ಕೋಲಾರ: ಕೋಲಾರ ಡಿಸಿಸಿ ಬ್ಯಾಂಕ್ನಲ್ಲಿ ಬಹುದೊಡ್ಡ ಅವ್ಯವಹಾರ ನಡೆದಿದೆ ಅನ್ನೋದು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಗಂಭೀರ ಆರೋಪ. ಸಚಿವರು, ಸಂಸದರು, ಸೇರಿದಂತೆ ಹಲವು ದೊಡ್ಡ ದೊಡ್ಡ ನಾಯಕರೇ ವೇದಿಕೆಗಳಲ್ಲಿ ಈ ಬಗ್ಗೆ ಬಾಷಣ ಮಾಡುತ್ತಿದ್ದಾರೆ. ಆದರೆ ಹಗರಣ ಬಯಲಿಗೆ ಬರದಂತೆ ತಡೆಯುತ್ತಿದ್ದು, ಸಿದ್ದರಾಮಯ್ಯ (Siddaramaiah) ಡಿಸಿಸಿ ಬ್ಯಾಂಕ್ (DCC Bank) ಹಗರಣದ ಪಿತಾಮಹನಾಗಿದ್ದಾರೆ ಎಂದು ವರ್ತೂರ್ ಪ್ರಕಾಶ್ (Varthur Prakash) ಆರೋಪಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಂದರೆ ಡಿಸಿಸಿ ಬ್ಯಾಂಕ್ ದಿವಾಳಿಯಾಗಿ ಹೋಗಿತ್ತು ಆದರೆ 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆದ ನಂತರ ವಿಶೇಷ ಅನುಧಾನ ನೀಡುವ ಮೂಲಕ ಕೋಲಾರ ಡಿಸಿಸಿ ಬ್ಯಾಂಕ್ಗೆ ಮರುಜೀವ ನೀಡಲಾಯಿತು. ಇದಾದ ನಂತರ ಕಳೆದ 9 ವರ್ಷಗಳಿಂದ ಕೋಲಾರ ಡಿಸಿಸಿ ಬ್ಯಾಂಕ್ ರೈತರು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ನೀಡುವ ಮೂಲಕ ಸಾಕಷ್ಟು ಹೆಸರು ಮಾಡಿತ್ತು. ಆದರೆ ಕಾಲ ಕ್ರಮೇಣ ಅಷ್ಟೇ ಭ್ರಸ್ಟಾಚಾರದ ಆರೋಪಗಳು ಡಿಸಿಸಿ ಬ್ಯಾಂಕ್ ವಿರುದ್ದ ಕೇಳಿ ಬಂದಿದೆ. ಅದರಲ್ಲೂ ಕಳೆದ 9 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಬ್ಯಾಲಹಳ್ಳಿ ಗೋವಿಂದಗೌಡ ಅವರ ವಿರುದ್ಧವೂ ಕೂಡಾ ನೂರಾರು ಕೋಟಿ ರೂಪಾಯಿ ಅವ್ಯವಹಾರ ಹಾಗೂ ಶೂನ್ಯ ಬಡ್ಡಿದರದಲ್ಲಿ ಮಹಿಳಾ ಸ್ವಶಕ್ತಿ ಸಹಾಯ ಗುಂಪುಗಳಿಗೆ ನೀಡುವ ಸಾಲದ ಬಡ್ಡಿ ಕ್ಲೈಮ್ ವಿಚಾರದಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಇನ್ನು ಪ್ರಮುಖವಾಗಿ ಕೋಲಾರ ಜಿಲ್ಲೆಯ ಕಾಂಗ್ರೇಸ್ ಶಾಸಕರಾದ ರಮೇಶ್ ಕುಮಾರ್, ಎಸ್.ಎನ್. ನಾರಾಯಣಸ್ವಾಮಿ, ಅನಿಲ್ ಕುಮಾರ್, ಶ್ರೀನಿವಾಸಗೌಡ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರುಗಳಿಗೆ ಕೋಟ್ಯಾಂತರ ರೂಪಾಯಿ ಸಾಲದ ರೂಪದಲ್ಲಿ ಹಣ ನೀಡಲಾಗಿದೆ. ಇದರಲ್ಲೂ ಕೂಡ ಕೋಟಿ ಕೋಟಿ ಹಣ ಅವ್ಯವಹಾರ ನಡೆದಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಹೀಗೆ ಕಾಂಗ್ರೆಸ್ ಶಾಸಕರುಗಳು ಹಾಗೂ ಕಾಂಗ್ರೆಸ್ ಮುಖಂಡರುಗಳು ಸಾಲ ಪಡೆದಿರುವ ಕಾರಣದಿಂದಲೇ ಅವರೆಲ್ಲರೂ ಡಿಸಿಸಿ ಬ್ಯಾಂಕ್ ಹಗರಣಗಳ ಬೆನ್ನೆಲುಬಾಗಿ ನಿಂತು ಬ್ಯಾಂಕ್ ಹಗರಣ ಬಯಲಿಗೆ ಬಾರದಂತೆ ಕಾಪಾಡುತ್ತಿದ್ದಾರೆ ಅನ್ನೋದು ವರ್ತೂರ್ ಪ್ರಕಾಶ್ ಆರೋಪ.
