ಕೋಲಾರ: ರೈಲ್ವೆ ಸ್ಟೇಷನ್​ಗೆ ನುಗ್ಗಿ ಪ್ಲಾಟ್​ಪಾರ್ಮ್ ಮೇಲೆ ಬಂದ ಕಾರು! ತಪ್ಪಿದ ಭಾರಿ ಅನಾಹುತ

ಕೋಲಾರದ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಕುಡುಕ ಚಾಲಕನೊಬ್ಬ ಕಾರನ್ನು ರೈಲ್ವೆ ಸ್ಟೇಷನ್​ಗೆ ನುಗ್ಗಿಸಿದ ಘಟನೆ ಸಂಭವಿಸಿದೆ. ಸೀದಾ ರೈಲ್ವೆ ಸ್ಟೇಷನ್ ಒಳ ನುಗ್ಗಿದ ಕಾರು, ಪ್ಲಾಟ್ ಫಾರ್ಮ್ ಮೇಲೆ ಹೋಗಿ ನಿಂತಿದೆ. ಅದೃಷ್ಟವಶಾತ್, ಆ ಸಮಯದಲ್ಲಿ ಯಾವುದೇ ರೈಲು ಬಾರದ ಕಾರಣ ಸಂಭಾವ್ಯ ಭಾರಿ ದುರಂತ ತಪ್ಪಿದೆ.

ಕೋಲಾರ, ಫೆಬ್ರವರಿ 2: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರೈಲ್ವೆ ನಿಲ್ದಾಣದೊಳಕ್ಕೆ ಕಾರು ನುಗ್ಗಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಕಂಠಪೂರ್ತಿ ಮದ್ಯಪಾನ ಮಾಡಿದ್ದ ವ್ಯಕ್ತಿ ಕುಡಿತದ ಮತ್ತಿನಲ್ಲಿ ಮಾರುತಿ ಸ್ವಿಫ್ಟ್ ಡಿಸೈರ್​ ಕಾರನ್ನು ತಡರಾತ್ರಿ ರೈಲ್ವೆ ನಿಲ್ದಾಣದೊಳಕ್ಕೆ ನುಗ್ಗಿಸಿದ್ದಾನೆ. ಕಾರು, ರೈಲ್ವೇ ಟಿಕೆಟ್​ ಕೌಂಟರ್​ ಎದುರಲ್ಲೇ ಮೆಟ್ಟಿಲಗಳನ್ನು ಇಳಿದು ಸೀದಾ ರೈಲ್ವೆ ಪ್ಲಾಟ್ ಪಾರ್ಮ್ ಮೇಲೆ ಬಂದಿದೆ.

ಅಷ್ಟೊತ್ತಿಗೆ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ನಂತರ ಕಾರು ನೇರವಾಗಿ ಹೋಗಿ ರೈಲ್ವೇ ಟ್ರಾಕ್​ ಮೇಲೆ ನಿಂತಿದೆ. ಸಿನಿಮೀಯ ರೀತಿಯಲ್ಲಿ ಈ ಘಟನೆ ನಡೆದಿದ್ದು ಕಾರು ಟ್ರಾಕ್​ ಮೇಲೆ ಬಂದು ನಿಂತಿದ್ದನ್ನು ಕಂಡ ರೈಲ್ವೇ ಸಿಬ್ಬಂದಿ ಗಾಬರಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾ ಸಂಭವಿಸಿಲ್ಲ.

ಕುಡಿತದ ಮತ್ತಿನಲ್ಲಿ ಕಾರು ಚಲಾಯಿಸಿದ ರಾಕೇಶ್ ಎಂಬಾತ ಈ ಅವಾಂತರ ಸೃಷ್ಟಿಸಿದ್ದಾನೆ. ಕೂಡಲೇ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕಾರು ತೆರವುಗೊಳಿಸಿದ್ದಾರೆ.

ಸಾಕಷ್ಟು ರೈಲುಗಳ ಸಂಚರಿಸುವ ಜಂಕ್ಷನ್

ಟೇಕಲ್ ರೈಲು ನಿಲ್ದಾಣ ಸಾಕಷ್ಟು ರೈಲುಗಳು ಸಂಚರಿಸುವ ಹೊಂದಿರುವ ಜಂಕ್ಷನ್ ಆಗಿದ್ದು, ಒಂದು ವೇಳೆ ರೈಲು ಬಂದಿದ್ದರೆ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್, ಯಾವುದೇ ರೈಲು ಆ ಹೊತ್ತಿಗೆ ಬಾರದ ಕಾರಣ ಅಪಾಯ ತಪ್ಪಿದೆ.

ಇದನ್ನೂ ಓದಿ: ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು

ನಂತರ ಅಧಿಕಾರಿಗಳು ತಡರಾತ್ರಿಯಲ್ಲಿ ಜೆಸಿಬಿಯನ್ನು ಕರೆಸಿ ಕಾರನ್ನು ರೈಲ್ವೆ ಹಳಿಯಿಂದ ಹೊರ ತೆಗೆಸಿದ್ದಾರೆ. ಕಾರು ಮಾಲೀಕ ರಾಕೇಶ್​ನನ್ನು ದೇವನಗುಂದಿ ರೈಲ್ವೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ರಾಕೇಶ್​ನ ವೈದ್ಯಕೀಯ ತಪಾಸಣೆ ನಡೆಸಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೂಜಾಡುತ್ತಿದ್ದ ಐವರ ಬಂಧನ

ಕೋಲಾರದ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಅರಣ್ಯ ಪ್ರದೇಶದಲ್ಲಿ ಜೂಜಾಡುತ್ತಿದ್ದ ಐವರನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಮುನಿವೆಂಕಟರೆಡ್ಡಿ, ಮುರಳಿ, ಮಂಜು, ಶೇಖರ್, ಗಂಗುಳಪ್ಪ ಬಂಧಿತರು.

ಬಂಧಿತರಿಂದ ಮೊಬೈಲ್, 14 ಬೈಕ್​​ಗಳು, 35 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