ವಿಜಯಪುರ: ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ರಕ್ಷಣೆ, ಫಲಿಸಿದ ಪ್ರಾರ್ಥನೆ

ಕೊನೆಗೂ ಮಗುವಿನ ಪೋಷಕರ, ನೂರಾರು ಮಂದಿಯ ಪ್ರಾರ್ಥನೆ ಫಲಿಸಿದೆ. ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಫಲಕೊಟ್ಟಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್​ನನ್ನು ರಕ್ಷಣೆ ಮಾಡಲಾಗಿದೆ.

ವಿಜಯಪುರ: ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ರಕ್ಷಣೆ, ಫಲಿಸಿದ ಪ್ರಾರ್ಥನೆ
ರಕ್ಷಣಾ ಕಾರ್ಯಾಚರಣೆಯ ಚಿತ್ರ. ಒಳಚಿತ್ರದಲ್ಲಿ ಮಗು ಸಾತ್ವಿಕ್
Follow us
| Updated By: ಗಣಪತಿ ಶರ್ಮ

Updated on:Apr 04, 2024 | 2:22 PM

ವಿಜಯಪುರ, ಏಪ್ರಿಲ್ 4: ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ (Lachyana) ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್​ನನ್ನು ಕೊನೆಗೂ ರಕ್ಷಣೆ ಮಾಡಲಾಗಿದೆ. ಸತತ 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ಮಗುವನ್ನು ರಕ್ಷಣೆ ಮಾಡಲಾಗಿದೆ. ಮಗುವಿನ ಪೋಷಕರಾದ ಸತೀಶ್ ಮತ್ತು ಪೂಜಾ ದಂಪತಿ ಹಾಗೂ ಸ್ಥಳೀಯರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಸಾತ್ವಿಕ್​ನನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ನಿರಂತರ ಕಾರ್ಯಾಚರಣೆ ನಡೆಸಿ ಮಗು ಸಾತ್ವಿಕ್​​​ನನ್ನು ರಕ್ಷಿಸಿದ ಸಿಬ್ಬಂದಿಯ ಬಗ್ಗೆ ಇದೀಗ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗುತ್ತಿದೆ. ಸಾತ್ವಿಕ್​​ನನ್ನು ತಕ್ಷಣವೇ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಎನ್​ಡಿಆರ್​ಎಫ್​ ತಂಡ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಇವರಿಗೆ ಬೆಳಗಾವಿಯಿಂದ ಬಂದಿದ್ದ ಶ್ರೀಶೈಲ್ ಚೌಗಲಾ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್​ಡಿಆರ್​ಎಫ್), ಸ್ಥಳೀಯ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಸಾಥ್ ನೀಡಿದರು.

ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪುತ್ತಿದ್ದಂತೆಯೇ ಆಂಬುಲೆನ್ಸ್​ ಸಿದ್ಧವಾಗಿ ಇರಿಸಲಾಗಿತ್ತು. ಮಗುವನ್ನು ಕೊಳವೆ ಬಾವಿಯಿಂದ ಹೊರ ತೆಗೆಯುತ್ತಿದ್ದಂತೆಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಂತಿಮ ಹಂತದ ಕಾರ್ಯಾಚರಣೆ ವೇಳೆ ಮಗು ಅಳುತ್ತಿರುವ ಶಬ್ದ ರಕ್ಷಣಾ ಸಿಬ್ಬಂದಿಗೆ ಕೇಳಿಸುತ್ತಿತ್ತು. ಯಂತ್ರಗಳ ಸದ್ದು ಹೆಚ್ಚಾದಂತೆ ಮಗು ಅಳುತ್ತಿರುವುದೂ ಹೆಚ್ಚಾಗಿತ್ತು ಎಂದು. ಮಗು ಚೀರಾಡುತ್ತಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ವಿಡಿಯೋ ನೋಡಿ: ಬೋರ್​​ವೆಲ್​ನಿಂದ ಮಗುವನ್ನು ಹೊರೆ ತೆಗೆಯುವ ರೋಚಕ ದೃಶ್ಯ ಇಲ್ಲಿದೆ ನೋಡಿ

ಇದಕ್ಕೂ ಮುನ್ನ ಸ್ಥಳಕ್ಕೆ ಬಂದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದರು. ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು.

ಲಚ್ಯಾಣದಲ್ಲಿ ಬುಧವಾರ ನಡೆದಿದ್ದೇನು?

ಲಚ್ಯಾಣ ಗ್ರಾಮದ ಜಮೀನಿನಲ್ಲಿ ಶಂಕರಪ್ಪ ಮುಜಗೊಂಡ ಎಂಬವರು ಮಂಗಳವಾರ ಕೊಳವೆ ಬಾವಿ ಕೊರೆಯಿಸಿದ್ದರು. ಸುಮಾರು 500 ಅಡಿ ಆಳ ಕೊರೆಸಲಾಗಿತ್ತು. ಆದರೆ, ನೀರು ಬಾರದ ಕಾರಣ ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಶಂಕರಪ್ಪ ಮುಜಗೊಂಡ ಮೊಮ್ಮಗ ಸಾತ್ವಿಕ್ ಬುಧವಾರ ಕೊಳವೆ ಬಾವಿಗೆ ಬಿದ್ದಿದ್ದಾನೆ. ಆತ ಸುಮಾರು 15ರಿಂದ 20 ಅಡಿ ಆಳದಲ್ಲಿ ಸಿಲುಕಿದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆ್ಯಕ್ಸಿಜನ್​​ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಘೋರ ದುರಂತ:ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ

ಇಂದಿನ ಪ್ರಕರಣಕ್ಕೂ ಮುಂಚೆ ಇಂತಹ ಎರಡು ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ನಡೆದಿದ್ದವು. 2008 ಮತ್ತು 2014ರಲ್ಲಿಕೊಳವೆ ಬಾವಿ ದುರಂತಗಳು ಸಂಭವಿಸಿದ್ದವು. 2008 ರಲ್ಲಿ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಕಾಂಚನಾ ಉರ್ಪ್ ಏಗವ್ವ ಎನ್ನುವ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದ್ರೆ, ಮಗು ಮೃತಪಟ್ಟಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Thu, 4 April 24