ಇನ್ನು ಡಿಸಿಸಿ ಬ್ಯಾಂಕ್ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸರ್ಕಾರದಿಂದ ನೀಡುವ ಬಡ್ಡಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಜೊತೆಗೆ ನಕಲಿ ಸ್ವಸಹಾಯ ಗುಂಪುಗಳನ್ನು ಸೃಷ್ಟಿಮಾಡಿಕೊಂಡು ಅದರ ಹೆಸರಲ್ಲಿ ಬ್ಯಾಂಕ್ನ ಅಧ್ಯಕ್ಷರುಗಳು ಹಾಗೂ ಕೆಲವು ಕಾಂಗ್ರೆಸ್ ಶಾಸಕರುಗಳು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರ ಹಿಂಬಾಲಕರು ಸಾಲದ ಹೆಸರಲ್ಲಿ ಹಣ ಪಡೆದುಕೊಂಡು ತಮ್ಮ ಇಚ್ಚಾನುಸಾರ ಖರ್ಚು ಮಾಡುತ್ತಿದ್ದಾರೆ. ಅದರ ಜೊತೆಗೆ ಸರ್ಕಾರ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಸಂಘಗಳಿಗೆ ನೀಡುವ ಬಡ್ಡಿ ಕ್ಲೈಮ್ ಹಣ ಕೂಡಾ ಗುಳುಂ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇನ್ನು ಈ ಬಗ್ಗೆ ಬಡ್ಡಿ ಕ್ಲೈಮ್ ವಿಚಾರವಾಗಿ ನಡೆದಿರುವ ಅವ್ಯವಹಾರಗಳ ಕುರಿತು ಜಿಲ್ಲಾ ಸಹಕಾರಿ ನಿಭಂದಕರೇ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದರೂ ಕೂಡ ಸಿದ್ದರಾಮಯ್ಯ ಅವರ ಪ್ರಭಾವ ಬಳಿಸಿ ಎಲ್ಲರ ಬಾಯಿ ಮುಚ್ಚಿಸಲಾಗಿದೆ ಅನ್ನೋದು ವರ್ತೂರ್ ಪ್ರಕಾಶ್ ಆರೋಪ.
ಇಷ್ಟು ದಿನ ಯಾರು ಏನೇ ಪ್ರಭಾವ ಬಳಸಿ ಡಿಸಿಸಿ ಬ್ಯಾಂಕ್ ಅವ್ಯವಹಾರ ಬಯಲಾಗದಂತೆ ತಡೆದಿದ್ದರೋ ಗೊತ್ತಿಲ್ಲ ಆದರೆ ಈಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಅವರ ಪಾಪದ ಕೊಡ ತುಂಬಿದೆ ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಮಾತುಕತೆ ನಡೆಸಿದ್ದು, ಕೋಲಾರ ಡಿಸಿಸಿ ಬ್ಯಾಂಕ್ ಹಗರಣದ ವರದಿ ಇರುವ ಪೈಲ್ ವಿಧಾನಸೌಧ ಮೂರನೇ ಮಹಡಿ ತಲುಪಿದೆ, ವಿಧಾನಸಭೆ ಚುನಾವಣೆ ಒಳಗಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಜೈಲು ಪಾಲಾಗೋದು ಖಚಿತ, ಇದರಲ್ಲಿ ಯಾವುದೇ ಪ್ರಭಾವ ಬಳಸದೆ ಕಾನೂನಿನ ಪ್ರಕಾರವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವರ್ತೂರ್ ಪ್ರಕಾಶ್ ಆರೋಪಿಸಿದ್ದಾರೆ.
