ಕೋಲಾರ: ಅವರೆಲ್ಲಾ ಒಂದೇ ವಯಸ್ಸಿನ ಸ್ನೇಹಿತರು, ಬೇರೆ ಕೆಲಸ ಮಾಡಿಕೊಂಡಿದ್ದರೂ ಆಗಾಗ ಸೇರಿ ತಮ್ಮ ಕಷ್ಟಸುಖ ಮಾತನಾಡಿಕೊಳ್ಳುತ್ತಿದ್ದಂತವರು. ಆದರೆ ಈ ಸ್ನೇಹಿತರ ನಡುವೆ ಬಂದ ಮೊಬೈಲ್ ವಿವಾದ ಇಂದು ಒಬ್ಬನ ಪ್ರಾಣ ತೆಗೆಯುವುದರ ಜತೆಗೆ ಉಳಿದವರ ಮೇಲೆ ಕೊಲೆಯ ಆರೋಪ ಹೊರಿಸಿದೆ. ಅಪರಾಧ ಜಗತ್ತಿನ ಕೋಲಾರದ ಸುದ್ದಿಯೊಂದು ಇಲ್ಲಿದೆ.
ಕೋಲಾರ ತಾಲ್ಲೂಕು ನರಸಾಪುರ ಕುರ್ಕಿ ಗ್ರಾಮದಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಚಂದ್ರು ಎಂಬಾತ ಊರ ಹೊರಗಿನ ನಿರ್ಜನ ಪ್ರದೇಶದಲ್ಲಿ ಶನಿವಾರ ಕೊಲೆಯಾಗಿ ಪತ್ತೆಯಾಗಿದ್ದಾನೆ. ಬೆಳಿಗ್ಗೆ ಹೊತ್ತಿಗೆ ಗ್ರಾಮದಲ್ಲಿ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಎಲ್ಲರೂ ಓಡೋಡಿ ಬಂದು ಕೊಲೆಯಾಗಿ ಬಿದ್ದಿದ್ದವನನ್ನು ನೋಡಿಕೊಂಡು ಹೋಗತೊಡಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಿದ್ದ ವೇಮಗಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದರು. ಈವೇಳೆ ಇದೊಂದು ಕೊಲೆ ಅನ್ನೋದು ಗೊತ್ತಾಗಿತ್ತು ಆದರೆ ಕೊಲೆಗೆ ಕಾರಣ ಏನು ಅನ್ನೋದನ್ನ ತನಿಖೆ ಮಾಡಲು ಹೊರಟ ಪೊಲೀಸರಿಗೆ ಕೊಲೆಗೆ ಒಂದು ಮೊಬೈಲ್ ಕಾರಣ ಎಂದು.
ಡ್ರೈವರ್ ಕೆಲಸ ಮಾಡಿಕೊಂಡಿದ್ದ ಚಂದ್ರು ಕೆಲವು ದಿನಗಳ ಹಿಂದೆ ತನ್ನ ಮೊಬೈಲ್ನ್ನು ಲಾರಿಯಲ್ಲಿ ಚಾರ್ಜಿಂಗ್ ಹಾಕಿ ಮಲಗಿದ್ದ ವೇಳೆ ಕಳ್ಳತನವಾಗಿತ್ತು. ಹದಿನೇಳು ಸಾವಿರ ರೂಪಾಯಿಯ ಕಳುವಾಗಿದ್ದ ಮೊಬೈಲ್ ಕೆಲವು ದಿನಗಳ ನಂತರ ಸಿಕ್ಕಿತ್ತು, ಕಳುವಾಗಿದ್ದ ಮೊಬೈಲನ್ನು ಅವನ ಸ್ನೇಹಿತ ಮುರುಳಿ ಎಂಬಾತ ತಂದುಕೊಟ್ಟಿದ್ದ. ಈವೇಳೆ ಮೊಬೈಲ್ ಕಳುವಾಗಿದ್ದಕ್ಕೆ ಚಂದ್ರು ಸ್ನೇಹಿತರ ಮೇಲೆ ಗಲಾಟೆ ಮಾಡಿದ್ದ ಕೆಟ್ಟ ಭಾಷೆಯಲ್ಲಿ ಬೈಯುತ್ತಾ ಜಗಳ ಮಾಡಿದ್ದ. ಮೊಬೈಲ್ನ್ನು ಕದ್ದಿದ್ದು ಆನಂದ್ ಅನ್ನೋದು ಚಂದ್ರುವಿಗೆ ಗೊತ್ತಾಗಿತ್ತು. ಕದ್ದ ಮೊಬೈಲ್ ವಾಪಸ್ಸು ಕೊಟ್ಟ ನಂತರವೂ ಚಂದ್ರು ಗಲಾಟೆ ಮಾಡಿದ್ದಕ್ಕಾಗಿ ಆನಂದ್ ತನ್ನ ಸ್ನೇಹಿತರನ್ನು ಕರೆಸಿ ಚಂದ್ರುವಿಗೆ ಹೊಡೆಸಿದ್ದ. ಇದು ಈ ಸ್ನೇಹಿತರುಗಳ ನಡುವಿನ ಮಾರಾಮಾರಿಗೆ ಕಾರಣವಾಗಿ ಕಳೆದೊಂದು ವಾರದಿಂದ ಇವರುಗಳ ನಡುವಿನ ದೊಡ್ಡ ಮನಸ್ತಾಪಕ್ಕೆ ಕಾರಣವಾಗಿತ್ತು.
