ಉಚಿತ ಅನ್ನದಾನ ಸೇವೆ
ಕೋಲಾರ, ನವೆಂಬರ್ 15: ಅದು ಕಡು ಬಡವರು, ದೀನ ದಲಿತರು, ಅಸಹಾಯಕರು ಬರುವ ಸರ್ಕಾರಿ ಜಿಲ್ಲಾಸ್ಪತ್ರೆ, ಅಲ್ಲಿ ಬರುವ ರೋಗಿಗಳಿಗೆ ಉಚಿತ ಸೇವೆ ಸಿಗಬಹುದು ಆದರೆ ರೋಗಿಗಳಿಗೆ ಹಾಗೂ ರೋಗಿಗಳನ್ನ ಹಾರೈಕೆ ಮಾಡಲು ಬರುವ ಜನರಿಗೆ ಉಚಿತ ಊಟ
(Food) ಸಿಗೋದಿಲ್ಲ ಹಾಗಾಗಿ ಕೋಲಾರದಲ್ಲೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಅನ್ನದಾನ ಸೇವೆಯೊಂದು ನಿರಂತರವಾಗಿ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆ ಅಂದ್ರೆನೆ ಅಲ್ಲಿಗೆ ಬರುವವರು ಕಡು ಬಡವರು ಸಂಕಷ್ಟದಲ್ಲಿರುವವರು ಅನ್ನೋ ಖಚಿತ. ಹೀಗೆ ಸರ್ಕಾರಿ ಆಸ್ಪತ್ರೆಗಳಿಗೆ ಹೆರಿಗೆ ಸೇರಿದಂತೆ ವಿವಿದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಊಟ ಕೊಡಲಾಗುತ್ತದೆ.
ರೋಗಿಗಳನ್ನು ಹಾಗೂ ಬಾಣಂತಿಯರನ್ನು ನೋಡಿಕೊಳ್ಳಲು ಬರುವ ಜನರು ಇಲ್ಲಿ ಊಟಕ್ಕಾಗಿ ಬರದಾಡುವ ಸ್ಥಿತಿ ಇರುತ್ತದೆ. ಇದನ್ನು ಅರಿತ ಕೋಲಾರದ ವಾಸವಿ ಅನ್ನದಾನ ಸೇವಾ ಟ್ರಸ್ಟ್ ನವರು ಕಳೆದ 413 ದಿನಗಳಿಂದ ಅಂದರೆ ಒಂದು ವರ್ಷದಿಂದ ನಿತ್ಯವೂ ರೋಗಿಗಳನ್ನು ನೋಡಿಕೊಳ್ಳಲು ಬರುವ ಜನರಿಗೆ ರುಚಿಯಾದ ಶುಚಿಯಾದ ಊಟವನ್ನು ತಯಾರಿಸಿ ನೀಡಲಾಗುತ್ತಿದ್ದಾರೆ. ಯಾವುದೇ ಹಣವನ್ನು ಸ್ವೀಕರಿಸದೆ, ನಿತ್ಯವೂ ವಾಸವಿ ಅನ್ನದಾನ ಸೇವಾ ಟ್ರಸ್ಟ್ನ ಸಿಬ್ಬಂದಿಗಳೇ ವಾರ್ಡ್ಗಳಿಗೆ ಬೇಟಿ ನೀಡಿ ರೋಗಿಯ ಕಡೆಯವರಿಗೆ ಒಂದೊಂದು ಟೋಕನ್ ಕೊಟ್ಟು ಊಟಕ್ಕೆ ಬರುವಂತೆ ಅವರೇ ಸ್ವಾಗತ ಮಾಡಿ ನಂತರ ಊಟಕ್ಕೆ ಬರುವ ಜನರಿಗೆ ತಾವೇ ನಿಂತು ಹೊಟ್ಟೆ ತುಂಬ ಊಟ ಬಡಿಸುತ್ತಾರೆ ಅನ್ನೋದು ವಾಸವಿ ಅನ್ನದಾನ ಸೇವಾ ಟ್ರಸ್ಟ್ ಅಧ್ಯಕ್ಷರಾದ ಗೋವಿಂದರಾಜು ಅವರ ಮಾತು.
ನಿತ್ಯ ಶುಚಿಯಾಗಿ, ರುಚಿಯಾಗಿ, ಬಿಸಿ ಬಿಸಿಯಾಗಿ ಸಿದ್ದವಾಗುತ್ತದೆ ಊಟ!
