ವಿವಿಧ ಬೇಡಿಕೆ ಈಡೇರಿಕೆಗಾಗಿ ಇಂದು ಕೋಲಾರ, ಹಾಸನ ಬಂದ್; ಚಿನ್ನದ ನಾಡಲ್ಲಿ ಖಾಸಗಿ ಶಾಲೆಗಳಿಗೆ ರಜೆ

| Updated By: ಆಯೇಷಾ ಬಾನು

Updated on: Dec 16, 2022 | 7:26 AM

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಕೋಲಾರ ನಗರ ಬಂದ್​ಗೆ ಕರೆ ನೀಡಲಾಗಿದೆ. ಮತ್ತೊಂದೆಡೆ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಹಾಸನ ಜಿಲ್ಲೆ ಅರಸೀಕೆರೆ ಬಂದ್‌ಗೆ ಕರೆ ನೀಡಲಾಗಿದೆ.

ವಿವಿಧ ಬೇಡಿಕೆ ಈಡೇರಿಕೆಗಾಗಿ ಇಂದು ಕೋಲಾರ, ಹಾಸನ ಬಂದ್; ಚಿನ್ನದ ನಾಡಲ್ಲಿ ಖಾಸಗಿ ಶಾಲೆಗಳಿಗೆ ರಜೆ
ಕೋಲಾರದಲ್ಲಿ ಪ್ರಗತಿಪರ ಸಂಘಟನೆ ಮುಖಂಡರು ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ
Follow us on

ಕೋಲಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು(ಡಿ.16) ಕೋಲಾರ ನಗರ ಬಂದ್​ಗೆ(Kolar Bandh) ಕರೆ ನೀಡಿವೆ. ರಸ್ತೆ, ಬೀದಿ ದೀಪ, ಕಸ ವಿಲೇವಾರಿ, ಬೀದಿನಾಯಿ ಹಾವಳಿ ಸೇರಿ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕೋಲಾರ ಬಂದ್ ಮಾಡಲಾಗುತ್ತಿದೆ. ಸಮಸ್ಯೆಗಳಿಗೆ ಜಿಲ್ಲಾಡಳಿತ, ಸರ್ಕಾರ ಸ್ಪಂದಿಸದ ಹಿನ್ನೆಲೆ ಬಂದ್ ಮಾಡಲಾಗುತ್ತಿದ್ದು ಇದಕ್ಕೆ ಬೆಂಬಲಿಸುವಂತೆ ಆಗ್ರಹಿಸಿ ಬೈಕ್​ ರ‍್ಯಾಲಿ ನಡೆಯಲಿದೆ. ಸದ್ಯ ನಗರದಾದ್ಯಂತ ಮುನ್ನೆಚ್ಚರಿಕೆಯಿಂದ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಬಲವಂತವಾಗಿ ಬಂದ್​ ಮಾಡದಂತೆ ವಿವಿಧ ಸಂಘಟನೆಗಳಿಗೆ ಎಸ್‌ಪಿ ದೇವರಾಜ್‌ ಖಡಕ್​​ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

ಇಂದು ಕೋಲಾರ ನಗರದ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಟಿವಿ9ಗೆ ಖಾಸಗಿ ಶಾಲೆಗಳ ಸಂಘದ ಜಿಲ್ಲಾಧ್ಯಕ್ಷ ಸದಾನಂದ್ ಮಾಹಿತಿ ನೀಡಿದ್ದಾರೆ. ಆದ್ರೆ ನಗರದಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ.

ಇನ್ನು ವಿವಿಧ ಸಂಘಟನೆಗಳ ಹೋರಾಟಗಾರರು ಬೆಳ್ಳಂಬೆಳಿಗ್ಗೆ ರಸ್ತೆಗಿಳಿದಿದ್ದಾರೆ. ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಗತಿಪರ ಸಂಘಟನೆ ಮುಖಂಡರು ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಬಂದ್ ಹಿನ್ನಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣ: ಸೌಭಾಗ್ಯ ಬಸವರಾಜನ್ ಅರೆಸ್ಟ್

ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಅರಸೀಕೆರೆ ಬಂದ್

ಇನ್ನು ಮತ್ತೊಂದೆಡೆ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಹಾಸನ ಜಿಲ್ಲೆ ಅರಸೀಕೆರೆ ಬಂದ್‌ಗೆ ಶಾಸಕ ಶಿವಲಿಂಗೇಗೌಡ ಕರೆ ನೀಡಿದ್ದಾರೆ. ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಂದ ಅರಸೀಕೆರೆ ಪಟ್ಟಣದಲ್ಲಿ ಇಂದು ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು ಅರಸೀಕೆರೆ ಬಂದ್​​ಗೆ ಸಹಕಾರ ನೀಡುವಂತೆ ಶಿವಲಿಂಗೇಗೌಡ ಮನವಿ ಮಾಡಿದ್ದಾರೆ.

ಕೊಬ್ಬರಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ಇಂದು ಅರಸೀಕೆರೆ ಬಂದ್​ಗೆ ಕರೆ ನೀಡಲಾಗಿದ್ದು ಹೋಟೆಲ್, ಎಪಿಎಂಸಿ ಮಾರ್ಕೆಟ್, ಅಂಗಡಿ ಮುಂಗಟ್ಟು ಬಂದ್​ಗೆ ಮನವಿ ಮಾಡಿದ್ದಾರೆ. ಹಾಗೂ ಪ್ರತಿಭಟನೆ ವೇಳೆ ವೃತ್ತಗಳಲ್ಲಿ ತೆಂಗಿನಕಾಯಿ ಹಂಚಲು ನಿರ್ಧಾರ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:22 am, Fri, 16 December 22