ಅಲ್ಲದೆ ಮೊಬೈಲ್ನಲ್ಲಿದ್ದ ಡೇಟಾ ಎಲ್ಲಾ ಡಿಲೀಟ್ ಆಗಿದೆ ಅದನ್ನು ರಿಕವರಿ ಮಾಡಿಸೋಕೆ ಮೂರುವರೆ ಸಾವಿರ ರೂಪಾಯಿ ಖರ್ಚಾಗುತ್ತದೆ ಅದನ್ನು ಕೊಡಿಸು ಎಂದು ಚಂದ್ರು ಸ್ನೇಹಿತ ಮುರಳಿ ಎಂಬಾತನ ಬಳಿ ಕೇಳಿದಾಗ ಮುರಳಿ ಒಂದಊವರೆ ಸಾವಿರವನ್ನು ಮೊಬೈಲ್ ಕಳ್ಳತನ ಮಾಡಿದ್ದ ಆನಂದ್ ಕಡೆಯಿಂದ ಕೊಡಿಸಿ ಸಮಸ್ಯೆ ಬಗೆಹರಿಸಿದ್ದ. ಆದರೆ ಇದಾದ ಮೇಲೂ ಆನಂದ್ ಅದನ್ನು ಸೇಡಾಗಿ ಸ್ವೀಕರಿಸಿ ಶುಕ್ರವಾರವೂ ಕೆಲವು ಹುಡುಗರನ್ನು ಕರೆದುಕೊಂಡು ಬಂದು ಚಂದ್ರುವಿಗೆ ಹೊಡೆಸಿದ್ದ ಆಗ ಚಂದ್ರು ತನ್ನ ಅಣ್ಣ ಹೀರೇಗೌಡನಿಗೆ ಕರೆ ಮಾಡಿ ತಿಳಿಸಿದ್ದ. ಈವೇಳೆ ತಾನು ಬಂದು ಸಮಸ್ಯೆ ಬಗೆಹರಿಸುವುದಾಗಿ ಗಲಾಟೆ ಮಾಡಿಕೊಳ್ಳದಂತೆ ತಿಳಿಸಿದ್ದ. ಆದರೆ ಕಳೆದ ರಾತ್ರಿ ಅವನನ್ನು ಕೊಲೆ ಮಾಡಿ ಊರ ಹೊರಗೆ ಬಿಸಾಡಿದ್ದಾರೆ ಎಂದು ಹೀರೇಗೌಡ ವೇಮಗಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಶುಕ್ರವಾರ ರಾತ್ರಿ ಹೋದವನು ಶನಿವಾರ ಹೆಣವಾಗಿ ಪತ್ತೆ
ಸದ್ಯ ಐದು ಸ್ನೇಹಿತರ ನಡುವ ನಡುವೆ ಮನಸ್ಥಾಪಕ್ಕೆ ಕಾರಣವಾಗಿದ್ದ ಮೊಬೈಲ್ ಕಳ್ಳತನ ವಿಚಾರ ದೊಡ್ಡದಾಗಿತ್ತು, ಇದೇ ವಿಚಾರವಾಗಿ ಒಂದು ವಾರದಲ್ಲಿ ನಾಲ್ಕೈದು ಬಾರಿ ಜಗಳ, ಗಲಾಟೆಗಳು ನಡೆದಿದ್ದವು. ಕೊಲೆಯಾದ ಚಂದ್ರು ಹಾಗೂ ಕುರ್ಕಿ ಗ್ರಾಮದ ಮುರಳಿ, ಆನಂದ್, ರಾಜೇಶ್ ಮತ್ತು ಬೆಳಮಾರನಹಳ್ಳಿ ಗ್ರಾಮದ ಶ್ರೀನಾಥ್, ಭಾಸ್ಕರ್ ನಡುವೆ ಶೀತಲ ಸಮರ ನಡೆಯುತ್ತಲೇ ಇತ್ತು. ಚಂದ್ರುವಿಗೆ ಆನಂದ್ ಹಾಗೂ ಕೆಲವರು ಕೋಲಾರ ಮತ್ತು ಕೆಂದಟ್ಟಿ ಗ್ರಾಮದ ಬಳಿಯೂ ಹೊಡೆದಿದ್ದಾರೆ. ಈ ವಿಚಾರ ಚಂದ್ರು ಅಣ್ಣನಿಗೆ ತಿಳಿದು ನಾನು ಬಂದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಆದರೂ ಶುಕ್ರವಾರ ರಾತ್ರಿ ಚಂದ್ರು ಹೊರಗೆ ಹೋಗಿ ಬರ್ತೀನಿ ಎಂದು ಹೋದವನು ಶನಿವಾರ ಬೆಳಿಗ್ಗೆ ಊರು ಹೊರಗೆ ಕೊಲೆಯಾಗಿ ಪತ್ತೆಯಾಗಿದ್ದ.
