KGF Township: ಚಿನ್ನದ ನಾಡಿಗೆ ಚಿನ್ನದಂತಹ ಭರವಸೆ -23 ವರ್ಷಗಳ ನಂತರ ಆ ಯೋಜನೆಯ ಘೋಷಣೆ, ಹೊಸ ಆಶಾಭಾವ ಮೂಡಿಸಿದೆ! ಏನದು? ವಿವರ ಇಲ್ಲಿದೆ
ಒಟ್ಟಾರೆ ಚಿನ್ನದ ಗಣಿ ಮುಚ್ಚಿದ ನಂತರ ಸಾವಿರಾರು ಕುಟುಂಬಗಳು ಕೆಲಸಕ್ಕಾಗಿ ದೂರದ ಊರುಗಳಿಗೆ ಹೋಗುತ್ತಿವೆ, ಈಗ ಸರ್ಕಾರದ ಹೊಸ ಘೋಷಣೆ ಕಾರ್ಮಿಕರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ಸರ್ಕಾರ ನಿಜಕ್ಕೂ ಕೈಗಾರಿಕಾ ವಲಯ ಹಾಗೂ ಟೌನ್ಶಿಪ್ ಮಾಡಿದ್ದೇ ಅದಲ್ಲಿ ಕೆಜಿಎಫ್ನಲ್ಲಿ ಮತ್ತೊಂದು ಸುವರ್ಣಯುಗಕ್ಕೆ ಮೈಲಿಗಲ್ಲು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅದು ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಚಿನ್ನ (Gold) ಕೊಟ್ಟಂತಹ ಜಿಲ್ಲೆ, ಚಿನ್ನ ಬರಿದಾದಂತೆ ಸಾವಿರಾರು ಕಾರ್ಮಿಕರು ಬೀದಿ ಪಾಲಾದರು, ಚಿನ್ನದ ಗಣಿಗೆ ಬೀಗ ಹಾಕಲಾಯಿತು, ಆದರೆ ಹಲವು ವರ್ಷಗಳ ನಂತರ ತುಕ್ಕುಹಿಡಿದಿದ್ದ ಚಿನ್ನದ ನಾಡಲ್ಲಿ 23 ವರ್ಷಗಳ ನಂತರ ಅದೊಂದು ಯೋಜನೆಯ ಘೋಷಣೆ ಹೊಸದೊಂದು ಆಶಾಭಾವನೆ ಮೂಡಿಸಿದೆ. ಕೆಜಿಎಫ್ ಚಿನ್ನದ ಗಣಿಗೆ ಸೇರಿದ ಸಾವಿರಾರು ಎಕರೆ ಖಾಲಿ ಜಾಗ, ಖಾಲಿ ಜಾಗವನ್ನು ಅವರ ಬೆಂಬಲಿಗರೊಂದಿಗೆ ಪರಿಶೀಲನೆ ಮಾಡುತ್ತಿರುವ ಶಾಸಕಿ, ಮತ್ತೊಂದೆಡೆ ಕೋಲಾರದಲ್ಲಿ ನಡೆದ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದ ಚಿನ್ನದ ನಾಡಿನಲ್ಲಿ ಹೊಸ ಕೈಗಾರಿಕಾ ಟೌನ್ಶಿಪ್ (KGF Township) ನಿರ್ಮಾಣದ ಘೋಷಣೆ ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್ನಲ್ಲಿ.
ಹೌದು ಕೋಲಾರ ಜಿಲ್ಲೆ ಕೆಜಿಎಫ್ ನಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಶಾಸಕಿ ರೂಪಕಲಾ ಹಲವು ಬಾರಿ ಮನವಿ ಮಾಡಿದ್ದರು, ಸದನದಲ್ಲೂ ಚರ್ಚೆ ಮಾಡಿದ್ದರು, ಆದರೆ ಆದರೆ ಬಿಜೆಪಿ ಸರ್ಕಾರದಲ್ಲಿ ಸಾಧ್ಯವಾಗಿರಲಿಲ್ಲ. ಆದರೆ ನೂತನ ಕಾಂಗ್ರೆಸ್ ಸರ್ಕಾರ ಸ್ಪಂದಿಸಿ ಕೆಜಿಎಫ್ ನಲ್ಲಿ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಟೌನ್ ಶಿಫ್ ಮಾಡಲು ಬಜೆಟ್ ನಲ್ಲಿ ಅನುಮೋದನೆ ನೀಡಿತ್ತು.
ಅದರ ಜೊತೆಗೆ ಕೋಲಾರದಲ್ಲಿ ನಡೆದ ಯರಗೋಳ್ ನೀರಾವರಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ವತ: ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡುವ ಮೂಲಕ ಕೆಜಿಎಫ್ ಭಾಗದ ನಿರುದ್ಯೋಗಿಗಳ ಪಾಲಿಗೆ ಹೊಸದೊಂದು ಆಶಾಭಾವನೆ ಮೂಡುವಂತೆ ಮಾಡಿದ್ದಾರೆ. ಹೌದು 2001 ರಲ್ಲಿ ಬಿಜಿಎಂಎಲ್ ಕಾರ್ಖಾನೆ ಮುಚ್ಚಿದ ನಂತರ ಸಾವಿರಾರು ಕಾರ್ಮಿಕರು ಬೀದಿಪಾಲಾಗಿದ್ದಾರೆ.
