ಅಪೌಷ್ಠಿಕತೆ ಇರುವ ಮಕ್ಕಳ ದತ್ತು ಸ್ವೀಕಾರ; ಕೋಲಾರದಲ್ಲಿ ಮಹತ್ವದ ಅಭಿಯಾನ

ಕೋಲಾರ ಜಿಲ್ಲೆಯಲ್ಲಿ ಒಟ್ಟು 2,080 ಅಂಗನವಾಡಿ ಕೇಂದ್ರಗಳಿವೆ. ಈ ಅಂಗನವಾಡಿ ಕೇಂದ್ರಗಳಿಗೆ ಬರುವ ಹುಟ್ಟಿನಿಂದ 6 ವರ್ಷದವರೆಗಿನ 97,317 ಮಕ್ಕಳ ತೂಕ ಮತ್ತು ಅವುಗಳ ಬೆಳವಣಿಗೆ ಸಂಬಂಧ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ.

ಅಪೌಷ್ಠಿಕತೆ ಇರುವ ಮಕ್ಕಳ ದತ್ತು ಸ್ವೀಕಾರ; ಕೋಲಾರದಲ್ಲಿ ಮಹತ್ವದ ಅಭಿಯಾನ
ಸಾಂಕೇತಿಕ ಚಿತ್ರ

ಕೋಲಾರ: ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 167 ಮಕ್ಕಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ಹಾಗೂ ಮಹತ್ವಪೂರ್ಣ ಹೆಜ್ಜೆಯಿರಿಸಿದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಅಪೌಷ್ಠಿಕತೆಯಿಂದ ಹೊರತರಲು ಆ ಮಕ್ಕಳನ್ನು ಕೆಲ ತಿಂಗಳು ದತ್ತು ಪಡೆಯುವ ಮೂಲಕ ಮಕ್ಕಳ ಆರೋಗ್ಯ ಸುಧಾರಣೆಗೆ ಪ್ಲಾನ್ ಮಾಡಿದೆ. 6 ವರ್ಷದೊಳಗಿನ ಮಕ್ಕಳ ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಅಪೌಷ್ಟಿಕತೆಯು ಪ್ರಮುಖ ಕಾರಣ. ತೀವ್ರ ಅಪೌಷ್ಟಿಕತೆ ಅಂದರೆ ಸ್ಯಾಮ್ ಮಕ್ಕಳು (ಸಿವಿಯರ್‌ ಅಕ್ಯೂಟ್‌ ಮಾಲ್‌ನ್ಯೂಟ್ರಿಷನ್‌)ಗೆ ತುತ್ತಾಗಿರುವ ಮಕ್ಕಳನ್ನು ವೈದ್ಯಕೀಯವಾಗಿ ಆರೋಗ್ಯ ಕಾರ್ಯಕರ್ತರ ಪರಿಭಾಷೆಯಲ್ಲಿ ಸಾವಿನತ್ತ ಹೆಜ್ಜೆ ಹಾಕಿರುವ ಮಕ್ಕಳೆಂದೇ ಪರಿಗಣಿಸಲಾಗುತ್ತದೆ.

ಅಪೌಷ್ಠಿಕ ಮಕ್ಕಳ ಗುರುತಿನ ಮಾನದಂಡಗಳಿವು
ಕೋಲಾರ ಜಿಲ್ಲೆಯಲ್ಲಿ ಒಟ್ಟು 2,080 ಅಂಗನವಾಡಿ ಕೇಂದ್ರಗಳಿವೆ. ಈ ಅಂಗನವಾಡಿ ಕೇಂದ್ರಗಳಿಗೆ ಬರುವ ಹುಟ್ಟಿನಿಂದ 6 ವರ್ಷದವರೆಗಿನ 97,317 ಮಕ್ಕಳ ತೂಕ ಮತ್ತು ಅವುಗಳ ಬೆಳವಣಿಗೆ ಸಂಬಂಧ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಯೂಹೆಚ್ಓ) ನೀಡಿರುವ ಮಾರ್ಗಸೂಚಿ ಪ್ರಕಾರ ಮಕ್ಕಳ ವಯಸ್ಸು ಮತ್ತು ತೂಕದ ಆಧಾರದ ಮೇಲೆ ಬೆಳವಣಿಗೆಯನ್ನು ಗ್ರೇಡ್ ಆಧಾರದಲ್ಲಿ ಗುರುತಿಸಲಾಗುತ್ತದೆ. ಅದರ ಪ್ರಕಾರ ಸಾಮಾನ್ಯ ಅಪೌಷ್ಠಿಕ ಮಕ್ಕಳು, ಸಾಧಾರಣ ಅಪೌಷ್ಠಿಕ ಮಕ್ಕಳು ಮತ್ತು ತೀವ್ರ ಹಾಗೂ ಕಡಿಮೆ ತೂಕ ಹೊಂದಿರುವ ತೀವ್ರ ಅಪೌಷ್ಠಿಕ ಮಕ್ಕಳೆಂದು ನಿರ್ಧರಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಸದ್ಯ ಸಾಧಾರಣ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 3,714 ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 167 ಇದ್ದು ಅದರಲ್ಲಿ 107 ಹೆಣ್ಣು ಹಾಗೂ 60 ಗಂಡು ಮಕ್ಕಳಿದ್ದಾರೆ,