ಸ್ನೇಹಿತರ ಕರೆದುಕೊಂಡು ಹೋಗಿ ಕಥೆ ಮುಗಿಸಿದ್ದರಾ?
ಈ ಮೊಬೈಲ್ ವಿಚಾರವಾಗ ಗಲಾಟೆ ನಡೆಯುತ್ತಿರುವಾಗಲೇ ಶುಕ್ರವಾರ ರಾತ್ರಿ ಚಂದ್ರುವನ್ನು ಕೆಲವು ಸ್ನೇಹಿತರು ಕುಡಿಯಲು ಕರೆದುಕೊಂಡು ಹೋಗಿದ್ದಾರೆ. ಹೋದವರು ಎಲ್ಲರೂ ರಾತ್ರಿಯಲ್ಲಿ ಚೆನ್ನಾಗಿ ಕುಡಿದಿದ್ದಾರೆ. ನಂತರ ಅಲ್ಲಿದ್ದವರ ನಡುವೆ ಹೊಡೆದಾಟ ನಡೆದಿದೆ. ಚಂದ್ರುವಿಗೆ ಕಣ್ಣಿನ ಹಾಗೂ ಮೂಗಿನ ಭಾಗಕ್ಕೆ ಹೊಡೆದಿದ್ದಾರೆ. ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ನಂತರ ಅವನ ಶವವನ್ನು ಬೈಕ್ ಮೇಲೇ ಹಾಕಿಕೊಂಡು ತಂದು ಊರ ಹೊರಗೆ ಬಿಸಾಡಿ ಹೋಗಿದ್ದಾರೆ. ಬೈಕ್ ನಲ್ಲಿ ಶವವನ್ನು ಎತ್ತಾಕಿಕೊಂಡು ಬರುವಾಗ ಅವನ ಕಾಲು ನೆಲಕ್ಕೆ ತಗುಲಿ, ಉಜ್ಜಿಕೊಂಡು ಬಂದು ಕಾಲಿನ ಮೂರು ಬೆರಳುಗಳು ತುಂಡಾಗಿ ಉದುರಿಹೋಗಿದೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆಯಾದ ರಾತ್ರಿ ಚಂದ್ರು ಜೊತೆಗೆ ಇದ್ದವರ್ಯಾರು, ಕೊಲೆ ಮಾಡಿದ್ಯಾರು ಅನ್ನೋದರ ಕುರಿತು ತನಿಖೆ ನಡೆಸಲಾಗುತ್ತಿದೆ.
ಕೊಲೆ ಪ್ರಕರಣದ ಆರೋಪಿಗಳೆಲ್ಲರೂ ನಾಪತ್ತೆ!
ಸದ್ಯ ಚಂದ್ರು ಕೊಲೆ ಪ್ರಕರಣ ಬಯಲಾಗುತ್ತಿದ್ದಂತೆ ಆತನ ಸ್ನೇಹಿತರು ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಮುರಳಿ, ಆನಂದ್, ಶ್ರೀನಾಥ್, ಭಾಸ್ಕರ್, ಶ್ರೀನಿವಾಸ್, ರಾಜೇಶ್ ತಮ್ಮ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದು,ಇವರೆಲ್ಲರ ಹುಡುಕಾಟದಲ್ಲಿ ವೇಮಗಲ್ ಪೊಲೀಸರು ತೊಡಗಿದ್ದಾರೆ. ಅಷ್ಟೇ ಅಲ್ಲದೆ ಇದು ಕೇವಲ ಮೊಬೈಲ್ ವಿಚಾರವಾಗಿ ನಡೆದಿರುವ ಕೊಲೆಯಲ್ಲ ಇದರ ಹಿಂದೆ ಬೇರೆಯದ್ದೇ ಕಾರಣ ಇಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:
ಅಪೌಷ್ಠಿಕತೆ ಇರುವ ಮಕ್ಕಳ ದತ್ತು ಸ್ವೀಕಾರ; ಕೋಲಾರದಲ್ಲಿ ಮಹತ್ವದ ಅಭಿಯಾನ
100 ಸಿಸಿ ಬೈಕ್ನಲ್ಲಿ ಕಾಶ್ಮೀರಕ್ಕೆ ರೈಡ್; ಧಾರವಾಡದ ಯುವಕನಿಂದ ಕೊರೊನಾ ಜಾಗೃತಿ ಅಭಿಯಾನ