Also read: ಕೋಲಾರ ರಸ್ತೆ ಅಗಲೀಕರಣ ವೇಳೆ ಕೆಜಿಎಫ್ ಶಾಸಕಿ ಮೇಲೆ ಕಲ್ಲು ತೂರಲು ಯತ್ನ
ಪ್ರತಿದಿನ ಸುಮಾರು 25 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರು, ಮಹಿಳೆಯರು ಕೂಲಿ ಕಾರ್ಮಿಕರು, ಉದ್ಯೋಗ ಹರಿಸಿಕೊಂಡು ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಹೀಗಿರುವಾಗ ಬಿಜಿಎಂಎಲ್ ಗೆ ಸೇರಿದ 1 ಸಾವಿರ ಜಾಗವನ್ನು ಕೈಗಾರಿಕಾ ವಲಯವನ್ನಾಗಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ ಘೋಷಣೆ ಕೆಜಿಎಫ್ ಭಾಗದ ಜನರಿಗೆ ಸಂತಸ ತಂದಿದೆ.
ಇನ್ನು ಕೆಜಿಎಫ್ ಬಿಜಿಎಂಎಲ್‌ಗೆ ನೀಡಿದ್ದ 973.24 ಎಕರೆ ಭೂಮಿಯನ್ನು ಸದ್ಯ ಕಂದಾಯ ಇಲಾಖೆ ವಾಪಸ್ಸು ಪಡೆದಿದ್ದು ಈ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಇಲ್ಲಿನ ಸಾವಿರಾರು ಕಾರ್ಮಿಕರಿಗೆ ಆಸರೆಯಾಗಬೇಕೆಂದು ಬೇಡಿಕೆ ಇಡಲಾಗಿತ್ತು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರ ಮೊದಲ ಬಜೆಟ್ ನಲ್ಲಿ ಕೆಜಿಎಫ್ ನ್ನು ಇಂಟಿಗ್ರೇಟೆಡ್ ಟೌನ ಶಿಫ್ ಮಾಡಲು ಅಸ್ತು ಅನುಮತಿ ನೀಡಿತ್ತು. ಅದಾದ ನಂತರ ಸಿಎಂ ಆದ ಬಳಿಕ ಮೊದಲ ಬಾರಿಗೆ ಕೋಲಾರಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು ಕೆಜಿಎಫ್ ಶಾಸಕಿ ರೂಪಕಲಾ ಅವರ ಸಮ್ಮುಖದಲ್ಲೇ ಕೈಗಾರಿಕಾ ವಲಯ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕಿ ರೂಪಕಲಾ ಅವರು ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವೇದಿಕೆ ಮೇಲೆಯೇ ಅವರ ಕಾಲಿಗೆ ನಮಸ್ಕರಿಸಿ ಯೋಜನೆಯನ್ನು ಆದಷ್ಟು ಬೇಗನೇ ಜಾರಿಗೊಳಿಸಿ ಅಭಿವೃದ್ದಿ ಪಡಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಅಂದುಕೊಂಡಂತೆ ಕೈಗಾರಿಕಾ ವಲಯ ಸ್ಥಾಪನೆ ಮಾಡಿದ್ದೇ ಆದಲ್ಲಿ ನಿಜಕ್ಕೂ ಕೆಜಿಎಫ್ ನಲ್ಲಿ ಚಿನ್ನದ ಗಣಿಯ ಸಮಯದಲ್ಲಿ ಇದ್ದಂತ ಸುವರ್ಣ ಇತಿಹಾಸ ಮತ್ತೆ ಮರುಕಳಿಸೋದರಲ್ಲಿ ಅನುಮಾನವಿಲ್ಲ. ಅನ್ನೋದ ಶಾಸಕಿ ರೂಪಕಲಾ ಅವರ ಮಾತು.
ಒಟ್ಟಾರೆ ಚಿನ್ನದ ಗಣಿ ಮುಚ್ಚಿದ ನಂತರ ಸಾವಿರಾರು ಕುಟುಂಬಗಳು ಕೆಲಸಕ್ಕಾಗಿ ದೂರದ ಊರುಗಳಿಗೆ ಹೋಗುತ್ತಿವೆ, ಈಗ ಸರ್ಕಾರದ ಹೊಸ ಘೋಷಣೆ ಕಾರ್ಮಿಕರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ಸರ್ಕಾರ ನಿಜಕ್ಕೂ ಕೈಗಾರಿಕಾ ವಲಯ ಹಾಗೂ ಟೌನ್ಶಿಪ್ ಮಾಡಿದ್ದೇ ಅದಲ್ಲಿ ಕೆಜಿಎಫ್ನಲ್ಲಿ ಮತ್ತೊಂದು ಸುವರ್ಣಯುಗಕ್ಕೆ ಮೈಲಿಗಲ್ಲು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:56 am, Mon, 13 November 23