆ, ಅವುಗಳನ್ನು ಮುಚ್ಚಿ. ಯಾರು ಮುಚ್ಚುತ್ತಾರೆ ಅವರಿಗೆ 500 ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅದಕ್ಕಾಗಿ ಒಂದು ಲಕ್ಷ ಹಣವನ್ನು ಬ್ಯಾಂಕ್ನಲ್ಲಿಡಲು ಮುಂದಾಗಿದ್ದು, ಸಾರ್ವಜನಿಕರು, ತೆರೆದ ಕೊಳವೆ ಬಾವಿ ಮುಚ್ಚಿ, ಅದರ ಪೋಟೋ, ಮತ್ತು ದೃಡಿಕರಣ ಪತ್ರ ನೀಡಿದರೆ ಅವರಿಗೆ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
2017 ರಲ್ಲಿ ಕೂಡಾ ಅಭಿಯಾನ ನಡೆಸಿದ್ದ ರೈತ ಶಿವಣ್ಣ
ಇನ್ನು ರೈತ ಶಿವಣ್ಣ, 2017 ರಲ್ಲಿಯೇ ಇಂತಹದೊಂದು ಅಭಿಯಾನವನ್ನು ಆರಂಭಿಸಿದ್ದರು. ಆಗ ಕೂಡಾ ಕಾವೇರಿ ಅನ್ನೋ ಬಾಲಕಿ, ತೆರೆದ ಕೊಳವೆ ಬಾವಿಗೆ ಬಿದ್ದು ಪ್ರಾಣ ಬಿಟ್ಟಿದ್ದಳು. ಆ ಘಟನೆ ನೋಡಿ ಮರುಗಿದ್ದ ಶಿವಣ್ಣ, ಇಂತಹದೊಂದು ಘಟನೆಗಳು ಮರುಕಳಿಸಬಾರದು ಅನ್ನೋ ಉದ್ದೇಶದಿಂದ, ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಿಯಾದರು ತೆರೆದ ಕೊಳವೆ ಬಾವಿ ಮುಚ್ಚಿದರೆ ಅವರಿಗೆ 500 ರೂಪಾಯಿ ಪ್ರೋತ್ಸಾಹಧನ ನೀಡೋದಾಗಿ ಘೋಷಣೆ ಮಾಡಿದ್ದರು. ಆಗ ಸ್ವತಃ ಅವರೇ ಅನೇಕ ಕಡೆ ಹೋಗಿ ತಮ್ಮ ದುಡ್ಡು ಖರ್ಚು ಮಾಡಿ, ಕೊಳವೆ ಬಾವಿಯನ್ನು ಮುಚ್ಚಿಸುವ ಕೆಲಸ ಮಾಡಿದ್ದರು. ನೂರಾರು ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಆಗ ಕೂಡಾ ಒಂದು ಲಕ್ಷ ಹಣವನ್ನು ಖರ್ಚು ಮಾಡಿದ್ದರು.
ಇದನ್ನೂ ಓದಿ: ಕೊಳವೆ ಬಾವಿಗೆ ಬಿದ್ದು ಬದುಕಿ ಬಂದ ಎರಡು ವರ್ಷದ ಸಾತ್ವಿಕ್ ಆರೋಗ್ಯ ಸ್ಥಿತಿ ಹೇಗಿದೆ?
ತೆರೆದ ಕೊಳವೆ ಬಾವಿಗಳನ್ನು ಮುಚ್ಚುವದರ ಜೊತೆಗೆ, ಜನರಿಗೆ ಜಾಗೃತಿ ಮೂಡಲಿ ಅನ್ನೋ ಉದ್ದೇಶದಿಂದ ಜಿಲ್ಲೆಯ ಹಲವಡೆ ತೆರೆದ ಕೊಳವೆ ಬಾವಿಗಳನ್ನು ಹೇಗೆ ಮುಚ್ಚುವದು, ಮುಚ್ಚದೆ ಇದ್ದರೆ ಯಾವ ರೀತಿಯ ಅವಘಡಗಳು ನಡೆಯುತ್ತವೆ ಅನ್ನೋದರ ಬಗ್ಗೆ ಬೀದಿ ನಾಟಕಗಳನ್ನು ಕೂಡಾ ಶಿವಣ್ಣ ಕಲಾತಂಡಗಳಿಂದ ಆಡಿಸಿದ್ದರು. ಶಿವಣ್ಣರ ಶ್ರಮದ ಫಲವಾಗಿ ನೂರಾರು ತೆರೆದ ಕೊಳವೆ ಬಾವಿಗಳನ್ನು ಅಂದು ಮುಚ್ಚುವ ಕೆಲಸವಾಗಿತ್ತು.
ಇದೀಗ ರಾಜ್ಯದಲ್ಲಿ ಮತ್ತೆ ತೆರೆದ ಕೊಳವೆ ಬಾವಿಗೆ ಮಗು ಬಿದ್ದಿರುವ ಘಟನೆ ನಡೆದಿದ್ದರಿಂದ, ಮತ್ತೆ ಅಭಿಯಾನವನ್ನು ಶಿವಣ್ಣ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ತಮ್ಮ ಕಣ್ಣಿಗೆ ಎಲ್ಲೆಯಾದರು ತೆರೆದ ಕೊಳವೆ ಬಾವಿ ಕಂಡರೆ ಅವುಗಳನ್ನು ಮುಚ್ಚುವ ಕೆಲಸ ಮಾಡಬೇಕು. ಜೊತೆಗೆ ರೈತರು ಕೂಡಾ ನಿರುಪಯೋಗಿ ಕೊಳವೆ ಬಾವಿಗಳನ್ನು ಮುಚ್ಚುವದರ ಮೂಲಕ ಮಕ್ಕಳ ಜೀವಗಳನ್ನು ಕಾಪಾಡೋ ಕೆಲಸ ಮಾಡೇಬೇಕು ಅಂತ ರೈತ ಶಿವಣ್ಣ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