ಅಪೌಷ್ಠಿಕತೆ ಯಾವ ಮಕ್ಕಳಲ್ಲಿ?
ಸಮೀಕ್ಷೆ ಪ್ರಕಾರ ಬಡವರು, ಮಧ್ಯಮ ವರ್ಗದವರು ಮತ್ತು ಮೇಲ್ವರ್ಗದ ಕುಟುಂಬಗಳು ಗಂಡು ಹಾಗೂ ಹೆಣ್ಣು ಹೀಗೆ ಎಲ್ಲಾ ವರ್ಗದ ಮಕ್ಕಳಲ್ಲೂ ಅಪೌಷ್ಟಿಕತೆ ಕಾಣಿಸಿಕೊಂಡಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಹೆಚ್ಚಿನ ಅಪೌಷ್ಟಿಕತೆ ಕಂಡುಬರುತ್ತಿದೆ. ಈ ಮಕ್ಕಳಲ್ಲಿ ಅಂಗವೈಕಲ್ಯ, ಕಡಿಮೆ ಬುದ್ಧಿಶಕ್ತಿ, ಕುರುಡುತನ, ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡು ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿರುತ್ತದೆ.

ಅಪೌಷ್ಠಿಕ ಮಕ್ಕಳನ್ನು ದತ್ತು ಪಡೆಯುವವರು ಯಾರು, ನಿರ್ವಹಣೆ ಹೇಗೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ದತ್ತು ಪಡೆದು ವಿವಿಧ ಖಾಸಗಿ ವ್ಯಕ್ತಿಗಳು, ಸಂಘ ಸಂಸ್ಥೆಗಳು, ಅಥವ ಕೈಗಾರಿಕೆಗಳು, ಟ್ರಸ್ಟ್​ಗಳ ಹಣಕಾಸಿನ ನೆರವಿನೊಂದಿಗೆ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಔಷಧಗಳನ್ನು ಒದಗಿಸಬೇಕು. ಮಕ್ಕಳನ್ನು ದತ್ತು ಪಡೆದ ಅಧಿಕಾರಿಗಳು ಮಕ್ಕಳಿಗೆ ನೀಡುವ ಔಷಧ ಹಾಗೂ ಆಹಾರ ನೀಡುವ ಕುರಿತು ಮೇಲ್ವಿಚಾರಣೆ ನಡೆಸಬೇಕು ಇದು ಮಕ್ಕಳನ್ನು ದತ್ತು ಪಡೆದ ಅಧಿಕಾರಿಗಳ ಜವಾಬ್ದಾರಿ. ಒಮ್ಮೆ ದತ್ತು ಪಡೆದ ಮಕ್ಕಳು ಅಪೌಷ್ಠಿಕತೆಯಿಂದ ಹೊರ ಬರುವವರೆಗೆ ಅಧಿಕಾರಿಗಳೇ ಮಗುವಿನ ಕುಟುಂಬಸ್ಥರ ಜೊತೆಗೆ ಸಂಪರ್ಕದಲ್ಲಿದ್ದು ಮೇಲ್ವಿಚಾರಣೆ ವಹಿಸಬೇಕು. ಅದರ ಜೊತೆಗೆ ಈಗಾಗಲೇ ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್ ಅವರ ಮನವಿಗೆ ಸ್ಪಂದಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದು ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುತ್ತಿದೆ. ಅದರ ಜೊತೆಗೆ ಬೇರೆ ಖಾಸಗಿ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆಡಳಿತ ಮಂಡಳಿಯ ಅನುಮತಿ ಸಿಕ್ಕರೆ ಮತ್ತಷ್ಟು ನೆರವು ಸಿಗುವ ಸಾಧ್ಯತೆ ಇದೆ.

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದತ್ತು ನೀಡಲಾಗಿದೆ. ಈ ಮಕ್ಕಳ ಆರೋಗ್ಯದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು, ಪೌಷ್ಟಿಕ ಆಹಾರ ಒದಗಿಸಲು ಕೈಗಾರಿಕೆಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ ನೆರವು ಕೋರಲಾಗಿದೆ ನಾವು ನಿರೀಕ್ಷಿಸಿದಂತೆ ನೆರವು ಸಿಕ್ಕರೆ ಜಿಲ್ಲೆಯನ್ನು ಅಪೌಷ್ಠಿಕ ಮುಕ್ತ ಜಿಲ್ಲೆಯನ್ನಾಗಿ ಮಾಡುವ ವಿಶ್ವಾಸ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪಾಲಿ ಅವರ ಮಾತು.

Read Full Article

Click on your DTH Provider to Add TV9 Kannada