ಇನ್ನು ಡಿಸಿಸಿ ಬ್ಯಾಂಕ್ನಲ್ಲಿ ಸಾಲ ನೀಡುವ ವೇಳೆಯಲ್ಲೂ ಕೂಡ ಕೇವಲ ಕಾಂಗ್ರೆಸ್ ಶಾಸಕರುಗಳನ್ನು ಮುಂದಿಟ್ಟುಕೊಂಡು, ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವ ಮೂಲಕ ಡಿಸಿಸಿ ಬ್ಯಾಂಕ್ ಕೇವಲ ಕಾಂಗ್ರೇಸ್ ಪಕ್ಷಕ್ಕೆ ಸೀಮಿತವಾದ ಬ್ಯಾಂಕ್ ಎನ್ನುವಂತೆಯೂ ಇಲ್ಲಿ ನಡೆದುಕೊಳ್ಳಲಾಗುತ್ತಿದೆ. ಇದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಅವರ ಮನೆಯ ಸ್ವತ್ತಲ್ಲ, ಕೊಡುವ ಸಾಲ ಅವರಪ್ಪನ ಮನೆಯಿಂದ ಅವರ ತಾತನ ಮನೆಯಿಂದ ತಂದು ಕೊಡುತ್ತಿಲ್ಲ ಇದು ಕೇಂದ್ರ ಸರ್ಕಾರ ನಬಾರ್ಡ್ ಬ್ಯಾಂಕ್ ಮೂಲಕ ರೈತರು ಹಾಗೂ ಮಹಿಳೆಯರಿಗೆ ನೀಡುತ್ತಿರುವ ಸಾಲ ಎಂದು ಸಚಿವ ಮುನಿರತ್ನ ಬಹಿರಂಗ ವೇದಿಕೆಯಲ್ಲೇ ಆರೋಪ ಮಾಡಿದ್ದಾರೆ.
ಇನ್ನು ಡಿಸಿಸಿ ಬ್ಯಾಂಕ್ ಮೇಲಿನ ಆರೋಪ ಕೇವಲ ಬಿಜೆಪಿಗಷ್ಟೇ ಸೀಮಿತ ವಾಗಿಲ್ಲ ಬದಲಾಗಿ ಜೆಡಿಎಸ್ ಪಕ್ಷ ಹಾಗೂ ಅವರ ಮುಖಂಡರು ಕೂಡಾ ಡಿಸಿಸಿ ಬ್ಯಾಂಕ್ ಹೆಸರಲ್ಲಿ ಇಡೀ ಸಹಕಾರಿ ಕ್ಷೇತ್ರವನ್ನೇ ದುರುಪಯೋಗ ಪಡಿಸಿಕೊಂಡಿದ್ದಾರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸಾಕಷ್ಟು ಅವ್ಯವಹಾರಗಳನ್ನು ಮಾಡಿ ಎಲ್ಲೆಡೆ ತಮ್ಮ ಹಣದ ಪ್ರಭಾವ ಬಳಿಸಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ ಒಂದಲ್ಲ ಒಂದು ದಿನ ಅದು ಹೊರಗೆ ಬಂದೇ ಬರುತ್ತದೆ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಕೂಡಾ ಆರೋಪಿಸಿದ್ದಾರೆ. ಅಲ್ಲದೆ ಡಿಸಿಸಿ ಬ್ಯಾಂಕ್ ಸಾಲ ನೀಡಿ ಈಗ ಸಿದ್ದರಾಮಯ್ಯ ಅವರಿಗಾಗಿ ಮಹಿಳಾ ಸಮಾವೇಶವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ಹಲವು ವರ್ಷಗಳಿಂದ ಡಿಸಿಸಿ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಸಾಕಷ್ಟು ಬಾರಿ ಚರ್ಚೆಗೆ ಬರುತ್ತಿದೆ ಆದರೂ ಈಬಗ್ಗೆ ಧ್ವನಿ ಎತ್ತಿದವರ ಧ್ವನಿ ಬೇಗ ಅಡಗಿಹೋಗುತ್ತಿದೆ ಹಾಗಾಗಿ ಇದರಲ್ಲಿ ಏನಾದರೂ ನಡೆದಿದೆಯಾ ಅನ್ನೋದರ ಕುರಿತು ಸರ್ಕಾರ ತನಿಖೆ ನಡೆಸಿದಾಗ ಮಾತ್ರವೇ ಡಿಸಿಸಿ ಬ್ಯಾಂಕ್ ನಲ್ಲಿ ನಿಜಕ್ಕೂ ಅವ್ಯವಹಾರ ಆಗಿದ್ಯಾ ಇಲ್ಲಾವಾ ಅನ್ನೋ ಹಲವು ಅನುಮಾನಗಳಿಗೆ ತೆರೆ ಬೀಳಲು ಸಾಧ್ಯ.
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 pm, Sat, 11 February 23