ಕೋಲಾರ ಜಿಲ್ಲಾಸ್ಪತ್ರೆಯ ಆವರಣದಲ್ಲೇ ಇರುವ ಕ್ಯಾಂಟೀನ್ನಲ್ಲಿ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ವಾಸವಿ ಅನ್ನದಾನ ಟ್ರಸ್ಟ್ನ ಸಿಬ್ಬಂದಿಗಳು ಅಡುಗೆ ಮಾಡಲು ಬೇಕಾದ ತಯಾರಿಗಳನ್ನು ಆರಂಭಿಸುತ್ತಾರೆ. ಅದೇ ಸಮಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಹೆರಿಗೆಗೆ ಬಂದಿರುವ ಮಹಿಳೆಯರು ಮತ್ತು ರೋಗಿಗಳನ್ನು ನೋಡಿಕೊಳ್ಳಲು ಬಂದಿರುವ ಬಂದಿರುವವರಿಗೆ ಊಟಕ್ಕೆ ಬರುವಂತೆ ಟೋಕನ್ ಕೊಟ್ಟು ಸ್ವಾಗತ ಮಾಡಲಾಗುತ್ತದೆ.
ಮಧ್ಯಾಹ್ನ 1.30ರ ಹೊತ್ತಿಗೆ ಊಟ ಸಿದ್ದವಾಗಿರುತ್ತದೆ. ಆ ವೇಳೆಗೆ ಬರುವ ನೂರಾರು ಜನರಿಗೆ ರುಚಿಯಾದ ಹಾಗೂ ಶುಚಿಯಾದ ಊಟವನ್ನು ಹೊಟ್ಟೆ ತುಂಬ ಬಡಿಸುತ್ತಾರೆ. ನಿತ್ಯ ಅನ್ನ, ಸಾಂಬಾರ್, ಮಜ್ಜಿಗೆ, ಉಪ್ಪಿನಕಾರಯಿ, ಪಾಯಸ ಮಾಡಿ ಬಡಿಸುತ್ತಾರೆ.
ವಾಸವಿ ಸೇವಾ ಟ್ರಸ್ಟ್ನ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗೌರವ!
ವಾಸವಿ ಅನ್ನದಾನ ಟ್ರಸ್ಟ್ ಹೀಗೆ ಕಳದ ಒಂದುವರ್ಷಕ್ಕೂ ಅಧಿಕ ಸಮಯದಿಂದ ನಿತ್ಯ ಅನ್ನದಾನ ಸೇವೆಯನ್ನು ಪರಿಗಣಿಸಿ ಈಬಾರಿ ಜಿಲ್ಲಾಡಳಿತ ವಾಸವಿ ಅನ್ನದಾನ ಟ್ರಸ್ಟ್ನ ಅಧ್ಯಕ್ಷರಾದ ಗೋವಿಂದರಾಜು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನಿ ನೀಡಿ ಗೌರವಿಸಿದೆ. ಅಲ್ಲದೆ ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ಗಣ್ಯರು ಇಲ್ಲಿಗೆ ಬಂದು ತಮ್ಮ ಕೈಲಾದ ಸೇವೆ ಮಾಡಿ ಹೋಗಿದ್ದಾರೆ.
ಇನ್ನು ಇದೇ ವಾಸವಿ ಅನ್ನದಾನ ಟ್ರಸ್ಟ್ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ನಿಮ್ಹಾನ್ಸ್ ಆಸ್ಪತ್ರೆ, ಹಾಗೂ ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡಾ ಇದೇ ರೀತಿಯ ಅನ್ನದಾನ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಸದ್ಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ವಾಸವಿ ಅನ್ನದಾನ ಸೇವಾ ಟ್ರಸ್ಟ್ ನವರು ಮಾಡುತ್ತಿರುವ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅನ್ನದಾತೋ ಸುಖಿಭವ ಎನ್ನುವಂತೆ ವಾಸವಿ ಅನ್ನದಾನ ಸೇವಾ ಟ್ರಸ್ಟ್ ಹೀಗೆ ಅನ್ನದಾನದ ಮೂಲಕ ಮಾಡುತ್ತಿರುವ ನಿಸ್ವಾರ್ಥ ಸೇವೆ, ಅನಾರೋಗ್ಯದಿಂದ, ಬೇರೆ ಬೇರೆ ಕಾರಣದಿಂದ ಆಸ್ಪತ್ರೆಗೆ ಬರುವ ಅದೆಷ್ಟೊ ಜನ ಹಸಿದವರ ಹಸಿವು ನೀಗಿಸುತ್ತಿದೆ. ಈ ಸೇವೆಗೆ ಮತ್ತಷ್ಟು ಶಕ್ತಿಕೊಟ್ಟು ಈ ಸೇವೆ ಮತ್ತಷ್ಟು ಜನರಿಗೆ ಸಿಗಲಿ ಅನ್ನೋದು ನಮ್ಮ ಆಶಯ.